ಕನ್ನಡಪ್ರಭ ವಾರ್ತೆ ನಾಗಮಂಗಲ
ಗ್ರಾಪಂ ಕೇಂದ್ರ ಸ್ಥಾನದಲ್ಲಿ ಸ್ವಚ್ಛತೆ ಕಾಪಾಡುವ ಜೊತೆಗೆ ರಸ್ತೆ, ಚರಂಡಿ, ಬೀದಿ ದೀಪ ಸೇರಿದಂತೆ ಕನಿಷ್ಠ ಮೂಲಕ ಸೌಕರ್ಯ ಕಲ್ಪಿಸುವಲ್ಲಿ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ವಿಫಲರಾಗಿದ್ದಾರೆಂದು ಆರೋಪಿಸಿ ತಾಲೂಕಿನ ಹೊನ್ನಾವರ ಗ್ರಾಪಂ ಕಚೇರಿಗೆ ಕೆಲ ಹೊತ್ತು ಬೀಗ ಹಾಕಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.ಬುಧವಾರ ಬೆಳಗ್ಗೆ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು, ಅಧಿಕಾರಿಗಳು ಮತ್ತು ಸದಸ್ಯರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಬಳಿಕ ಕಚೇರಿಗೆ ಬೀಗ ಜಡಿದು ತಾಪಂ ಇಒ ಅವರು ಖುದ್ದು ಸ್ಥಳಕ್ಕಾಗಮಿಸಿ ಗ್ರಾಮಸ್ಥರ ಸಮಸ್ಯೆ ಆಲಿಸುವ ಜೊತೆಗೆ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು.
ಗ್ರಾಮದಲ್ಲಿ ಸರಿಯಾದ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಇಲ್ಲ. ಇದರಿಂದ ಮನೆ ಮತ್ತು ಕೊಟ್ಟಿಗೆಯ ನೀರು ರಸ್ತೆಗಳಲ್ಲಿಯೇ ಹರಿದು ಅನೈರ್ಮಲ್ಯ ತುಂಬಿ ತುಳುಕುತ್ತಿದೆ. ಸಮರ್ಪಕ ರಸ್ತೆ ಮತ್ತು ಚರಂಡಿ ನಿರ್ಮಿಸುವಂತೆ ಹಲವು ಬಾರಿ ಮನವಿ ಮಾಡಿಕೊಂಡರೂ ಕೂಡ ಅಧಿಕಾರಿಗಳಾಗಲಿ ಅಥವಾ ಚುನಾಯಿತ ಪ್ರತಿನಿಧಿಗಳಾಗಲಿ ಯಾವುದೇ ಕ್ರಮವಹಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸೌಜನ್ಯಕ್ಕಾದರೂ ಗ್ರಾಮದ ರಸ್ತೆಗಳಲ್ಲಿ ಸಂಚರಿಸಿ ವಸ್ತುಸ್ಥಿತಿ ನೋಡಿಲ್ಲ. ಆದ್ದರಿಂದ ಗ್ರಾಮ ವ್ಯಾಪ್ತಿಯಲ್ಲಿ ಮೂಲ ಸೌಕರ್ಯ ಒದಗಿಸುವವರೆಗೂ ಗ್ರಾಮಸಭೆ ನಡೆಸಬಾರದೆಂದು ಎಚ್ಚರಿಕೆ ನೀಡಿದರು.
ನರೇಗಾ ಯೋಜನೆಯಡಿ ನಿರ್ಮಿಸಿರುವ ದನದ ಕೊಟ್ಟಿಗೆ ಬಿಲ್‌ನ ಹಣವನ್ನು ಅರ್ಹ ಫಲಾನುಭವಿಗಳ ಖಾತೆಗಳಿಗೆ ಹಾಕುವ ಬದಲು ತಮಗೆ ಬೇಕಾದವರ ಖಾತೆಗೆ ಹಣ ಹಾಕಿಸಿದ್ದಾರೆ. ಫಲಾನುಭವಿಗಳು ಹಣ ಕೇಳಲು ಹೋದರೆ ಕಳೆದ ಎಂಟು ತಿಂಗಳಿಂದ ಕುಂಟು ನೆಪ ಹೇಳುತ್ತಾರೆ. ಪ್ರಶ್ನಿಸಿದರೆ ಪೊಲೀಸರಿಗೆ ದೂರು ನೀಡಿ ಎಂದು ಬೇಜಾಬ್ದಾರಿಯಿಂದ ವರ್ತಿಸುತ್ತಾರೆ ಎಂದು ಕಿಡಿಕಾರಿದರು.ನರೇಗಾ ಬಿಲ್ ಪಾವತಿಸುವಲ್ಲಿ ಭಾರಿ ಅಕ್ರಮ ನಡೆಸಲಾಗಿದೆ ಎಂದು ಆರೋಪಿಸಿ ಗ್ರಾಪಂ ಮುಂಭಾಗ ತಮ್ಮ ರಾಸುಗಳನ್ನು ಕಟ್ಟಿಕೊಂಡು ಪ್ರತಿಭಟನೆ ನಡೆಸಿದರು.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ತಾಪಂ ಇಒ ಸತೀಶ್ ಮಾತನಾಡಿ, ನರೇಗಾ ಯೋಜನೆಯಲ್ಲಿ ನಿಯಮ ಇರುವುದರಿಂದ ತಕ್ಷಣವೇ ಕಾಮಗಾರಿಗಳನ್ನು ಕ್ರಿಯಾ ಯೋಜನೆಗೆ ಸೇರಿಸಿಕೊಂಡು ಅನುದಾನ ಬಂದ ನಂತರ ನಿಯಮಾನುಸಾರವಾಗಿ ಆದ್ಯತೆಯಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಕ್ರಮವಹಿಸಲಾಗುವುದು ಎಂದರು.ಗ್ರಾಮದಲ್ಲಿನ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಬಗೆಹರಿಸಲಾಗುವುದು. ಸ್ವಚ್ಛತೆ, ಬೀದಿದೀಪ ಸೇರಿದಂತೆ ಮುಂತಾದ ಕೆಲಸಗಳನ್ನು ಕೈಗೆತ್ತಿಕೊಳ್ಳು ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಭರವಸೆ ನೀಡಿದ ನಂತರ ಬುಧವಾರ ನಿಗಧಿಯಾಗಿದ್ದ ಗ್ರಾಮಸಭೆ ನಡೆಯಿತು.
ಗ್ರಾಮದ ದರ್ಶನ್ ಹಾಗೂ ಗೀತಾ ಗ್ರಾಪಂ ಆಡಳಿತದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಸ್ಥರಾದ ಪ್ರಭಾಕರ್, ಆಕಾಶ್, ವರಲಕ್ಷ್ಮೀ, ಗೀತಾ, ಪದಮ್ಮ, ಯತೀಶ್, ಪುನೀತ್, ಪವನ್, ಸುರೇಶ್, ಮಂಜುನಾಥ್, ಲೋಕೇಶ್, ಮಾಸ್ಟರ್ ನರಸಿಂಹಮೂರ್ತಿ, ಗುರುರಾಜ್, ಮಹೇಶ್, ಅಜಯ್, ಅಭಿ ಸೇರಿದಂತೆ ನೂರಾರು ಮಂದಿ ಇದ್ದರು.