ಮಾನವನ ದುರಾಸೆಯ ಫಲವಾಗಿ ಕಾಡಿನ ನಾಶ ಉಂಟಾಗಿದೆ. ಕಾಡು ಪ್ರಾಣಿಗಳ ಆನೆ, ಚಿರತೆ, ಹುಲಿ ಮೊದಲಾದ ವನ್ಯ ಪ್ರಾಣಿಗಳು ಆಹಾರ ಅರಸಿ ಗ್ರಾಮಗಳಿಗೆ ವಲಸೆ ಬರುತ್ತಿವೆ. ಇದರಿಂದಾಗಿ ಸಾವು ನೋವು ಉಂಟಾಗುತ್ತಿದೆ. ಗದ್ದೆ, ತೋಟಗಳಲಿ ಕೆಲಸ ಮಾಡುವ ಜನರ ಮೇಲೆ ಕಾಡು ಪ್ರಾಣಿಗಳು ಭೀಕರ ದಾಳಿ ನಡೆಸುತ್ತಿವೆ.
ಕನ್ನಡಪ್ರಭ ವಾರ್ತೆ ಮೈಸೂರು
ಪರಿಸರ ವಿನಾಶದ ತಡೆಗಟ್ಟದಿದ್ದರೆ ಭವಿಷ್ಯದಲ್ಲಿ ಮಾನವ ಜನಾಂಗದ ವಿನಾಶ ಖಚಿತ ಎಂದು ಸಾಹಿತಿ ಭೇರ್ಯ ರಾಮಕುಮಾರ್ ಎಚ್ಚರಿಕೆ ನೀಡಿದರು.
ಕೆ.ಆರ್.ನಗರ ತಾಲೂಕಿನ ಬ್ಯಾಡರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮೈಸೂರಿನ ಪೂರ್ಣ ಚಂದ್ರ ತೇಜಸ್ವಿ ತಪೋವನ ಸಂಸ್ಥೆಯು ಏರ್ಪಡಿಸಿದ್ದ ಸಮಾರಂಭದಲ್ಲಿ 2026 ನೇ ಸಾಲಿನ ಪೂರ್ಣ ಚಂದ್ರ ತೇಜಸ್ವಿ ರಾಜ್ಯ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಮಾನವನ ದುರಾಸೆಯ ಫಲವಾಗಿ ಕಾಡಿನ ನಾಶ ಉಂಟಾಗಿದೆ. ಕಾಡು ಪ್ರಾಣಿಗಳ ಆನೆ, ಚಿರತೆ, ಹುಲಿ ಮೊದಲಾದ ವನ್ಯ ಪ್ರಾಣಿಗಳು ಆಹಾರ ಅರಸಿ ಗ್ರಾಮಗಳಿಗೆ ವಲಸೆ ಬರುತ್ತಿವೆ. ಇದರಿಂದಾಗಿ ಸಾವು ನೋವು ಉಂಟಾಗುತ್ತಿದೆ. ಗದ್ದೆ, ತೋಟಗಳಲಿ ಕೆಲಸ ಮಾಡುವ ಜನರ ಮೇಲೆ ಕಾಡು ಪ್ರಾಣಿಗಳು ಭೀಕರ ದಾಳಿ ನಡೆಸುತ್ತಿವೆ. ಇದರಿಂದಾಗಿ ಜನರು ಭೀತಿಯಲ್ಲಿ ಬದುಕುವ ಪರಿಸ್ಥಿತಿ ತಲೆದೋರಿದೆ. ಇದಕ್ಕೆ ಕಾಡಿನ ವಿನಾಶವೆ ಕಾರಣ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಕಾಡಿನ ವಿನಾಶದ ಫಲವಾಗಿ ಪರಿಸರ ಅಸಮತೋಲನ ಉಂಟಾಗಿದೆ. ಆಗ್ಗಾಗ್ಗೆ ಉಂಟಾಗುತ್ತಿರುವ ಭೀಕರ ಪ್ರವಾಹ ಪರಿಸ್ಥಿತಿ, ಬರ ಪರಿಸ್ಥಿತಿ ಜನಜೀವನದ ಮೇಲೆ ಭೀಕರ ಪರಿಣಾಮ ಉಂಟು ಮಾಡುತ್ತಿದೆ. ಮರಗಳ ನಾಶದಿಂದಾಗಿ ಶುದ್ಧ ಗಾಳಿಯ ಕೊರತೆ ಉಂಟಾಗಿ ಜನರು ಹೃದಯದ ಕಾಯಿಲೆಗೆ ಒಳಗಾಗಿ ಸಾವು ನೋವಿಗೆ ಒಳಗಾಗುತ್ತಿದ್ದಾರೆ.ಮನುಷ್ಯನ ದೇಹದಲ್ಲಿ ಕಾಯಿಲೆಗಳನ್ನು ಎದುರಿಸುವ ಶಕ್ತಿ ಕಡಿಮೆ ಆಗುತ್ತಿದೆ ಎಂದು ಭೇರ್ಯ ರಾಮಕುಮಾರ ಆತಂಕ ವ್ಯಕ್ತಪಡಿಸಿದರು.
ಪರಿಸರ ಸಂರಕ್ಷಣೆ ಕೇವಲ ಸರ್ಕಾರದ ಕಾರ್ಯವಲ್ಲ. ಇದು ಪ್ರತಿಯೊಬ್ಬರ ಜವಾಬ್ದಾರಿ ಎಂದು ನುಡಿದ ಅವರು ಪ್ರತಿಯೊಬ್ಬರೂ ತಮ್ಮ ಜನ್ಮದಿನದಂದು, ತಮ್ಮ ತಂದೆ ತಾಯಿಗಳ ಜನ್ಮದಿನದಂದು, ತಮ್ಮ ಹಿರಿಯರ ನೆನಪಿನಲ್ಲಿ ಪ್ರತಿ ವರ್ಷವೂ ಒಂದೊಂದು ಸಸಿಗಳನ್ನು ನೀಡಬೇಕು. ಆ ಮೂಲಕ ಪರಿಸರ ಸಂರಕ್ಷಿಸಬೇಕು ಎಂದು ಕರೆ ನೀಡಿದರು.
ಎಲ್ಲರಿಂದಲೂ ಪರಿಸರ ಸಂರಕ್ಷಿಸುವ ಪ್ರತಿಜ್ಞೆ ಮಾಡಿಸಿದರು.
ಬ್ಯಾಡರಹಳ್ಳಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಭವ್ಯಾ, ಶಾಲೆಯ ಮುಖ್ಯ ಶಿಕ್ಷಕ ಮಂಜುನಾಥ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕುಮಾರ್ ಮಾತನಾಡಿದರು. ತೇಜಸ್ವಿ ತಪೋವನ ಸಂಸ್ಥೆ ಉಪಾಧ್ಯಕ್ಷ ಸ್ವಾಮಿಗೌಡ ಅಧ್ಯಕ್ಷತೆ ವಹಿಸಿದ್ದರು.ಸಂಸ್ಥೆಯ ಅಧ್ಯಕ್ಷ ಕೃಷ್ಣಯ್ಯ, ಸಂಸ್ಥೆಯ ಉದ್ದೇಶಗಳ ಪರಿಚಯ ಮಾಡಿಕೊಟ್ಟರು. ಶಾಲೆಯ ಆವರಣದಲ್ಲಿ ಸುಮಾರು ನೂರು ಸಸಿಗಳನ್ನು ನೆಡಲಾಯಿತು. ಶಿಕ್ಷಕರ ದಿನಾಚರಣೆ ಅಂಗವಾಗಿ ಶಾಲೆಯ ಶಿಕ್ಷಕರನ್ನು ಅಭಿನಂದಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.