ಸಾಮಾಜಿಕ ಭದ್ರತಾ ಯೋಜನೆಯಡಿ ಕಾನೂನುಬಾಹಿರವಾಗಿ ಪಿಂಚಣಿ ಪಡೆಯುತ್ತಿದ್ದ 91,152 ಅನರ್ಹ ಫಲಾನುಭವಿಗಳನ್ನು ರಾಜ್ಯ ಸರ್ಕಾರ ಪತ್ತೆ ಹಚ್ಚಿದ್ದು, ಅವರ ಪಿಂಚಣಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ರದ್ದುಪಡಿಸಲು ತೀರ್ಮಾನಿಸಿದೆ.
ಬೆಂಗಳೂರು : ಸಾಮಾಜಿಕ ಭದ್ರತಾ ಯೋಜನೆಯಡಿ ಕಾನೂನುಬಾಹಿರವಾಗಿ ಪಿಂಚಣಿ ಪಡೆಯುತ್ತಿದ್ದ 91,152 ಅನರ್ಹ ಫಲಾನುಭವಿಗಳನ್ನು ರಾಜ್ಯ ಸರ್ಕಾರ ಪತ್ತೆ ಹಚ್ಚಿದ್ದು, ಅವರ ಪಿಂಚಣಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ರದ್ದುಪಡಿಸಲು ತೀರ್ಮಾನಿಸಿದೆ.
ಅಲ್ಲದೆ, ಪರಿಶೀಲನೆ ಸಮಯದಲ್ಲಿ ಯಾವುದೇ ಅಧಿಕೃತ ದಾಖಲೆಗಳನ್ನು ಹಾಜರುಪಡಿಸಲು ವಿಫಲರಾದ, ನೀಡಲಾದ ವಿಳಾಸದಲ್ಲಿ ವಾಸವಿಲ್ಲದ ಹಾಗೂ ಆದಾಯ ಪ್ರಮಾಣ ಪತ್ರ ಸಲ್ಲಿಸದ ಒಟ್ಟು 16,42,303 ಫಲಾನುಭವಿಗಳ ಪಿಂಚಣಿಯನ್ನು ಸದ್ಯ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮುಂದಿನ 30 ದಿನಗಳಲ್ಲಿ ಸೂಕ್ತ ದಾಖಲೆ ಸಲ್ಲಿಸಿದವರಿಗೆ ಪಿಂಚಣಿ ನೀಡಲು ಸರ್ಕಾರ ತೀರ್ಮಾನಿಸಿದೆ.
83,11,493 ಫಲಾನುಭವಿಗಳಿಗೆ ಪಿಂಚಣಿ:
ಹಿರಿಯ ನಾಗರಿಕರು, ವಿಧವೆಯರು, ಅಂಗವಿಕಲರು, ಆ್ಯಸಿಡ್ ದಾಳಿಗೆ ಒಳಗಾದವರು ಸೇರಿ ಆರ್ಥಿಕವಾಗಿ ದುರ್ಬಲರಾಗಿರುವ ವಿವಿಧ ವರ್ಗದ ಜನರಿಗೆ ಸರ್ಕಾರ ಸಾಮಾಜಿಕ ಭದ್ರತೆ ಯೋಜನೆಯಡಿ ಮಾಸಿಕ ನಿಗದಿತ ಮೊತ್ತದ ಪಿಂಚಣಿ ನೀಡುತ್ತಿದೆ. ರಾಜ್ಯಾದ್ಯಂತ ಪ್ರಸ್ತುತ ಒಟ್ಟು 83,11,493 ಫಲಾನುಭವಿಗಳು ವಿವಿಧ ಪಿಂಚಣಿ ಪಡೆಯುತ್ತಿದ್ದು, ಇವರ ಪೈಕಿ ಪ್ರಾಥಮಿಕ ತಪಾಸಣೆಯಲ್ಲಿ 23,13,664 ಫಲಾನುಭವಿಗಳ ವಿವರಗಳು ಸಂದೇಹಾಸ್ಪದವೆಂದು ಸರ್ಕಾರ ಗುರುತಿಸಿದೆ. ಈ ಸಂದೇಹಾಸ್ಪದ ಖಾತೆಗಳನ್ನು ‘ಸಂಯೋಜನೆ’ ಮೊಬೈಲ್ ಆ್ಯಪ್ ಮೂಲಕ ಆಯಾ ಗ್ರಾಮ ಆಡಳಿತ ಅಧಿಕಾರಿಗಳ(ವಿಎ) ಮೂಲಕ ಕೂಲಂಕಷವಾಗಿ ಪರಿಶೀಲನೆಗೆ ಒಳಪಡಿಸಲಾಗಿದೆ.
