ಸಿದ್ದು ಚಿಕ್ಕಬಳ್ಳೇಕೆರೆ
ಬೆಂಗಳೂರು : ಗೃಹಲಕ್ಷ್ಮಿ, ಗೃಹ ಜ್ಯೋತಿ ಯೋಜನೆಗಳ ಫಲಾನುಭವಿಗಳನ್ನು ‘ಸರ್ಜರಿ’ ಮಾಡಲು ಮುಂದಾಗಿರುವ ಸರ್ಕಾರ, ಕಳೆದ ಮೂರು ತಿಂಗಳಲ್ಲಿ 16 ಲಕ್ಷ ಪಿಂಚಣಿದಾರರಿಗೆ ಕೊಕ್ ನೀಡಿದೆ. ಸಾಮಾಜಿಕ ಭದ್ರತಾ ಯೋಜನೆಯಲ್ಲಿ ಅನರ್ಹರನ್ನು ಪತ್ತೆ ಹಚ್ಚಿ ಪಿಂಚಣಿ ಸ್ಥಗಿತಗೊಳಿಸಬೇಕು ಎಂದು ಕಂದಾಯ ಇಲಾಖೆ ಸುತ್ತೋಲೆ ಹೊರಡಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ 82.71 ಲಕ್ಷ ಫಲಾನುಭವಿಗಳು ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯುತ್ತಿದ್ದು, ಇದರಲ್ಲಿ 23.13 ಲಕ್ಷ ಫಲಾನುಭವಿಗಳು ಸಂದೇಹಾಸ್ಪದವಾಗಿ ಪಿಂಚಣಿ ಪಡೆಯುತ್ತಿದ್ದರು. ಈ ಪ್ರಕರಣಗಳಲ್ಲಿ ಇಲ್ಲಿಯವರೆಗೂ 20 ಲಕ್ಷ ಫಲಾನುಭವಿಗಳ ವಿವರವನ್ನು ಗ್ರಾಮ ಆಡಳಿತಾಧಿಕಾರಿಗಳ ಮೂಲಕ ಪರಿಶೀಲಿಸಿದ್ದು, ಇದರಲ್ಲಿ 16,41,440 ಫಲಾನುಭವಿಗಳಿಗೆ ಪಾವತಿಸುತ್ತಿದ್ದ ಪಿಂಚಣಿಯನ್ನು ನಿಲ್ಲಿಸಲಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.
20 ಲಕ್ಷ ಸಂದೇಹಾಸ್ಪದ ಫಲಾನುಭವಿಗಳಲ್ಲೇ 16 ಲಕ್ಷ ಫಲಾನುಭವಿಗಳಿಗೆ ನೀಡುತ್ತಿದ್ದ ಪಿಂಚಣಿ ನಿಲ್ಲಿಸಲಾಗಿದ್ದು, ಇನ್ನುಳಿದ 3 ಲಕ್ಷ ಫಲಾನುಭವಿಗಳ ಪರಿಶೀಲನಾ ಕಾರ್ಯ ಮುಂದುವರೆದಿದ್ದು ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಂಭವವಿದೆ. ಸಂದೇಹಾಸ್ಪದ ಪ್ರಕರಣಗಳನ್ನು ಪರಿಶೀಲಿಸಲೆಂದೇ ‘ಸಂಯೋಜನೆ’ ಮೊಬೈಲ್ ಆ್ಯಪ್ ಸಿದ್ಧಪಡಿಸಲಾಗಿದೆ.
