ಮಗುವಿನ ಸಾವಿಗೆ ಕಾರಣನಾದ ನಕಲಿ ವೈದ್ಯನ ಬಂಧನ

KannadaprabhaNewsNetwork |  
Published : Jun 13, 2025, 03:14 AM IST
12ಕೆಆರ್ ಎಂಎನ್ 4.ಜೆಪಿಜಿನಕಲಿ ವೈದ್ಯ ಮಹಮ್ಮದ್ ಸೈಫುಲ್ಲಾ | Kannada Prabha

ಸಾರಾಂಶ

ಈತ ನೀಡಿದ ಚುಚ್ಚುಮದ್ದಿನಿಂದ ಚಾಮುಂಡೇಶ್ವರಿ ಬಡಾವಣೆ ವಾಸಿ ಆರ್.ಶಿವರಾಜ್ ಮತ್ತು ರೋಜಾ ದಂಪತಿಯ ಆರು ತಿಂಗಳ ಶರಣ್ಯ ಮೃತಪಟ್ಟಿದೆ.

ಕನ್ನಡಪ್ರಭ ವಾರ್ತೆ ರಾಮನಗರ

ಚುಚ್ಚು ಮದ್ದು ನೀಡಿ ಮಗುವಿನ ಸಾವಿಗೆ ಕಾರಣನಾದ ನಕಲಿ ವೈದ್ಯನನ್ನು ರಾಮನಗರ ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಗರದ ಬಾಲಗೇರಿಯಲ್ಲಿರುವ ಅಲ್ ಖೈರ್ ಫೌಂಡೇಶನ್ ಕ್ಲಿನಿಕ್ ನ ನಕಲಿ ವೈದ್ಯ ಮಹಮ್ಮದ್ ಸೈಫುಲ್ಲ ಬಂಧಿತ ಆರೋಪಿ. ಈತ ನೀಡಿದ ಚುಚ್ಚುಮದ್ದಿನಿಂದ ಚಾಮುಂಡೇಶ್ವರಿ ಬಡಾವಣೆ ವಾಸಿ ಆರ್.ಶಿವರಾಜ್ ಮತ್ತು ರೋಜಾ ದಂಪತಿಯ ಆರು ತಿಂಗಳ ಶರಣ್ಯ ಮೃತಪಟ್ಟಿದೆ.

ಮಗು ಶರಣ್ಯಳಿಗೆ ಐದು ತಿಂಗಳ ಹಿಂದೆ ಬಲಗಾಲಿನ ತೊಡೆಯಲ್ಲಿ ಗಂಟು ತರಹ ಆಗಿ ಕೀವು ಕಟ್ಟಿಕೊಂಡಿತ್ತು. ಆಗ ಶಿವರಾಜ್ ರವರು ಅಲ್ ಖೈರ್ ಫೌಂಡೇಶನ್ ಕ್ಲಿನಿಕ್‌ನಲ್ಲಿ ಡಾ.ಮಹಮ್ಮದ್ ಸೈಫುಲ್ಲಾ ಬಳಿ ಚಿಕಿತ್ಸೆ ಕೊಡಿಸಿದ್ದರು. ಸ್ವಲ್ಪ ದಿನಗಳಿಂದ ಮಗುವಿನ ಎಡ ಮತ್ತು ಬಲ ಗಾಲಿನ ತೊಡೆಯ ಜಾಗದಲ್ಲಿ ಪುನಃ ಗಂಟು ಕಾಣಿಸಿಕೊಂಡಿದೆ.

