ಕನ್ನಡಪ್ರಭ ವಾರ್ತೆ ಸಾಗರ
ಶ್ರೀಮಾರಿಕಾಂಬಾ ದೇವಿಯ ದರ್ಶನ ಪಡೆದು ನಗರಸಭೆ ಆವರಣದ ಮಾರಿಕಾಂಬಾ ಕಲಾ ವೇದಿಕೆಯಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಾಸಕ ಬೇಳೂರು ನೇತೃತ್ವದಲ್ಲಿ ಜಾತ್ರೆಯು ಅಚ್ಚುಕಟ್ಟಾಗಿ ನಿರ್ವಹಣೆಯಾಗಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ ಎಂದರು.
ಜಾತ್ರೆ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಆಗದಂತೆ ಎಲ್ಲ ಕಾರ್ಯಚಟುವಟಿಕೆ ನಡೆದಿದೆ. ಅಮ್ಮನವರ ದರ್ಶನಕ್ಕೆ ಪ್ರತಿದಿನ ಲಕ್ಷಾಂತರ ಜನರು ಬಂದು ಸೇರಿದ್ದು ಇತಿಹಾಸ ನಿರ್ಮಿಸಿದೆ. ಈ ಬಾರಿ ಸಾಗರ ಜಾತ್ರೆಯಲ್ಲಿ ವಿಶೇಷವಾಗಿ ಹೆಲಿ ಟೂರಿಸಂಗೆ ಅವಕಾಶ ಕಲ್ಪಿಸಿದ್ದು ನನಗೆ ತೀರಾ ಸಂತೋಷ ತಂದಿದೆ. ಜನಸಾಮಾನ್ಯರೂ ಹೆಲಿಕ್ಯಾಪ್ಟರ್ ಹತ್ತಲು ಅವಕಾಶ ಕಲ್ಪಿಸಿದಂತಾಗಿದೆ ಎಂದು ಹೇಳಿದರು.ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಕ್ಷೇತ್ರದ ಶಾಸಕನಾಗಿ, ಸಮಿತಿಯ ಗೌರವಾಧ್ಯಕ್ಷನಾಗಿ ಜಾತ್ರೆಯನ್ನು ಅದ್ಧೂರಿಯಾಗಿ ನಡೆಸಬೇಕು ಎನ್ನುವ ನನ್ನ ಅಭಿಲಾಷೆ ಈಡೇರಿದೆ. ಈ ಬಾರಿ ಹಿಂದಿನ ಎಲ್ಲ ವರ್ಷಗಳಿಗಿಂತ ದಾಖಲೆ ಪ್ರಮಾಣದಲ್ಲಿ ಭಕ್ತರು ಅಮ್ಮನವರ ದರ್ಶನ ಪಡೆದಿದ್ದಾರೆ. ಇದು ಜನರ ಜಾತ್ರೆ, ಊರಿನ ಜಾತ್ರೆ, ಎಲ್ಲರೂ ಸೇರಿ ಒಟ್ಟಾಗಿ ಆಚರಿಸಿದ್ದೇವೆ ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್ ಮಾತನಾಡಿದರು. ಪ್ರತಿಷ್ಠಾನದ ಅಧ್ಯಕ್ಷ ಕೆ.ಎನ್.ನಾಗೇಂದ್ರ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಉಪಾಧ್ಯಕ್ಷ ಸುಂದರ ಸಿಂಗ್, ಪ್ರಧಾನ ಕಾರ್ಯದರ್ಶಿ ಗಿರಿಧರ ರಾವ್, ಸಹ ಕಾರ್ಯದರ್ಶಿ ಎಸ್.ವಿ.ಕೃಷ್ಣಮೂರ್ತಿ, ಖಜಾಂಚಿ ನಾಗೇಂದ್ರ ಕುಮಟಾ, ಸಮಿತಿ ಸಂಚಾಲಕರು, ವಿವಿಧ ಸಮಿತಿ ಸಂಚಾಲಕರು, ಸದಸ್ಯರು ಹಾಜರಿದ್ದರು.