ಪಿಂಚಣಿ ಪರಿಷ್ಕರಣೆ, ತುಟ್ಟಿಭತ್ಯೆ ಒಳಗೊಂಡಂತೆ ಇತರೆ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಬಿಎಸ್ಸೆನ್ನೆಲ್ ಮತ್ತು ಎಂಟಿಎನ್ನೆಲ್ ಪಿಂಚಣಿ ನೌಕರರ ಒಕ್ಕೂಟದ ಪದಾಧಿಕಾರಿಗಳು ನಗರದ ಹಳೆ ಪಿ.ಬಿ. ರಸ್ತೆಯ ಬಿಎಸ್ಸೆನ್ನೆಲ್ ಮಹಾ ಪ್ರಬಂಧಕರ ಕಚೇರಿ ಎದುರು ಬುಧವಾರ ಧರಣಿ ನಡೆಸಿದ್ದಾರೆ.
- ತುಟ್ಟಿಭತ್ಯೆ ಒಳಗೊಂಡಂತೆ ಇತರೆ ಸೌಲಭ್ಯ ಒದಗಿಸಲು ಕೇಂದ್ರಕ್ಕೆ ಒತ್ತಾಯ - - -
ಕನ್ನಡಪ್ರಭ ವಾರ್ತೆ ದಾವಣಗೆರೆಪಿಂಚಣಿ ಪರಿಷ್ಕರಣೆ, ತುಟ್ಟಿಭತ್ಯೆ ಒಳಗೊಂಡಂತೆ ಇತರೆ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಬಿಎಸ್ಸೆನ್ನೆಲ್ ಮತ್ತು ಎಂಟಿಎನ್ನೆಲ್ ಪಿಂಚಣಿ ನೌಕರರ ಒಕ್ಕೂಟದ ಪದಾಧಿಕಾರಿಗಳು ನಗರದ ಹಳೆ ಪಿ.ಬಿ. ರಸ್ತೆಯ ಬಿಎಸ್ಸೆನ್ನೆಲ್ ಮಹಾ ಪ್ರಬಂಧಕರ ಕಚೇರಿ ಎದುರು ಬುಧವಾರ ಧರಣಿ ನಡೆಸಿದರು.
ನಗರದ ಬಿಎಸ್ಸೆನ್ನೆಲ್ ಕಚೇರಿ ಎದುರು ಫೋರಂ ಆಫ್ ಬಿಎಸ್ಸೆನ್ನೆಲ್ ಮತ್ತು ಎಂಟಿಎನ್ನೆಲ್ ಕೇಂದ್ರ ಒಕ್ಕೂಟದ ಕರೆ ಮೇರೆಗೆ ಕೇಂದ್ರ ಸರ್ಕಾರದ ನಿವೃತ್ತ ಪಿಂಚಣಿದಾರರ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಘೋಷಣೆ ಕೂಗಿದರು.ಸಂಘಟನೆ ಮುಖಂಡರು ಮಾತನಾಡಿ, ಹಲವಾರು ವರ್ಷಗಳ ಕಾಲ ದುಡಿದ ನಿವೃತ್ತ ನೌಕರರ ಹಿತದೃಷ್ಟಿಯಿಂದ ಅನೇಕ ಪ್ರಮುಖ ಬೇಡಿಕೆ ಈಡೇರಿಸಲು ಒತ್ತಾಯಿಸಿ ನಡೆಸಿರುವ ಹೋರಾಟಕ್ಕೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ನಿವೃತ್ತ ನೌಕರರ ಬೇಡಿಕೆ ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಕಿಂಚಿತ್ತೂ ಕಂಡುಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
1.1.2017ರಿಂದ ಜಾರಿಗೆ ಬರಬೇಕಾದ ಪಿಂಚಣಿ ಪರಿಷ್ಕರಣೆ ತಕ್ಷಣವೇ ಜಾರಿಗೆ ತಂದು, ನಿವೃತ್ತರು ಮತ್ತು ಅವಲಂಬಿತರಿಗೆ ಅನುಕೂಲ ಮಾಡಿಕೊಡಬೇಕು. ನಿವೃತ್ತರಿಗೆ ಮಾರಕವಾದಂತಿರುವ 2025ರ ವೆಲಿಡಿಟಿ ಆಕ್ಟ್ ಸಂಪೂರ್ಣ ರದ್ದುಪಡಿಸಬೇಕು. 1.1.2025ರಿಂದ ಬರಬೇಕಿರುವ ತುಟ್ಟಿಭತ್ಯೆ ಬಿಡುಗಡೆ ಮಾಡಬೇಕು. ಕಳೆದ ಏಪ್ರಿಲ್ 1ರಿಂದ ಅನ್ವಯವಾಗುವ ತುಟ್ಟಿಭತ್ಯೆಗೆ ಸಂಬಂಧಿಸಿದಂತೆ ತಕ್ಷಣವೇ ಅಧಿಕೃತ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.ಐಡಿಇಗೆ ಸಂಬಂಧಿಸಿದಂತೆ ಕಳೆದ ಫೆ.27ರಂದು ಹೊರಡಿಸಲಾದ ಸ್ಮರಣ ಪತ್ರದ ಪ್ಯಾರಾ ಸಂಖ್ಯೆ 5 ಅನ್ನು ರದ್ದುಗೊಳಿಸಬೇಕು. ನಿವೃತ್ತ ನೌಕರರ ಎಲ್ಲ ನ್ಯಾಯಯುತ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಪ್ರಥಮ ಆದ್ಯತೆ ಮೇರೆಗೆ ಈಡೇರಿಸಬೇಕು ಎಂದು ನಿವೃತ್ತರು ಒಕ್ಕೊರಲಿನಿಂದ ಒತ್ತಾಯಿಸಿದರು.
ಒಕ್ಕೂಟದ ಜಿಲ್ಲಾ ಸಹ ಕಾರ್ಯದರ್ಶಿ ಟಿ.ಷಣ್ಣುಖಪ್ಪ, ಕಾರ್ಯದರ್ಶಿಗಳಾದ ಆರ್.ಆನಂದ, ಈರಣ್ಣ, ಕೆ.ಸಿ.ಚನ್ನಪ್ಪ, ಎ.ಎಂ.ಉಷಾ, ಸಾವಿತ್ರಮ್ಮ, ಗಿರಿಜಮ್ಮ, ಗುಡ್ಡಪ್ಪ, ಜಯಪ್ಪ ನಾಯ್ಕ, ಶಿವಲಿಂಗಪ್ಪ, ಎಚ್.ಎಸ್. ನಾಗರಾಜ, ಗೋಪಾಲಸ್ವಾಮಿ, ಹನುಮಂತಪ್ಪ ಖಜಾರಿ, ಎನ್.ಡಿ.ಹರಿಪ್ರಸಾದ ಇತರರು ಇದ್ದರು.- - -
-20ಕೆಡಿವಿಜಿ6: ದಾವಣಗೆರೆಯಲ್ಲಿ ಬುಧವಾರ ಪಿಂಚಣಿ ಪರಿಷ್ಕರಣೆ, ತುಟ್ಟಿಭತ್ಯೆ ಒಳಗೊಂಡಂತೆ ಇತರೆ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಬಿಎಸ್ಸೆನ್ನೆಲ್ ಮತ್ತು ಎಂಟಿಎನ್ನೆಲ್ ಪಿಂಚಣಿ ನೌಕರರ ಒಕ್ಕೂಟದ ಪದಾಧಿಕಾರಿಗಳು, ನಿವೃತ್ತರು ಪ್ರತಿಭಟನೆ ನಡೆಸಿದರು.