2.21 ಲಕ್ಷ ಫಲಾನುಭವಿಗಳ ವಾಸಕ್ಕೆ ದಾಖಲೆಯಿಲ್ಲ:
ವಯಸ್ಸಿನ ದೃಢೀಕರಣದ ಬಗ್ಗೆ ತಪ್ಪು ಮಾಹಿತಿ ನೀಡಿ ಪಿಂಚಣಿ ಪಡೆಯುತ್ತಿದ್ದ 88,277 ಪಿಂಚಣಿಗಳನ್ನು ರದ್ದು ಮಾಡಲಾಗಿದೆ. 2,21,761 ಫಲಾನುಭವಿಗಳು ವಿಳಾಸದಲ್ಲಿ ವಾಸವಿಲ್ಲದೇ ಇರುವುದರಿಂದ ಈ ಪ್ರಕರಣಗಳನ್ನೂ ಪಿಂಚಣಿಯಿಂದ ಹೊರಗಿಡಲಾಗಿದೆ. 13,23,932 ಫಲಾನುಭವಿಗಳು ಸಂಬಂಧಪಟ್ಟ ದಾಖಲೆಗಳನ್ನು ನೀಡುವಲ್ಲಿ ವಿಫಲವಾಗಿದ್ದರಿಂದ ಇವರಿಗೆ ನೀಡುತ್ತಿದ್ದ ಪಿಂಚಣಿಯನ್ನೂ ಸ್ಥಗಿತಗೊಳಿಸಲಾಗಿದೆ.
ಆದಾಯ ದೃಢೀಕರಣ ಪತ್ರ ನೀಡದಿರುವುದರಿಂದ ಕೈಬಿಡಲಾಗಿದೆ
45,853 ಫಲಾನುಭವಿಗಳು ಆದಾಯದ ಬಗ್ಗೆ ಆದಾಯ ದೃಢೀಕರಣ ಪತ್ರ ನೀಡದಿರುವುದರಿಂದ ಇವರನ್ನೂ ಕೈಬಿಡಲಾಗಿದೆ. ಯೋಜನೆಯಿಂದ ಕೈಬಿಟ್ಟಿರುವ ಫಲಾನುಭವಿಗಳು ಆಯಾ ತಹಸೀಲ್ದಾರರ ಮುಂದೆ ದಾಖಲೆಗಳನ್ನು ಹಾಜರುಪಡಿಸಲು 30 ದಿನದ ಕಾಲಾವಕಾಶ ನೀಡಿ ತಿಳಿವಳಿಕೆ ಪತ್ರ ಜಾರಿ ಮಾಡಲಾಗಿದೆ. ಕಾಲಮಿತಿಯೊಳಗೆ ದಾಖಲೆ ಹಾಜರಿಪಡಿಸಲು ವಿಫಲವಾದರೆ ಅಂತಹವರ ಪಿಂಚಣಿ ರದ್ದಾಗಲಿದೆ.
ಪ್ರತಿ ತಿಂಗಳೂ ವಿಧವಾ ವೇತನ, ಸಂಧ್ಯಾ ಸುರಕ್ಷಾ, ವಿಕಲಚೇತನ, ಬುದ್ಧಿ ಮಾಂದ್ಯ ಸೇರಿ ಹಲವು ಸಾಮಾಜಿಕ ಭದ್ರತಾ ಯೋಜನೆಗಳಿದ್ದು, 16 ಲಕ್ಷಕ್ಕೂ ಅಧಿಕ ಜನರಿಗೆ ಪಿಂಚಣಿ ನಿಲ್ಲಿಸಿರುವುದರಿಂದ ಬೊಕ್ಕಸಕ್ಕೆ ನೂರಾರು ಕೋಟಿ ಉಳಿಯಲಿದೆ. ಆದರೆ, ಇದ್ಯಾವುದೂ ತಿಳಿಯದ ಹಲವು ಹಿರಿಯರು ಮೂರು ತಿಂಗಳಾದರೂ ವೃದ್ಧಾಪ್ಯವೇತನ ಬಂದಿಲ್ಲ ಎಂದು ಕಚೇರಿಗಳಿಗೆ ಅಲೆಯುತ್ತಿದ್ದು ಸರ್ಕಾರ ಗ್ರಾಮ ಮಟ್ಟದಲ್ಲೇ ಸೂಕ್ತ ಮಾರ್ಗದರ್ಶನ ನೀಡಬೇಕಿದೆ.
