ಮಂಡ್ಯ ಮಂಜುನಾಥ
ನಿಗದಿತ ವಿದ್ಯಾರ್ಹತೆ ಇಲ್ಲದಿದ್ದರೂ ನಿಯಮ ಬಾಹಿರವಾಗಿ ನಿರ್ಮಿತಿ ಕೇಂದ್ರದ ಸೈಟ್ ಎಂಜಿನಿಯರ್‌ಗಳಾಗಿ ನೇಮಕ ಮಾಡಿಕೊಂಡಿದ್ದ ಮೂವರನ್ನು ಹುದ್ದೆಯಿಂದ ಕೈಬಿಡುವಂತೆ ಜಿಲ್ಲಾಧಿಕಾರಿಗೆ ತನಿಖಾ ತಂಡ ಶಿಫಾರಸು ಮಾಡಿದೆ.
ನಿರ್ಮಿತಿ ಕೇಂದ್ರದ ಬಿ.ಎಲ್.ವೇಣುಗೋಪಾಲ್, ಕೆ.ಪ್ರಶಾಂತ್, ಮಂಡ್ಯ ತಾಲೂಕು ಚಿಕ್ಕಬಳ್ಳಿಯ ಕೆ.ಪಿ.ಶ್ರೀಧರ್ ಕೆಲಸದಿಂದ ವಜಾಗೊಂಡ ನಿಯಮಬಾಹಿರವಾಗಿ ನೇಮಕಗೊಂಡು ವಜಾಗೊಂಡ ನೌಕರರಾಗಿದ್ದಾರೆ.ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಅವರು ನಿರ್ಮಿತಿ ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಈ ಮೂವರು ನಕಲಿ ಅಂಕಪಟ್ಟಿ ದಾಖಲೆಗಳನ್ನು ನೀಡಿ ಕೆಲಸಕ್ಕೆ ಸೇರಿರುವ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು.
ವರದಿಯಲ್ಲಿರುವುದೇನು?
ಕೆ.ಪಿ.ಶ್ರೀಧರ್ ೧.೮.೨೦೧೩ರಿಂದ ನಿರ್ಮಿತಿ ಕೇಂದ್ರದಲ್ಲಿ ಸೈಟ್ ಎಂಜಿನಿಯರ್ ಆಗಿ ಕರ್ತವ್ಯನಿರ್ವಹಿಸಿದ್ದು, ನೇಮಕಗೊಂಡ ಸಂದರ್ಭದಲ್ಲಿ ಡಿಪ್ಲೊಮಾ ಉತ್ತೀರ್ಣರಾದ ಪ್ರಮಾಣಪತ್ರ ಹಾಜರುಪಡಿಸಿರುವುದು ಕಂಡುಬಂದಿಲ್ಲ. ಶ್ರೀಧರ್ ಅರಕೆರೆಯ ಸರ್ಕಾರಿ ಪಾಲಿಟೆಕ್ನಿಕಕ್ ಕಾಲೇಜಿನಲ್ಲಿ ೨೦೨೩ರ ನವೆಂಬರ್-ಡಿಸೆಂಬರ್‌ನಲ್ಲಿ ಡಿಪ್ಲೊಮಾ ತೇರ್ಗಡೆಯಾಗಿದ್ದು, ಈ ಸಂಬಂಧ ಕಾಲೇಜಿನ ಪ್ರಾಂಶುಪಾಲರಿಂದ ತಾತ್ಕಾಲಿಕ ಡಿಪ್ಲೊಮಾ ಪ್ರಮಾಣಪತ್ರವನ್ನು ೬.೨.೨೦೨೪ರಲ್ಲಿ ಪಡೆದಿರುವುದು ಕಂಡುಬಂದಿದೆ. ಇದರ ಪ್ರಕಾರ ಶ್ರೀಧರ್ ಡಿಪ್ಲೊಮಾ ಉತ್ತೀರ್ಣರಾಗದೆ ೨೦೧೩ರಿಂದ ಸೈಟ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ವಿದ್ಯಾಭ್ಯಾಸದ ದಾಖಲೆಗಳಿಲ್ಲದೆ ಕರ್ತವ್ಯ ನಿರ್ವಹಿಸಲು ಅವಕಾಶವಿಲ್ಲವೆಂದು ಯೋಜನಾ ನಿರ್ದೇಶಕರಾಗಿದ್ದ ಹರ್ಷ ಅವರು ತಿಳಿಸಿದ ಬಳಿಕ ನಿರ್ಮಿತಿ ಕೇಂದ್ರದ ಸೈಟ್ ಎಂಜಿನಿಯರ್ ಕೆಲಸ ಬಿಟ್ಟಿರುವುದು ಗೊತ್ತಾಗಿದೆ.
