)
ಹುಬ್ಬಳ್ಳಿ:
ವಿಧಾನಸೌಧ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್ ರದ್ದುಪಡಿಸುವಂತೆ ಬೆಂಗಳೂರು ಹೈಕೋರ್ಟ್ ಮೆಟ್ಟಿಲೇರಿದ್ದ ಇವರ ಅರ್ಜಿಯನ್ನು ನ್ಯಾಯಾಧೀಶರಾದ ಎಂ. ನಾಗಪ್ರಸನ್ನ ಅವರು ವಜಾಗೊಳಿಸಿದರು. ಆಗ ಬಂಧನದ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿ ಬೆಂಗಳೂರಿನ 41ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಸೆನ್ಸ್ ಕೋರ್ಟ್ ಮೊರೆಹೋಗಿದ್ದರು. ಅಲ್ಲೂ ಕೂಡ ಅರ್ಜಿ ತಿರಸ್ಕೃತಗೊಂಡಿದೆ.
ಸೆ. 30ರಂದು ಕೆಳ ನ್ಯಾಯಾಲಯದಲ್ಲಿ ಇವರ ಅರ್ಜಿ ತಿರಸ್ಕೃತಗೊಂಡ ಹಿನ್ನಲೆಯಲ್ಲಿ ವಿಧಾನಸೌಧ ಠಾಣೆಯ ಪೊಲೀಸರು ಅ. 12ರಂದು ಸುವರ್ಣಲತಾ ಗದಿಗೆಪ್ಪಗೌಡರ ಅವರನ್ನು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಒಪ್ಪಿಸಿದ್ದಾರೆ.ಈ ಪ್ರಕರಣದಲ್ಲಿ ಹೈಕೋರ್ಟ್ ಮತ್ತು ಸೆಷನ್ ಕೋರ್ಟ್‌ಗಳಲ್ಲಿ ದೂರುದಾರರ ಪರವಾಗಿ ಹಿರಿಯ ಹೈಕೋರ್ಟ್ ನ್ಯಾಯವಾದಿಗಳಾದ ಪೂಜಾ ಸವದತ್ತಿ, ಚೇತನ ಕುಲಕರ್ಣಿ ವಾದ ಮಂಡಿಸಿದ್ದರು.
ಸುವರ್ಣಲತಾ ಗದಿಗೆಪ್ಪಗೌಡರ ತಾನು ವಕೀಲೆ ಎಂದು ಕಪ್ಪು ಕೊಟ್ ಧರಿಸಿ ಸ್ಥಳೀಯ ನ್ಯಾಯಾಲಯಕ್ಕೆ ಹೋಗಿ ಕೇಸು ನಡೆಸುತ್ತಿದ್ದರು. ಎಲ್ಲೆಡೆ ತಾವು ವಕೀಲೆ ಎಂದೇ ಪರಿಚಯಿಸಿಕೊಂಡು ಅಮಾಯಕರು, ಅಧಿಕಾರಿಗಳಿಗೆ ಅವಾಜ್ ಹಾಕುತ್ತಿದ್ದರು ಎನ್ನಲಾಗಿದೆ. ಇವರಿಂದ ಬೆದರಿಕೆ ಮತ್ತು ವಂಚನೆಗೆ ಒಳಗಾದ ಕೆಲವರು ಇವರ ವಕೀಲಿ ವೃತ್ತಿಯ ಬಗ್ಗೆ ಅನುಮಾನ ಬಂದು "ಕರ್ನಾಟಕ ರಾಜ್ಯ ವಕೀಲರ ಪರಿಷತ್ " (ಕೆಎಸ್‌ಬಿಸಿ)ಗೆ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದರು. ಆಗ ಬಾರ್ ಕೌನ್ಸಿಲ್ ಇವರ ಕಾನೂನು ಪದವಿಯ ದಾಖಲೆಗಳನ್ನು ಬಿಹಾರದ ಚೌಧರಿ ಚರಣಸಿಂಗ್ ವಿವಿಗೆ ಕಳುಹಿಸಿದಾಗ, ವಿವಿ ಈ ದಾಖಲೆಗಳು ನಕಲಿ ಎಂದು ದೃಢಪಡಿಸಿತ್ತು. ಈ ಹಿನ್ನಲೆಯಲ್ಲಿ ಬಾರ್ ಕೌನ್ಸಿಲ್ ಇವರ ಸದಸ್ಯತ್ವ ರದ್ದುಗೊಳಿಸಿದೆ.
ಹಳೆ ಹುಬ್ಬಳ್ಳಿಯಲ್ಲಿ ಇವರು ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ನಡೆಸುತ್ತಿದ್ದರು. ಹೆಚ್ಚುವರಿ ಶುಲ್ಕ ವಿಷಯವಾಗಿ ಹಲವು ಪಾಲಕರು ಇವರ ವಿರುದ್ಧ ದೂರಿದ್ದರು. ಖೊಟ್ಟಿ ದಾಖಲೆ ಸಲ್ಲಿಸಿ ಸರ್ಕಾರದ ಅನುದಾನ ಪಡೆದಿದ್ದರು ಎನ್ನುವುದು ಬೆಳಕಿಗೆ ಬಂದ ಹಿನ್ನಲೆಯಲ್ಲಿ ಮತ್ತು ಮಕ್ಕಳ ಹಾಜರಾತಿ, ಸಿಬ್ಬಂದಿ ಕೊರತೆ, ಮೂಲಸೌಕರ್ಯ ಇಲ್ಲದಿರುವುದು ಇತ್ಯಾದಿ ಕಾರಣಗಳಿಂದ ಸರ್ಕಾರ ಈ ಶಾಲೆಯ ಮಾನ್ಯತೆಯನ್ನೇ ರದ್ದುಪಡಿಸಿದೆ. ಈ ಸಂದರ್ಭದಲ್ಲಿ ಬಿಇಒ, ಡಿಡಿಪಿಐ ವಿರುದ್ಧವೂ ಇವರು ದೂರು ಸಲ್ಲಿಸಿ ರಾದ್ಧಾಂತ ಮಾಡಿದ್ದರು.
ಹುಬ್ಬಳ್ಳಿ-ಧಾರವಾಡದಲ್ಲಿ ಹಲವರು ಇವರ ವಿರುದ್ಧ ದೂರು ದಾಖಲಿಸಿದ್ದಾರೆ. ಅವೆಲ್ಲವೂ ವಂಚನೆ, ಬೆದರಿಕೆ, ಪೊರ್ಜರಿ ಪ್ರಕರಣಗಳಾಗಿವೆ. ಅದರಂತೆ ಇವರು ಕೂಡ ಹಲವರ ವಿರುದ್ಧ ಪೊಲೀಸ್ ಠಾಣೆ, ಕೋರ್ಟುಗಳಲ್ಲಿ ಪ್ರಕರಣ ದಾಖಲಿಸಿದ್ದಾರೆ.