ಜೂ. 10ರಂದು ರಾತ್ರಿ 8 ಗಂಟೆಗೆ ಶಿವರಾಜ್ ಅವರು ಪತ್ನಿ ರೋಜಾ ಅವರೊಂದಿಗೆ ಮಗುವನ್ನು ವೈದ್ಯ ಮಹಮ್ಮದ್ ಸೈಫುಲ್ಲಾ ಬಳಿ ಕರೆದುಕೊಂಡು ಹೋದಾಗ ಎರಡು ತೊಡೆಗಳಿಗೆ ಇಂಜೆಕ್ಷನ್ ಕೊಟ್ಟಿದ್ದಾರೆ. ರಾತ್ರಿ 9ರ ಸಮಯದಲ್ಲಿ ಊಟ ಮಾಡಿಸುವಾಗ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದೆ. ಉಸಿರಾಟದ ಸಮಸ್ಯೆ ಉಂಟಾದಾಗ ಶಿವರಾಜ್ ರವರು ಫೋನ್ ನಲ್ಲಿ ಸಂಪರ್ಕಿಸಿದಾಗ ಸೈಫುಲ್ಲಾರವರು ಹೇಳಿದಂತೆ ಮೆಡಿಕಲ್ ಸ್ಟೋರ್ ನಲ್ಲಿ ಡ್ರಾಪ್ಸ್ ತೆಗೆದುಕೊಂಡು ಮಗುವಿನ ಮೂಗಿಗೆ ಹಾಕಿದಾಗ ಉಸಿರಾಟದ ತೊಂದರೆ ಸರಿ ಹೋಗಿದೆ.

ಬೆಳಗಿನ ಜಾವ 5.30ರ ಸಮಯದಲ್ಲಿಯೂ ಮಗು ಶರಣ್ಯ ಚಡಪಡಿಸುತ್ತಿದ್ದ ಕಾರಣ ಶ್ರೀ ದೇವಿ ಮಿಷನ್ ಆಸ್ಪತ್ರೆಗೆ ಹೋಗಿ ತೋರಿಸಿದಾಗ ಅಲ್ಲಿ ಪರೀಕ್ಷಿಸಿದ ವೈದ್ಯರು ಮಗು ಮೃತಪಟ್ಟಿದೆ ಎಂದು ತಿಳಿಸಿದ್ದಾರೆ. ಆಗ ದಂಪತಿ ಮಗುವಿಗೆ ಚಿಕಿತ್ಸೆ ನೀಡಿದ ಸೈಫುಲ್ಲಾ ಬಳಿ ಹೋದಾಗ ನಾನೇನೂ ಮಾಡಲು ಆಗುವುದಿಲ್ಲ. ಬೇಕಾದರೆ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಎಂದು ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ.

ಅಲ್ಲಿಂದ ಜಿಲ್ಲಾಸ್ಪತ್ರೆಯಲ್ಲಿ ತೋರಿಸಿದಾಗಲು ವೈದ್ಯರು ಮಗು ಮೃತಪಟ್ಟಿದೆ ಎಂದು ಹೇಳಿದ್ದಾರೆ. ಆನಂತರ ದಂಪತಿಗೆ ಮಹಮ್ಮದ್ ಸೈಫುಲ್ಲಾ ಕಾನೂನು ಬದ್ಧವಾಗಿ ವೈದ್ಯರಲ್ಲ ಎಂಬುದು ಗೊತ್ತಾಗಿದೆ.

ಅಕ್ರಮವಾಗಿ ಹಣ ಗಳಿಸುವ ಉದ್ದೇಶದಿಂದ ತಾನು ವೈದ್ಯ ಎಂದು ಅಲ್ ಖೈರ್ ಫೌಂಡೇಶನ್ ಎಂಬ ನಕಲಿ ಕ್ಲಿನಿಕ್ ತೆರೆದಿರುವ ಮತ್ತು ತಮ್ಮ ಮಗುವಿನ ಸಾವಿಗೆ ಕಾರಣನಾದ ನಕಲಿ ವೈದ್ಯ ಮಹಮ್ಮದ್ ಸೈಫುಲ್ಲಾ ವಿರುದ್ಧ ಮಗು ಶರಣ್ಯ ತಂದೆ ಶಿವರಾಜ್ ರಾಮನಗರ ಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ಈ ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ತಿಳಿಸಿ ಪರಿಶೀಲನೆ ನಡೆಸಿದಾಗ ಆರೋಪಿ ಮಹಮ್ಮದ್ ಸೈಫುಲ್ಲಾ ವೈದ್ಯ ವೃತ್ತಿಯು ಕಾನೂನು ಬದ್ಧವಾಗಿಲ್ಲ ಎಂಬುದು ಕಂಡು ಬಂದಿದೆ. ತಕ್ಷಣ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.

--------------------------

12ಕೆಆರ್ ಎಂಎನ್ 4.ಜೆಪಿಜಿ

ನಕಲಿ ವೈದ್ಯ ಮಹಮ್ಮದ್ ಸೈಫುಲ್ಲಾ

-------------------------

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