ಪಡಿತರ ವಿತರಣೆಗೆ ನ್ಯಾಯಬೆಲೆ ಅಂಗಡಿಕಾರರ ಪರದಾಟ

KannadaprabhaNewsNetwork |  
Published : Sep 02, 2026, 03:30 AM IST
ಸಾಂದರ್ಭಿಕ ಚಿತ್ರ. | Kannada Prabha

ಸಾರಾಂಶ

ಸರ್ಕಾರವು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 11.30ರ ವರೆಗೆ ಅಂಗಡಿಗಳನ್ನು ತೆರೆದಿಡುವಂತೆ ಸೂಚನೆ ನೀಡಿರುವುದು ಅವೈಜ್ಞಾನಿಕವಾಗಿದೆ.

ಕಾರವಾರ: ತಾಲೂಕಿನಲ್ಲಿ ಪಡಿತರ ವಿತರಣೆ ವ್ಯವಸ್ಥೆಯು ಸರ್ವರ್ ಸಮಸ್ಯೆಯಿಂದಾಗಿ ಸಂಪೂರ್ಣ ಹಳಿ ತಪ್ಪಿದೆ. ಒಂದು ಕಡೆ ಸರ್ವರ್ ಕಿರಿಕಿರಿಯಿಂದ ಬಡ ಪಡಿತರದಾರರು ರೇಷನ್ ಪಡೆಯಲು ಗಂಟೆಗಟ್ಟಲೆ ಕಾದು ಹೈರಾಣಾಗುತ್ತಿದ್ದರೆ, ಇನ್ನೊಂದೆಡೆ ತಾಂತ್ರಿಕ ಲೋಪಗಳ ನಡುವೆಯೇ ಇ- ಕೆವೈಸಿ ಪೂರ್ಣಗೊಳಿಸುವಂತೆ ಸರ್ಕಾರ ನೀಡುತ್ತಿರುವ ಒತ್ತಡಕ್ಕೆ ನ್ಯಾಯಬೆಲೆ ಅಂಗಡಿ ಮಾಲೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಲೂಕು ನ್ಯಾಯಬೆಲೆ ಅಂಗಡಿ ಮಾಲೀಕರ ಮತ್ತು ನೌಕರರ ಒಕ್ಕೂಟದ ಅಧ್ಯಕ್ಷ ವೆಂಕಟೇಶ್ ಎಚ್. ನಾಯ್ಕ, ತಾಂತ್ರಿಕ ದೋಷದಿಂದಾಗಿ ಒಂದು ರೇಷನ್ ಕಾರ್ಡ್ ಪ್ರಕ್ರಿಯೆ ಮುಗಿಸಲು ಕನಿಷ್ಠ 10ರಿಂದ 20 ನಿಮಿಷ ಬೇಕಾಗುತ್ತಿವೆ. ಇದರಿಂದಾಗಿ ಮುಂಜಾನೆಯೇ ಕೆಲಸಕ್ಕೆ ಹೋಗಬೇಕಾದ ಕೂಲಿ ಕಾರ್ಮಿಕರು ಹಾಗೂ ಮಹಿಳೆಯರು ಬಿಸಿಲಿನಲ್ಲಿ ಸಾಲುಗಟ್ಟಿ ನಿಲ್ಲುವಂತಾಗಿದೆ. ಪ್ರತಿ ಕಾರ್ಡ್‌ನಲ್ಲಿ ಹಲವಾರು ಸದಸ್ಯರಿರುತ್ತಾರೆ. ಸರ್ವರ್ ಪದೇ ಪದೇ ಸ್ಥಗಿತಗೊಳ್ಳುವುದರಿಂದ ಇಡೀ ದಿನದಲ್ಲಿ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಪಡಿತರ ನೀಡಲು ಸಾಧ್ಯವಾಗುತ್ತಿದೆ. ಇದು ಸಾರ್ವಜನಿಕರ ಜಟಾಪಟಿಗೆ ಕಾರಣವಾಗುತ್ತಿದೆ ಎಂದು ಅಳಲು ತೋಡಿಕೊಂಡರು.