ಆಡಳಿತದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ದಕ್ಷತೆಯನ್ನು ಹೆಚ್ಚಿಸಲು ರಾಜ್ಯ ಸರ್ಕಾರವು ಕರ್ನಾಟಕದಲ್ಲೇ ಸಿದ್ಧಪಡಿಸಿದ ‘ಕರ್ತವ್ಯ’  ಎಂಬ ನೂತನ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಹಾಜರಾತಿ ನಿರ್ವಹಣಾ ತಂತ್ರಜ್ಞಾನ ಜಾರಿಗೊಳಿಸಿದೆ.

ಬೆಂಗಳೂರು : ಆಡಳಿತದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ದಕ್ಷತೆಯನ್ನು ಹೆಚ್ಚಿಸಲು ರಾಜ್ಯ ಸರ್ಕಾರವು ಕರ್ನಾಟಕದಲ್ಲೇ ಸಿದ್ಧಪಡಿಸಿದ ‘ಕರ್ತವ್ಯ’ (ಕರ್ನಾಟಕ ಅಡ್ವಾನ್ಸ್ಡ್‌ ಅಟೆಂಡೆನ್ಸ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ) ಎಂಬ ನೂತನ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಹಾಜರಾತಿ ನಿರ್ವಹಣಾ ತಂತ್ರಜ್ಞಾನ ಜಾರಿಗೊಳಿಸಿದೆ.

ಈ ಕುರಿತು ಮಾಹಿತಿ ನೀಡಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ಈವರೆಗೆ ಜಾರಿಯಲ್ಲಿದ್ದ ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ಉದ್ಯೋಗಿಗಳು ಕೇವಲ ಡಿಜಿಟಲ್‌ ಸಹಿ ಮಾಡಿ ಕಚೇರಿಯಿಂದ ಗೈರಾಗುವ ಸಾಧ್ಯತೆಗಳಿದ್ದವು. ಈ ಲೋಪವನ್ನು ನಿವಾರಿಸಲು ಉದ್ಯೋಗಿಗಳ ಭೌತಿಕ ಉಪಸ್ಥಿತಿ ಮತ್ತು ಕಚೇರಿಯ ಭೌಗೋಳಿಕ ಸ್ಥಳವನ್ನು ನಿಖರವಾಗಿ ಪತ್ತೆ ಮಾಡಲು ಕರ್ತವ್ಯ ಹಾಜರಾತಿ ನಿರ್ವಹಣಾ ತಂತ್ರಜ್ಞಾನ ಅಳವಡಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ತವ್ಯ ತಂತ್ರಜ್ಞಾನವು ಮೇಡ್‌ ಇನ್‌ ಕರ್ನಾಟಕ ಆವಿಷ್ಕಾರ

ಕರ್ತವ್ಯ ತಂತ್ರಜ್ಞಾನವು ಮೇಡ್‌ ಇನ್‌ ಕರ್ನಾಟಕ ಆವಿಷ್ಕಾರವಾಗಿದೆ. ಯಾವುದೇ ಖಾಸಗಿ ತಂತ್ರಜ್ಞಾನ ಸಂಸ್ಥೆಯ ನೆರವಿಲ್ಲದೆ, ಕರ್ತವ್ಯ ತಂತ್ರಾಂಶವನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಮೇಲ್ವಿಚಾರಣೆಯಲ್ಲಿ ಸೆಂಟರ್‌ ಫಾರ್‌ ಇ-ಗವರ್ನೆನ್ಸ್‌ ಮತ್ತು ಕರ್ನಾಟಕ ಎಐ ಸೆಲ್‌ ಜಂಟಿಯಾಗಿ ಸಿದ್ಧಪಡಿಸಿವೆ ಎಂದು ಹೇಳಿದ್ದಾರೆ.

42 ಇಲಾಖೆಗಳಲ್ಲಿ ಜಾರಿ:

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಕಟ್ಟುನಿಟ್ಟಿನ ಸೂಚನೆ ಮೇರೆಗೆ ವೇಗವಾಗಿ ಕರ್ತವ್ಯ ಹಾಜರಾತಿ ವ್ಯವಸ್ಥೆ ಅನುಷ್ಠಾನಗೊಳಿಸಲಾಗುತ್ತಿದೆ. ಪ್ರಸ್ತುತ 42 ಇಲಾಖೆಗಳ 4.78 ಲಕ್ಷ ನೌಕರರು ನೂತನ ವ್ಯವಸ್ಥೆ ವ್ಯಾಪ್ತಿಗೆ ತರಲಾಗುತ್ತಿದೆ. ಅದರಂತೆ ಕಳೆದ ವಾರ 2.46 ಲಕ್ಷ ಉದ್ಯೋಗಿಗಳು ನೋಂದಣಿಯಾಗಿದ್ದರು. ಈಗ ಅದು 3.01 ಲಕ್ಷಕ್ಕೆ ಹೆಚ್ಚಳವಾಗಿದೆ. ಹಾಗೆಯೇ, ಆ್ಯಪ್‌ ಮೂಲಕ ಪ್ರತಿದಿನ ದಾಖಲಾಗುವ ದೈನಂದಿನ ಹಾರಾತಿ 1.85 ಲಕ್ಷದಿಂದ 2.32 ಲಕ್ಷಕ್ಕೆ ಹೆಚ್ಚಳವಾಗಿದೆ ಎಂದು ಶಾಲಿನಿ ರಜನೀಶ್‌ ತಿಳಿಸಿದ್ದಾರೆ.