- ಹನೂರು ತಾಲೂಕಿನ ಕೌದಳ್ಳಿ ಸರ್ಕಾರಿ ಶಾಲೆ ಶಿಕ್ಷಕರಿಂದ ಲೋಪ
ಚಾಮರಾಜನಗರ ಜಿಲ್ಲೆಯಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರದ ಸದ್ದು ಜೋರಾಗಿದ್ದು, ಈಗ ಸರ್ಕಾರಿ ಶಾಲೆ ಶಿಕ್ಷಕರೊಬ್ಬರು ಸುಳ್ಳು ಜಾತಿಯನ್ನು ಹೆಸರಿಸಿ, ಶಿಕ್ಷಕ ಹುದ್ದೆಯನ್ನು ಪಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹನೂರು ತಾಲೂಕಿನ ಕೌದಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರೊಬ್ಬರು ಹುದ್ದೆ ಪಡೆಯುವ ವೇಳೆ ಸುಳ್ಳು ಜಾತಿ ಮತ್ತು ಸಿಂಧುತ್ವ ಪ್ರಮಾಣ ಪತ್ರ ಸಲ್ಲಿಸಿ ಸರ್ಕಾರಕ್ಕೆ ವಂಚಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಕಣ್ಣೂರು ಶ್ರೀನಿವಾಸ್ ಅವರು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.
ಇತ್ತೀಚೆಗಷ್ಟೇ ಆಹಾರ ನಿರೀಕ್ಷಕರಾಗಿದ್ದ ಬಿಸಿಲಯ್ಯ ಎಂಬುವರು ಸುಳ್ಳು ಜಾತಿ ಹೆಸರಿಸಿ ಹುದ್ದೆ ಪಡೆದಿದ್ದರು ಎಂದು ಅವರ ಪಿಂಚಣಿಯನ್ನು ಆಹಾರ ಮತ್ತು ಸರಬರಾಜು ಇಲಾಖೆಯು ತಡೆಹಿಡಿದು ತನಿಖೆಗೆ ಆದೇಶಿಸಿತ್ತು.ಮತ್ತೊಂದೆಡೆ ಎಫ್‌ಡಿಸಿಯಾಗಿದ್ದ ನಾಗರಾಜಯ್ಯ ಎಂಬುವರ ವಿರುದ್ಧವೂ ಜಿಲ್ಲಾಧಿಕಾರಿಗಳು ತನಿಖೆಗೆ ಆದೇಶ ಹೊರಡಿಸಿದ್ದರು. ಈ ಎಲ್ಲ ಬೆಳವಣಿಗೆ ಮಧ್ಯೆಯೇ ಇನ್ನೊಂದು ಘಟನೆ ಹೊಗೆಯಾಡುತ್ತಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಶಿಕ್ಷಣ ಇಲಾಖೆಗೆ ಆಗ್ರಹಿಸಲಾಗಿದೆ.
ಅದೇ ರೀತಿಯಲ್ಲಿ ಗೋವಿಂದ ಅವರು ಮಹದೇಶ್ವರ ಪ್ರೌಡಶಾಲೆಯಲ್ಲಿ ಬೇಸ್ತ ಜನಾಂಗದ ಕಾಲಂನಲ್ಲಿ ನಾಯಕ ಎಂದು ತಿದ್ದಿದ್ದಾರೆ ಎಂದು ದಾಖಲೆಗಳ ಸಹಿತ ದೂರು ಸಲ್ಲಿಸಿದ್ದಾರೆ. ಮತ್ತೊಂದೆಡೆ ಗೋವಿಂದ ಅವರ ಸಹೋದರ ನಾಗರಾಜು ಅವರು 5ನೇ ತರಗತಿ ದಾಖಲಾತಿಯಲ್ಲಿ ಬೇಸ್ತ ಎಂದೇ ದಾಖಲಾಗಿರುವ ಪ್ರತಿಯನ್ನು ಸಹ ಉಪನಿರ್ದೇಶಕ ಚಂದ್ರ ಪಾಟೀಲ್ ಅವರಿಗೆ ಸಲ್ಲಿಸಿದ್ದು, ಉಪ ನಿರ್ದೇಶಕರು ತನಿಖೆಗೂ ಆದೇಶಿಸಿದ್ದಾರೆ ಎನ್ನಲಾಗಿದೆ.---