ಶಿವಕುಮಾರ ಕುಷ್ಟಗಿ ಗದಗ
ಸದ್ಯ ಅವುಗಳನ್ನು ಕಾರ್ಮಿಕ ಇಲಾಖೆ ಅಮಾನತ್ತಿನಲ್ಲಿಟ್ಟಿದೆ. ಸರ್ಕಾರ ಕಾರ್ಮಿಕರಿಗೆ ಹಲವಾರು ಹೊಸ ಯೋಜನೆಗಳನ್ನು ಘೋಷಣೆ ಮಾಡಿರುವುದು, ಸೌಲಭ್ಯ ಹೆಚ್ಚಿಸಿರುವುದೇ ಕಾರ್ಮಿಕರ ನಕಲಿ ಕಾರ್ಡ್‌ಗಳು ಸೃಷ್ಟಿಯಾಗಲು ಪ್ರಮುಖ ಕಾರಣವಾಗಿದೆ.
ಇದಕ್ಕೆ ಇಲಾಖೆಯಲ್ಲಿ ಹೊರ ಗುತ್ತಿಗೆ ಮೇಲೆ ಕೆಲಸ ಮಾಡುವ ಕೆಲ ಸಿಬ್ಬಂದಿಗಳು ಸಾಥ್ ನೀಡುತ್ತಿದ್ದು, ಅವರಿಗೆ ಇಲಾಖೆಯ ಇನ್ನೂ ಕೆಲವರು ಬೆನ್ನೆಲುಬಾಗಿ ನಿಂತಿದ್ದಾರೆ ಎನ್ನುವ ದೂರೂ ಇದೆ.ನಕಲಿ ಕಾರ್ಡ ಪತ್ತೆ: ಜಿಲ್ಲೆಯ 6 ಕಾರ್ಮಿಕ ವೃತ್ತ ವ್ಯಾಪ್ತಿಯಲ್ಲಿ ಒಟ್ಟು 111615 ಕಾರ್ಮಿಕರ ಕಾರ್ಡ್‌ಗಳಿವೆ. ಇವುಗಳಲ್ಲಿ ಸಾವಿರಾರು ಜನ ಅರ್ಹ ಕಾರ್ಮಿಕರಿದ್ದಾರೆ. ಇವರ ಮಧ್ಯೆಯೇ ಕೆಲವು ಸಂಘಟನೆಗಳು ಮತ್ತು ಅಧಿಕಾರಿಗಳ ಪ್ರಭಾವದಿಂದ ಹಲವಾರು ಜನರು ತಮ್ಮ ಹೆಸರುಗಳನ್ನು ಸೇರ್ಪಡೆ ಮಾಡಿದ್ದು, ಸದ್ಯ ಇಲಾಖೆ ನಡೆಸಿರುವ ಸಮೀಕ್ಷೆಯಲ್ಲಿ 3532 ಕಾರ್ಮಿಕರ ನಕಲಿ ಕಾರ್ಡ್‌ಗಳು ಪತ್ತೆಯಾಗಿದ್ದು, ಯಾವುದೇ ಸೂಕ್ತ ದಾಖಲೆಗಳಿಲ್ಲದೇ ಕಾರ್ಮಿಕರಲ್ಲದವರಿಗೆ ಕಾರ್ಡ್‌ಗಳು ವಿತರಣೆಯಾಗಿವೆ ಎನ್ನುವುದು ತನಿಖೆಯಿಂದ ತಿಳಿದು ಬಂದಿದೆ.
ಕೋವಿಡ್ ನಂತರ ಏರಿಕೆ: ಜಿಲ್ಲೆಯಲ್ಲಿ ನೋಂದಾಯಿತ ಕಾರ್ಮಿಕರ ಸಂಖ್ಯೆ 45 ಸಾವಿರವನ್ನು ದಾಟಿರಲಿಲ್ಲ. ಆದರೆ ಕೋವಿಡ್ ಬಂದ ನಂತರ ಕಾರ್ಡ್‌ಗಳ ಸಂಖ್ಯೆಯಲ್ಲಿ ದುಪ್ಪಟ್ಟಾಗಿವೆ. ಕೋವಿಡ್ ವೇಳೆಯಲ್ಲಿ ಕಾರ್ಮಿಕ ಇಲಾಖೆ ನೀಡಿದ ಆಹಾರ ಕಿಟ್ ಮತ್ತು ಕಾರ್ಮಿಕರ ಖಾತೆಗೆ 3 ಸಾವಿರ ಪ್ರೋತ್ಸಾಹ ಧನಕ್ಕಾಗಿ ಜನರು ಮುಗಿಬಿದ್ದರು. ಪ್ರಸ್ತುತ ಜಿಲ್ಲೆಯ ಪ್ರತಿಯೊಂದು ಗ್ರಾಮದಲ್ಲಿಯೂ ಕಾರ್ಮಿಕ ಕಾರ್ಡ್‌ಗಳನ್ನು ಮಾಡಿಕೊಡುವ ಏಜೆಂಟರೇ ಹುಟ್ಟಿಕೊಂಡಿದ್ದಾರೆ. ಇದರಲ್ಲಿ ಪ್ರಮುಖವಾಗಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ಇದ್ದಾರೆ.
ರಾಜಕೀಯ ಒತ್ತಡ: ಜಿಲ್ಲೆಯಲ್ಲಿ ಕಾರ್ಮಿಕರ ನಕಲಿ ಕಾರ್ಡ್ ಪತ್ತೆ ಮಾಡುವ ತನಿಖೆ ವೇಳೆಯಲ್ಲಿ, ತನಿಖೆಯಾದ ನಂತರ, ನಕಲಿ ಎಂದು ಪತ್ತೆಯಾದ ಕಾರ್ಡ್‌ಗಳನ್ನು ಮರು ಸೇರ್ಪಡೆ ಮಾಡಲು, ಇನ್ನೂ ಹೆಚ್ಚಿನ ಸಂಖ್ಯೆಯ ಕಾರ್ಮಿಕ ಕಾರ್ಡ್‌ಗಳನ್ನು ಮಾಡಿಕೊಡಬೇಕು. ಅವರ ನಮ್ಮ ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ಅವರಿಗೆ ಸೌಲಭ್ಯ ಸಿಗಬೇಕು. ನೀವೇನು ನಿಮ್ಮ ಮನೆಯಿಂದ ಕೊಡುತ್ತೀರಾ? ನಮ್ಮ ಸರ್ಕಾರ ಕೊಡುತ್ತದೆ. ನಾವು ಹೇಳಿದವರನ್ನೆಲ್ಲಾ ಕಾರ್ಮಿಕರನ್ನಾಗಿ ಮಾಡಿ ಎಂದು ನಿತ್ಯವೂ ರಾಜಕೀಯ ಪಕ್ಷಗಳ ದೊಡ್ಡ ದೊಡ್ಡ ನಾಯಕರೇ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರಂತೆ.