ಪರಶಿವಮೂರ್ತಿ ಮಾಟಲದಿನ್ನಿ
ಕುಷ್ಟಗಿ: ರಾಜ್ಯ ಸರ್ಕಾರ ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಪಾರದರ್ಶಕತೆ ತರಲು ಕೈಗೊಂಡಿರುವ ಪಿಂಚಣಿ ಫಲಾನುಭವಿಗಳ ಮಾಸಾಶನ (ಇ-ಕೆವೈಸಿ) ದಾಖಲೆ ಪರಿಷ್ಕರಣೆಯ ಪ್ರಕ್ರಿಯೆ ತಾಲೂಕಿನಲ್ಲಿ ಸಾವಿರಾರು ಫಲಾನುಭವಿಗಳಿಗೆ ಆತಂಕ ಉಂಟು ಮಾಡಿದೆ.ನಕಲಿ ದಾಖಲೆಗಳಿಂದ ಪಿಂಚಣಿ ಪಡೆಯುತ್ತಿರುವ ಅನರ್ಹರನ್ನು ಪತ್ತೆ ಹಚ್ಚುವ ಉದ್ದೇಶದಿಂದ ಆರಂಭವಾದ ಈ ಕಾರ್ಯಾಚರಣೆ ಅರ್ಹ ಫಲಾನುಭವಿಗೂ ಸಂಕಷ್ಟವನ್ನುಂಟು ಮಾಡಿದೆ.
ಕಳೆದ ಮೂರ್ನಾಲ್ಕು ತಿಂಗಳಿಂದ ಪಿಂಚಣಿ ಜಮೆಯಾಗದ ಕಾರಣ ವೃದ್ಧರು, ವಿಧವೆಯರು, ಅಂಗವಿಕಲರು ಹಾಗೂ ಇತರ ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳು ದಿನನಿತ್ಯ ಕಚೇರಿಗೆ ಅಲೆದಾಡುತ್ತಿದ್ದು, ಸಾವಿರಾರು ಫಲಾನುಭವಿಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.17 ಸಾವಿರ ಫಲಾನುಭವಿಗಳ ಪಿಂಚಣಿ ಸ್ಥಗಿತ: ಕುಷ್ಟಗಿ ತಾಲೂಕಿನಲ್ಲಿ 60 ಸಾವಿರ ಪಿಂಚಣಿ ಮಾಸಾಶನ ಫಲಾನುಭವಿಗಳ ಪೈಕಿ ಸುಮಾರು 17 ಸಾವಿರ ಫಲಾನುಭವಿಗಳ ಪಿಂಚಣಿ ಸ್ಥಗಿತಗೊಂಡಿದೆ. ಅಧಿಕಾರಿಗಳು ಫಲಾನುಭವಿಗಳ ದಾಖಲಾತಿ ಮರುಪರಿಶೀಲನೆ ನಡೆಸುತ್ತಿದ್ದಾರೆ. ಆಧಾರ್ ಜೋಡಣೆ, ವೋಟರ್ ಐಡಿಕಾರ್ಡ್, ಮರಣ ಹೊಂದಿದ ಫಲಾನುಭವಿಗಳ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ಫಲಾನುಭವಿಗಳಲ್ಲಿ ಗೊಂದಲ ಮತ್ತು ಆತಂಕ ಮನೆಮಾಡಿದೆ.
ನಿತ್ಯ ಕಚೇರಿಗೆ ಜನರ ದಂಡು: ತಾಲೂಕಿನ ದೋಟಿಹಾಳ, ಮುದೇನೂರು, ಹನುಮನಾಳ, ತಾವರಗೇರಾ, ಹನುಮಸಾಗರ, ಮೆಣೇದಾಳ ಸೇರಿದಂತೆ ಹಲವೆಡೆಗಳಿಂದ ವೃದ್ಧರು, ಮಹಿಳೆಯರು ತಹಸೀಲ್ದಾರ್ ಕಚೇರಿಗೆ ಆಗಮಿಸುತ್ತಿದ್ದಾರೆ. ಕೆಲವರು 40 ರಿಂದ 50 ಕಿಲೋಮೀಟರ್ ದೂರದಿಂದ ಬರುತ್ತಿದ್ದು, ಕಚೇರಿಯ ಮುಂದೆ ಪ್ರತಿದಿನ ವಯಸ್ಸಾದವರು ಗಂಟೆಗಟ್ಟಲೆ ಕಾಯುವ ದೃಶ್ಯ ಸಾಮಾನ್ಯವಾಗಿದೆ. ಅಂಗವಿಕಲರು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರಿಗೂ ಇದೇ ಸಮಸ್ಯೆ ಎದುರಾಗಿದೆ.
ಮೂರು ತಿಂಗಳಿನಿಂದ ಪಿಂಚಣಿ ಇಲ್ಲ: ಪಿಂಚಣಿ ಹಣವೇ ಜೀವನಾಧಾರವಾಗಿರುವ ಅನೇಕ ಕುಟುಂಬಗಳು ಕಳೆದ ಮೂರು ತಿಂಗಳಿಂದ ತೀವ್ರ ಸಂಕಷ್ಟದಲ್ಲಿವೆ. ಔಷಧಿ ಖರೀದಿ, ದಿನನಿತ್ಯದ ಆಹಾರ, ಮನೆ ಖರ್ಚು ಸೇರಿದಂತೆ ಮೂಲಭೂತ ಅಗತ್ಯಗಳಿಗೂ ಹಣವಿಲ್ಲದೆ ಪರದಾಡುತ್ತಿದ್ದಾರೆ. ಕೆಲವರು ಸಾಲ ಮಾಡಿ ಜೀವನ ಸಾಗಿಸುತ್ತಿದ್ದು, ಇನ್ನೂ ಕೆಲವರು ಬಂಧುಗಳ ನೆರವಿನತ್ತ ಮುಖಮಾಡಿದ್ದಾರೆ.
