ಶ್ರೀ ದುರ್ಗಾ ಪರಮೇಶ್ವರಿ ಮತ್ತು ಶ್ರೀ ನಾಗದೇವರ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ಸಂಪನ್ನ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರತಾಲೂಕಿನ ಹೊನ್ನೇಕೊಡಿಗೆ ಗ್ರಾಪಂ ವ್ಯಾಪ್ತಿಯ ಹಂದೂರು ಗ್ರಾಮದ ಚಿಕ್ಕಂದೂರು ಶ್ರೀ ವೀರಭದ್ರೇಶ್ವರ ಹಾಗೂ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ 3 ದಿನಗಳ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ಹಾಗೂ ಜಾತ್ರಾ ಮಹೋತ್ಸವ ನಡೆಯಿತು.
ಗುರುವಾರ ಪುರೋಹಿತರಾದ ಜಗದೀಶ ಭಟ್, ರಾಘವೇಂದ್ರ ಭಟ್,ಎಂ.ಸಿ. ಗುರುಶಾಂತಪ್ಪ ನೇತೃತ್ವದಲ್ಲಿ ಶ್ರೀ ದುರ್ಗಾ ಪರಮೇಶ್ವರಿ ಮತ್ತು ಶ್ರೀ ನಾಗದೇವರ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ಜರುಗಿತು. ನೇತ್ರೋನ್ಮಿಲನ, ಪ್ರಾಣ ಪ್ರತಿ ಷ್ಠಾಪನೆ, ಪ್ರತಿಷ್ಠಾ ಕಲಶಾಭಿಷೇಕ, ಪ್ರತಿಷ್ಠಾ ಹೋಮ, ಅಧಿವಾಸ ಹೋಮ,ಮಹಾ ಮಂಗಳಾರತಿ, ಮಹಾ ಪೂರ್ಣಾಹುತಿ, ಶ್ರೀ ದೇವರಿಗೆ ಪ್ರಧಾನ ಕುಂಭಾಭಿಷೇಕ, ಪ್ರಧಾನ ಮಹಾ ಪೂಜೆ ಹಾಗೂ ವಿಶೇಷ ಅಲಂಕಾರದೊಂದಿಗೆ ಮಂಗಳದ್ರವ್ಯ ಸೇವೆ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಯೋಗ ನಡೆಯಿತು. ಮಧ್ಯಾಹ್ನ ಎಲ್ಲಾ ಭಕ್ತಾಧಿಗಳಿಗೂ ಅನ್ನ ಸಂತರ್ಪಣಾ ಕಾರ್ಯಕ್ರಮ ಜರುಗಿತು. ಸಂಜೆ 5 ಗಂಟೆಗೆ ಸರ್ವ ಪ್ರಾಯಶ್ಚಿತ್ತ ಆಶ್ಲೇಷ ಬಲಿ ಸೇವೆ, ಶ್ರೀ ವೀರಭದ್ರಸ್ವಾಮಿ ಮತ್ತು ಪರಿವಾರ ದೇವರುಗಳ ಕಳಶ ಪ್ರತಿಷ್ಠಾಪನಾ ಪೂರ್ವಕ ಕಲ್ಪೋಕ್ತ ಪೂಜೆ ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಿತು.ಶುಕ್ರವಾರ 9 ಗಂಟೆಯಿಂದ ಪರಿವಾರ ಸಹಿತ ಶ್ರೀ ವೀರಭದ್ರ ಸ್ವಾಮಿಗೆ ವಾರ್ಷಿಕೋತ್ಸವ ಪ್ರಯುಕ್ತ ಕಲಾ ಸಾನಿಧ್ಯ ಹೋಮ, ಬಿಲ್ವಾರ್ಚನೆ, ಭಸ್ಮಾರ್ಚನೆ, ಕ್ಷೀರಾಭಿಷೇಕ, ಫಲ ಪಂಚಾಮೃತ ಅಭಿಷೇಕ, ಪ್ರಧಾನ ಕಂಭಾಭಿಷೇಕ, ಮಹಾ ಪೂಜೆ, ನೈವೇದ್ಯೆ ಸೇವೆ, ಸಾನಿಧ್ಯ ಸೇವೆ, ಕ್ಷೇತ್ರಪಾಲ ಬಲಿ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಸಾರ್ವಜನಿಕ ಅನ್ನ ಸಂತರ್ಪಣಾ ಕಾರ್ಯಕ್ರಮಗಳು ನಡೆಯಿತು.ಶನಿವಾರ ಬೆಳಗಿನ ಜಾವ ಶ್ರೀ ವೀರಭದ್ರ ಸ್ವಾಮಿಗೆ ಕೆಂಡಾರ್ಚನೆ ನೆರವೇರಲಿದೆ. ಬೆಳಿಗ್ಗೆ 6.30 ಗಂಟೆಗೆ ಶ್ರೀ ವೀರಭದ್ರ ಸ್ವಾಮಿ ಹಾಗೂ ಪರಿವಾರ ದೇವರಿಗೆ ವಿಶೇಷ ಪೂಜೆಯೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ. 3 ದಿನಗಳ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಶ್ರೀ ವೀರಭದ್ರಸ್ವಾಮಿ ಹಾಗೂ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಸಮಿತಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.