ಈ ವೇಳೆ, ವಿಎಗಳು ಸ್ಥಳದಲ್ಲೇ ಪರಿಶೀಲನೆ ನಡೆಸಿ ಅರ್ಹರೆಂದು ವರದಿ ಮಾಡಿದ 3,35,610 ಫಲಾನುಭವಿಗಳು ಸೇರಿ ರಾಜ್ಯದ ಒಟ್ಟು 63,04,554 ಅರ್ಹ ಫಲಾನುಭವಿಗಳಿಗೆ ಮೇ ತಿಂಗಳವರೆಗಿನ ಪಿಂಚಣಿಯನ್ನು ಯಶಸ್ವಿಯಾಗಿ ಪಾವತಿಸಲಾಗಿದೆ. ಆದರೆ, ಮಂಜೂರಾತಿ ಸಮಯದಲ್ಲಿ ವಯಸ್ಸಿನ ದೃಢೀಕರಣದ ಬಗ್ಗೆ ತಪ್ಪು ಮತ್ತು ನಕಲಿ ದಾಖಲೆಗಳನ್ನು ನೀಡಿ ಕಾನೂನುಬಾಹಿರವಾಗಿ ಪಿಂಚಣಿ ಪಡೆಯುತ್ತಿದ್ದ 91,152 ಅನರ್ಹ ಫಲಾನುಭವಿಗಳನ್ನು ಪತ್ತೆಹಚ್ಚಲಾಗಿದ್ದು, ಇವರುಗಳ ಪಿಂಚಣಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ರದ್ದುಗೊಳಿಸಲು ತೀರ್ಮಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
16.42 ಲಕ್ಷ ಫಲಾನುಭವಿಗಳ ಪಿಂಚಣಿ ತಾತ್ಕಾಲಿಕ ಸ್ಥಗಿತ:
ಗ್ರಾಮ ಆಡಳಿತ ಅಧಿಕಾರಿಗಳ ಪರಿಶೀಲನೆ ಸಮಯದಲ್ಲಿ ಯಾವುದೇ ಅಧಿಕೃತ ದಾಖಲೆಗಳನ್ನು ಹಾಜರುಪಡಿಸಲು ವಿಫಲರಾದ, ನೀಡಲಾದ ವಿಳಾಸದಲ್ಲಿ ವಾಸವಿಲ್ಲದ ಹಾಗೂ ಆದಾಯ ಪ್ರಮಾಣ ಪತ್ರ ಸಲ್ಲಿಸದ ಒಟ್ಟು 16,42,303 ಫಲಾನುಭವಿಗಳ ಪಿಂಚಣಿಯನ್ನು ಸದ್ಯ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಈ ಫಲಾನುಭವಿಗಳಿಗೆ ಕಂದಾಯ ಇಲಾಖೆ ಸೂಕ್ತ ತಿಳಿವಳಿಕೆ ಪತ್ರವನ್ನು ನೀಡಲು ಆದೇಶಿಸಿದೆ. ಸಂಬಂಧಪಟ್ಟ ತಹಸೀಲ್ದಾರರ ಮೂಲಕ ಇವರಿಗೆ ನೋಟಿಸ್ ನೀಡಿ, ತಮ್ಮ ಅರ್ಹತಾ ದಾಖಲೆಗಳನ್ನು ಸಲ್ಲಿಸಲು 30 ದಿನಗಳ ಕಾಲಾವಕಾಶ ಕಲ್ಪಿಸಿಕೊಡಲಾಗಿದೆ. ನಿಗದಿತ ಅವಧಿಯಲ್ಲಿ ಫಲಾನುಭವಿಗಳು ಸಲ್ಲಿಸುವ ದಾಖಲೆಗಳನ್ನು ಪರಿಶೀಲಿಸಿದ ನಂತರ, ಅವರು ನಿಜವಾಗಿಯೂ ಅರ್ಹರಾಗಿದ್ದಲ್ಲಿ ಅಂಥವರ ಪಿಂಚಣಿ ಸೌಲಭ್ಯ ತಕ್ಷಣವೇ ಮುಂದುವರಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಹಾಗೂ ತಹಸೀಲ್ದಾರರಿಗೆ ಇಲಾಖೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಸರ್ಕಾರದ ಈ ಕ್ರಮ ಅರ್ಹ ಬಡ ಮತ್ತು ಅಗತ್ಯವಿರುವ ಜನರಿಗೆ ಸಾಮಾಜಿಕ ಭದ್ರತೆಯ ಪ್ರಯೋಜನಗಳನ್ನು ತಲುಪಿಸುವ ಮತ್ತು ಯೋಜನೆಯ ದುರುಪಯೋಗವನ್ನು ಸಂಪೂರ್ಣವಾಗಿ ತಡೆಯುವ ಉದ್ದೇಶ ಹೊಂದಿದೆ ಎಂದು ಕಂದಾಯ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಲ್ಲರಿಗಿಂತ ಮೊದಲೇ ತಿಳಿಯುವುದು ಇಲ್ಲೇ!
ಸಂದೇಹಾಸ್ಪದವಾಗಿ ಸಾಮಾಜಿಕ ಪಿಂಚಣಿ ಪಡೆಯುತ್ತಿರುವ 16 ಲಕ್ಷ ಮಂದಿಗೆ ಪಿಂಚಣಿ ತಡೆ ಹಿಡಿದಿರುವ ಕುರಿತು ‘ಕನ್ನಡಪ್ರಭ’ ಜೂ.18ರಂದೇ ವರದಿ ಮಾಡಿತ್ತು.