ಹಾಗಾಗಿ ಈ ಮೂವರು ನೌಕರರು ನೇಮಕಾತಿ ಹೊಂದುವ ದಿನ ನಿಗದಿತ ವಿದ್ಯಾರ್ಹತೆ ಇಲ್ಲದಿದ್ದರೂ ನೇಮಕಾತಿ ಮಾಡಿಕೊಂಡಿರುವುದು ನಿಯಮಬಾಹಿರವಾಗಿದೆ. ಆದ್ದರಿಂದ ಈ ಮೂವರನ್ನೂ ಮಂಡ್ಯ ನಿರ್ಮಿತಿ ಕೇಂದ್ರದ ಸೈಟ್ ಎಂಜಿನಿಯರ್ ಹುದ್ದೆಯಿಂದ ಕೈಬಿಡುವಂತೆ ನಿಯಮಾನುಸಾರ ಕ್ರಮ ವಹಿಸಲು ಶಿಫಾರಸು ಮಾಡಿದೆ.ಯೋಜನಾ ವ್ಯವಸ್ಥಾಪಕರಾಗಿದ್ದ ನರೇಶ್ ನೇರ ಹೊಣೆ
ವಿವಾದಿತ ನೌಕರರನ್ನು ಸೈಟ್ ಎಂಜಿನಿಯರ್ ಹುದ್ದೆಗೆ ನಿಯಮಬಾಹಿರವಾಗಿ ನೇಮಕ ಮಾಡಿಕೊಳ್ಳಲು ಹಿಂದಿನ ಯೋಜನಾ ವ್ಯವಸ್ಥಾಪಕ ನರೇಶ್ ಅವರೇ ನೇರ ಕಾರಣಕರ್ತರು ಎಂದು ತನಿಖಾ ತಂಡ ವರದಿಯಲ್ಲಿ ತಿಳಿಸಿದೆ.
ಅಭ್ಯರ್ಥಿಗಳು ಸಲ್ಲಿಸಿದ್ದ ವಿದ್ಯಾರ್ಹತೆಯ ದಾಖಲೆಗಳ ನೈಜತೆಯ ಕುರಿತು ನೇಮಕಾತಿ ಪೂರ್ವದಲ್ಲಿ ದೃಢೀಕರಣ ಪಡೆದುಕೊಂಡಿಲ್ಲ. ವೃಂದಬಲವನ್ನು ನಿಗದಿಪಡಿಸಿ ಆಯಾ ಹುದ್ದೆಗೆ ತತ್ಸಮಾನ ವಿದ್ಯಾರ್ಹತೆ, ವೇತನ ನಿಗದಿಪಡಿಸಿಲ್ಲ. ಯೋಜನಾ ವ್ಯವಸ್ಥಾಪಕರಾಗಿದ್ದ ನರೇಶ್ ವಿವಾದಿತ ನೌಕರರಲ್ಲಿ ಒಬ್ಬರಾದ ಕೆ.ಪ್ರಶಾಂತ್ ನೇಮಕಾತಿ ವಿಚಾರವಾಗಿ ಹೊರಡಿಸಿರುವ ನೇಮಕಾತಿ ಕಡತ ಮತ್ತು ಪತ್ರಿಕಾ ಪ್ರಕಟಣೆ ತನಿಖಾ ತಂಡಕ್ಕೆ ದೊರಕಿಲ್ಲ. ೨೦೧೫ ರಿಂದ ೨೦೧೮ರ ಕಡತದಲ್ಲಿ ಎಂಜಿನಿಯರ್‌ಗಳ ನೇಮಕಾತಿ ಸಂದರ್ಭದಲ್ಲಿ ಹೊರಡಿಸಿರುವ ಪತ್ರಿಕಾ ಪ್ರಕಟಣೆಯ ವೆಚ್ಚ ಪಾವತಿಗೆ ಅನುಮತಿಗಾಗಿ ಮಂಡಿಸಿರುವುದು ಲಭ್ಯವಿರುವ ಪ್ರತ್ಯೇಕ ಟಿಪ್ಪಣಿ ಹಾಳೆಯ ನಕಲು ಪ್ರತಿಯಿಂದ ಕಂಡುಬಂದಿರುವುದಾಗಿ ವರದಿಯಲ್ಲಿ ದಾಖಲಿಸಿದೆ.