ಗದಗ: ರಾಜ್ಯದಲ್ಲಿ ನಕಲಿ ಕಾರ್ಮಿಕ ಕಾರ್ಡ್‌ಗಳ ಹಾವಳಿ ಮಿತಿಮೀರಿದ್ದು, ಸ್ವತಃ ಸಚಿವ ಸಂತೋಷ್ ಲಾಡ್ ಅವರೇ ಇದರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಶುಕ್ರವಾರ ಗದಗ ನಗರಕ್ಕೆ ಆಗಮಿಸಿದ ವೇಳೆಯಲ್ಲಿ ನಡೆಯಿತು. ಸಚಿವ ಸಂತೋಷ ಲಾಡ್ ಅವರನ್ನು ಭೇಟಿ ಮಾಡಿ, ವಿದ್ಯಾರ್ಥಿವೇತನ ಕಡಿತಗೊಂಡ ಬಗ್ಗೆ ಮನವಿ ಸಲ್ಲಿಸಲು ಬಂದಿದ್ದ ಕಟ್ಟಡ ಕಾರ್ಮಿಕರ ಎದುರೇ ಸಚಿವರು ತಮ್ಮ ಅಸಹಾಯಕತೆಯನ್ನು ತೋಡಿಕೊಂಡರು.
ಕಟ್ಟಡ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ ಕಡಿತಗೊಂಡಿರುವ ಬಗ್ಗೆ ಬಂದ ಮನವಿಗೆ ಪ್ರತಿಕ್ರಿಯಿಸಿದ ಸಚಿವ ಲಾಡ್, ನಕಲಿ ಕಾರ್ಡ್‌ಗಳು ಹೆಚ್ಚಾಗಿರುವುದರಿಂದಲೇ ವಿದ್ಯಾರ್ಥಿವೇತನ ಸಿಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಕುರಿತು ಸದ್ಯದಲ್ಲಿಯೇ ನಮ್ಮ ಇಲಾಖೆ ಅಧಿಕಾರಿಗಳು ಪರಿಶೀಲಿಸಿ, ಅರ್ಹರಿಗೆ ವಿದ್ಯಾರ್ಥಿವೇತನ ನೀಡುತ್ತಾರೆ ಎಂದು ಭರವಸೆ ನೀಡಿದರು.
ರಾಜ್ಯದಲ್ಲಿ ಒಟ್ಟಾರೆ 56 ಲಕ್ಷ ಕಾರ್ಮಿಕ ಕಾರ್ಡ್‌ಗಳನ್ನು ಮಾಡಲಾಗಿದೆ. ಬಿಜೆಪಿ, ಕಾಂಗ್ರೆಸ್, ಯೂನಿಯನ್‌ನವರು (ಎಲ್ಲರೂ) ಸೇರಿ ಇಷ್ಟೊಂದು ಕಾರ್ಮಿಕ ಕಾರ್ಡ್‌ಗಳನ್ನು ಮಾಡಿದ್ದಾರೆ. 56 ಲಕ್ಷ ಕಾರ್ಡ್‌ಗಳನ್ನು ಮಾಡಿದ ಮೇಲೂ, ಇನ್ನೂ ಕಾರ್ಮಿಕ ಕಾರ್ಡ್ ಮಾಡಿಕೊಡಬೇಕಾ? ಎಂದು ಪ್ರಶ್ನಿಸಿದ ಅವರು, ಎಲ್ಲರೂ ಕಾರ್ಮಿಕರ ಕಾರ್ಡ್ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿವೇತನ ಸಿಗದವರ ಪಟ್ಟಿಯನ್ನು ನೀಡುವಂತೆ ಕಾರ್ಮಿಕರಿಗೆ ಸೂಚಿಸಿದ ಸಚಿವರು, ಸಮೀಕ್ಷೆ ನಡೆಸಿ ಅರ್ಹ ಫಲಾನುಭವಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುವುದು ಎಂದು ಭರವಸೆ ನೀಡಿದರು.