ಸರ್ಕಾರವು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 11.30ರ ವರೆಗೆ ಅಂಗಡಿಗಳನ್ನು ತೆರೆದಿಡುವಂತೆ ಸೂಚನೆ ನೀಡಿರುವುದು ಅವೈಜ್ಞಾನಿಕವಾಗಿದೆ. ಹೆಚ್ಚುವರಿ ಸಿಬ್ಬಂದಿಗೆ ಸಂಬಳವಿಲ್ಲ, ಇಂಟರ್ನೆಟ್, ವಿದ್ಯುತ್ ಮತ್ತು ಬಾಡಿಗೆ ವೆಚ್ಚವನ್ನೆಲ್ಲ ಮಾಲೀಕರೇ ಭರಿಸಬೇಕಿದೆ. ಸರ್ವರ್ ಸಮಸ್ಯೆಗೆ ನಾವೇ ಕಾರಣ ಎಂದು ಸಾರ್ವಜನಿಕರು ನಮ್ಮನ್ನು ನಿಂದಿಸುತ್ತಿದ್ದಾರೆ. ಇದು ನಮಗೆ ಮಾನಸಿಕ ಕಿರುಕುಳ ನೀಡುತ್ತಿದೆ ಎಂದು ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ನೀಡಬೇಕಾದ ಕಮಿಷನ್ ಹಣ ತಿಂಗಳುಗಟ್ಟಲೆ ವಿಳಂಬವಾಗುತ್ತಿದೆ. ಐದು ವರ್ಷಗಳ ಹಿಂದೆ ನಡೆಸಿದ ಇ- ಕೆವೈಸಿ ಕಾರ್ಯದ ಬಾಕಿ ಹಣವೂ ಇದುವರೆಗೆ ಕೈಸೇರಿಲ್ಲ. ಈ ಆರ್ಥಿಕ ಹೊರೆಯಿಂದಾಗಿ ಅಂಗಡಿ ನಡೆಸುವುದು ಕಷ್ಟಕರವಾಗಿದೆ. ಕೂಡಲೇ ಸರ್ಕಾರ ಮಧ್ಯಪ್ರವೇಶಿಸಿ ಬಾಕಿ ಹಣ ಬಿಡುಗಡೆ ಮಾಡಬೇಕು ಮತ್ತು ತಾಂತ್ರಿಕ ಸೌಲಭ್ಯಗಳನ್ನು ಒದಗಿಸಬೇಕು ಎಂದು ನ್ಯಾಯಬೆಲೆ ಅಂಗಡಿ ಮಾಲೀಕರು ಆಗ್ರಹಿಸಿದ್ದಾರೆ.ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದ್ದು, ಸರ್ವರ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಲಾಗಿದೆ. ಸರ್ಕಾರ ನಮಗೆ ಸೂಕ್ತ ಸೌಲಭ್ಯ ನೀಡಿದರೆ ಮಾತ್ರ ಕೆಲಸ ಮುಂದುವರಿಸಲು ಸಾಧ್ಯ ಎಂದು ಒಕ್ಕೂಟ ಎಚ್ಚರಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಅಬ್ದುಲ್ ಸೈಯದ್ ಕಿನ್ನರ, ಪೂಜಾ ನಾಯ್ಕ, ದೇವಿಕಾ ನಾಯ್ಕ, ಕೈಲಾಸ್, ವಿ.ಡಿ.‌ ಶೆಟ್ಟಿ, ರೋಹಿದಾಸ ಮಾಳ್ಸೇಕರ್, ಮಾದೇವ ಮರಾಠೆ ಸೇರಿ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿ ಪಾದಯಾತ್ರೆ ಅಲ್ಲ, ಪಶ್ಚಾತ್ತಾಪದ ಯಾತ್ರೆ: ಶಿವರಾಜ ತಂಗಡಗಿ
3ರಿಂದ ಎಡಿಬಿ, ಜೈನ್‌ ಕಾಲೇಜುಗಳ ಸುರಸಂಭ್ರಮ