ಶೀಘ್ರದಲ್ಲೇ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ
ಬಳ್ಳಾರಿ: ಪಿಂಚಣಿ ವಿಲೇವಾರಿ ಪ್ರಕ್ರಿಯೆ ಸಂಪೂರ್ಣ ಡಿಜಿಟಲೀಕರಣಗೊಳಿಸಲು ಸಿದ್ಧತೆ ನಡೆಸಲಾಗುತ್ತಿದೆ. ಶೀಘ್ರದಲ್ಲೇ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಪಿಂಚಣಿ ವಿಭಾಗ ಡೆಪ್ಯುಟಿ ಅಕೌಂಟ್ ಜನರಲ್ ಸಚಿನ್ ಕೃಷ್ಣ ಕೌಶಿಕ್ ತಿಳಿಸಿದರು.ಅಕೌಂಟೆಂಟ್ ಜನರಲ್ ಕಚೇರಿ, ಖಜಾನೆ ಇಲಾಖೆ ಸಹಯೋಗದಲ್ಲಿ ನಗರದ ತಾಲೂಕು ಆಡಳಿತ ಭವನದ ಸಭಾಂಗಣದಲ್ಲಿ ಆಯೋಜಿಸಿದ್ದ ಪಿಂಚಣಿ ಅದಾಲತ್, ಸಾಮಾನ್ಯ ಭವಿಷ್ಯ ನಿಧಿ ಅದಾಲತ್, ಲೆಕ್ಕಪತ್ರ ಸಮಸ್ಯೆಗಳ ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಿವೃತ್ತ ಸರ್ಕಾರಿ ನೌಕರರು ತಮ್ಮ ಪಿಂಚಣಿ ಸೌಲಭ್ಯಗಳಿಗಾಗಿ ಕಚೇರಿಯಿಂದ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಮತ್ತು ವಿಳಂಬವಿಲ್ಲದೇ ಸೌಲಭ್ಯ ಒದಗಿಸಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಹಿಂದೆ ಪಿಂಚಣಿ ಮಂಜೂರಾತಿಗೆ ದೀರ್ಘಕಾಲ ತೆಗೆದುಕೊಳ್ಳಲಾಗುತ್ತಿತ್ತು. ಆದರೆ ಕಳೆದ ಐದಾರು ತಿಂಗಳಿನಿಂದ ಪ್ರಕ್ರಿಯೆಯನ್ನು ವೇಗಗೊಳಿಸಲಾಗಿದ್ದು, ಗರಿಷ್ಠ 30 ರಿಂದ 45 ದಿನಗಳೊಳಗೆ ವಿಲೇವಾರಿ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದರು.ಏಪ್ರಿಲ್ 1ರ ವೇಳೆಗೆ ಕೇವಲ 15 ಮೂಲ ಪ್ರಕರಣ, 221 ವಿಭಾಗೀಯ ಪ್ರಕರಣ ಬಾಕಿ ಇದ್ದವು. ಏಪ್ರಿಲ್ 25ರ ಸುಮಾರಿಗೆ ಸುಮಾರು 9,000 ಹೊಸ ಪ್ರಕರಣ ಬಂದಿದ್ದು, ಕಳೆದ ಒಂದು ತಿಂಗಳ ಅವಧಿಯಲ್ಲಿ ಒಟ್ಟು 30,000 ಪಿಂಚಣಿ ಪ್ರಕರಣಗಳನ್ನು ಯಶಸ್ವಿಯಾಗಿ ಇತ್ಯರ್ಥಪಡಿಸಲಾಗಿದೆ ಎಂದು ತಿಳಿಸಿದರು.
ಬಳ್ಳಾರಿ ಮತ್ತು ಕಲಬುರಗಿ ವಿಭಾಗದ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ನವೆಂಬರ್-ಡಿಸೆಂಬರ್ ಅವಧಿಯಲ್ಲಿ ನಡೆಸಲಾಗುತ್ತಿದ್ದ ಪಿಂಚಣಿ ಅದಾಲತ್‌ಗಳನ್ನು ಈ ಬಾರಿ ಬೇಸಿಗೆಯಲ್ಲೇ ಆಯೋಜಿಸಲಾಗಿದೆ. ವಿಳಂಬವಾಗುತ್ತಿರುವ ಕೆಲವು ಪ್ರಕರಣಗಳನ್ನು ಆದಷ್ಟು ಬೇಗ ಇತ್ಯರ್ಥಪಡಿಸಲು ಕನಿಷ್ಠ 15 ದಿನಗಳ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದರು.ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಮಲ್ಲೇಶಪ್ಪ ಮಾತನಾಡಿ, ವಯಸ್ಸಾದ ಪಿಂಚಣಿದಾರರು ಬ್ಯಾಂಕ್ ಗಳಲ್ಲಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ. ಹಾಗಾಗಿ, ಪಿಂಚಣಿದಾರರಿಗಾಗಿಯೇ ಬ್ಯಾಂಕಿನಲ್ಲಿ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ನಿವೃತ್ತ ಪಿಂಚಣಿದಾರರು ತಮ್ಮ ಸಮಸ್ಯೆಗಳನ್ನು ಅಹವಾಲುಗಳ ಮೂಲಕ ಸಲ್ಲಿಸಿದರು.ಮಹಾಲೇಖಪಾಲರ ಕಚೇರಿಯ ಸೀನಿಯರ್ ಡಿ.ಎ.ಜಿ ಯಶೋದಾ, ಬೆಂಗಳೂರು ಮಹಾಲೇಖಪಾಲರ ಕಚೇರಿಯ ಸೀನಿಯರ್ ಅಕೌಂಟ್ಸ್ ಆಫೀಸರ್ ನಾಗಜ್ಯೋತಿ, ಅಕೌಂಟ್ಸ್ ಆಫೀಸರ್ ಶ್ರೀಕಾಂತ್ ಎಂ.ಜೆ., ಜಿಲ್ಲಾ ಖಜಾನೆ ಬಳ್ಳಾರಿಯ ಉಪ ನಿರ್ದೇಶಕ ಶೇಖರಪ್ಪ, ಸಹಾಯಕ ಖಜಾನಾಧಿಕಾರಿ ಪ್ರಭು ಮತ್ತು ಸಣ್ಣ ಉಳಿತಾಯ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಹೊನ್ನೂರಪ್ಪ ಸೇರಿದಂತೆ ವಿವಿಧ ಬ್ಯಾಂಕ್ ಗಳ ಮುಖ್ಯಸ್ಥರು, ನಿವೃತ್ತ ಪಿಂಚಣಿದಾರರು ಉಪಸ್ಥಿತರಿದ್ದರು.