ಪಿಂಚಣಿ ಮಾಸಾಶನ ಫಲಾನುಭವಿಗಳ ದಾಖಲೆಗಳನ್ನು ಆದ್ಯತೆ ಮೇರೆಗೆ ಪರಿಶೀಲಿಸಬೇಕು, ಪಿಂಚಣಿ ಸ್ಥಗಿತಗೊಂಡಿರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು, ಗ್ರಾಪಂ ಮಟ್ಟದಲ್ಲಿ ದಾಖಲೆ ಪರಿಶೀಲನೆಗೆ ವಿಶೇಷ ಶಿಬಿರಗಳನ್ನು ಆಯೋಜಿಸಿ ವೃದ್ಧರು, ಅಂಗವಿಕಲರಿಗೆ ಅಲೆದಾಡುವ ಪರಿಸ್ಥಿತಿ ತಪ್ಪಿಸಬೇಕು ಎಂದು ಫಲಾನುಭವಿಗಳು ಒತ್ತಾಯಿಸಿದ್ದಾರೆ.ನಕಲಿ ಫಲಾನುಭವಿಗಳನ್ನು ಪತ್ತೆಹಚ್ಚಿ ತಡೆಯುವುದು ಸರ್ಕಾರದ ಜವಾಬ್ದಾರಿಯಾಗಿದೆ. ಈ ಪ್ರಕ್ರಿಯೆಯಿಂದ ನೈಜ ಫಲಾನುಭವಿಗಳು ತಿಂಗಳುಗಟ್ಟಲೆ ಪಿಂಚಣಿಯಿಂದ ವಂಚಿತರಾಗುವುದು ನ್ಯಾಯಸಮ್ಮತವಲ್ಲ, ಅರ್ಹರಿಗೆ ಪಿಂಚಣಿ ಹಣ ಜಮೆ ಮಾಡಬೇಕು ಎನ್ನುತ್ತಾರೆ ಮುದೇನೂರು ಗ್ರಾಮದ ಹುಸೇನಪ್ಪ ಹಿರೇಮನಿ.
ಮೂರು ತಿಂಗಳಿಂದ ಪಿಂಚಣಿ ಬಂದಿಲ್ಲ, ಅದನ್ನೇ ನಂಬಿಕೊಂಡು ಔಷಧಿ ಖರೀದಿಸುತ್ತಿದ್ದೇವೆ. ಜೀವನ ನಡೆಸಲು ಸಮಸ್ಯೆಯಾಗುತ್ತಿದ್ದು, ಬೇಗ ಪಿಂಚಣಿ ಬಿಡುಗಡೆ ಮಾಡಬೇಕು ಎಂದು ಫಲಾನುಭವಿ ಹನುಮಪ್ಪ ಕಲಾಲಬಂಡಿ ಹೇಳಿದರು. ಹನುಮನಾಳ ಗ್ರಾಮದಿಂದ 40 ಕಿಲೋಮೀಟರ್ ದೂರ ಬಸ್‌ನಲ್ಲಿ ಬಂದು ತಹಸೀಲ್ದಾರ್ ಕಚೇರಿಗೆ ಅಲೆದಾಡುತ್ತಿದ್ದೇವೆ. ವಯಸ್ಸಾದ ನಮಗೆ ಈ ಓಡಾಟ ತುಂಬಾ ಕಷ್ಟವಾಗಿದೆ. ಅರ್ಹರ ಪಿಂಚಣಿ ತಕ್ಷಣ ಬಿಡುಗಡೆ ಮಾಡಬೇಕು ಹನುಮನಾಳ ದುರಗವ್ವ ಶಾಂತಗೇರಿ ಹೇಳಿದರು.ಅನರ್ಹ ಫಲಾನುಭವಿಗಳ ಪತ್ತೆಗಾಗಿ ಪರಿಷ್ಕರಣೆ ನಡೆಯುತ್ತಿದ್ದು, ಅರ್ಹ ಫಲಾನುಭವಿಗಳು ಆತಂಕಪಡುವ ಅಗತ್ಯವಿಲ್ಲ. ಖಾತೆಗೆ ಪಿಂಚಣಿ ಜಮೆಯಾಗುತ್ತಿದೆ. ಸ್ಥಗಿತಗೊಂಡಿರುವ ಫಲಾನುಭವಿಗಳು ಅಗತ್ಯ ದಾಖಲೆ ಸಲ್ಲಿಸಿ ಅಧಿಕಾರಿಗಳೊಂದಿಗೆ ಸಹಕರಿಸಬೇಕು. ತಾಲೂಕಿನ 60 ಸಾವಿರ ಫಲಾನುಭವಿಗಳ ಪೈಕಿ 17 ಸಾವಿರ ಫಲಾನುಭವಿಗಳ ಮಾಸಾಶನ ಸ್ಥಗಿತಗೊಂಡಿದೆ ಎಂದು ಕುಷ್ಟಗಿ ತಹಸೀಲ್ದಾರ್ ಗುರುರಾಜ ಛಲವಾದಿ ಹೇಳಿದರು.