ಶಿರಹಟ್ಟಿಯಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಫಕೀರ ಸಿದ್ದರಾಮ ಶ್ರೀ ಚಾಲನೆ

KannadaprabhaNewsNetwork |  
Published : Oct 03, 2025, 01:07 AM IST
ಫಕೀರ ಸಿದ್ದರಾಮ ಸ್ವಾಮೀಜಿಯವರು ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. | Kannada Prabha

ಸಾರಾಂಶ

ಒಂದೆಡೆ ಶ್ರೀಗಳು ಬನ್ನಿ ಮುಡಿಯುವ ಕಾರ್ಯಕ್ಕೆ ಚಾಲನೆ ನೀಡಿ ಜನತೆಯನ್ನು ಆಶೀರ್ವದಿಸಿದರು. ಮತ್ತೊಂದೆಡೆ ಮರಾಠಾ ಗಲ್ಲಿಯಿಂದ ಭಕ್ತರು ಪಲ್ಲಕ್ಕಿಯಲ್ಲಿ ಅಂಬಾಭವಾನಿ ದೇವಿಯ ಭಾವಚಿತ್ರ ಹೊತ್ತು ಮುತ್ತೈದೆಯರು, ಮಹಿಳೆಯರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಹಬ್ಬದ ಕಳೆ ಹೆಚ್ಚಿಸಿದರು.

ಶಿರಹಟ್ಟಿ: ಶಿರಹಟ್ಟಿ ಪಟ್ಟಣ ಭಾವೈಕ್ಯತೆಗೆ ಹೆಸರಾಗಿದ್ದು, ದಸರಾ ಹಾಗೂ ಬನ್ನಿ ಮುಡಿಯುವ ಸಂಪ್ರದಾಯವೂ ವಿಶಿಷ್ಟವಾಗಿ ನಡೆಯಿತು. ಫಕೀರ ಸಿದ್ದರಾಮ ಸ್ವಾಮಿಗಳು ಪಟ್ಟಣದ ಕೆಳಗೇರಿ ಓಣಿಯ ಗರಿಬನ್ ನವಾಜ್ ದರ್ಗಾದ ಸಮೀಪ ಗುರುವಾರ ಸಂಜೆ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಪ್ರಮುಖ ಬೀದಿಗಳಲ್ಲಿ ವಾದ್ಯ ವೃದಗಳ ಜತೆಗೆ ಪಲ್ಲಕ್ಕಿಯಲ್ಲಿ ಮೆರವಣಿಗೆ ನಡೆಸಿ ಬನ್ನಿ ಮುಡಿಯುತ್ತಾ ಜನತೆಯನ್ನು ಆಶೀರ್ವದಿಸಿದರು. ಕಳೆದ ೯ ದಿನಗಳಿಂದ ನಡೆದ ನವರಾತ್ರಿ ಹಬ್ಬವನ್ನು ಕೊನೆಯ ದಿನವಾದ ಗುರುವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಪಟ್ಟಣದಲ್ಲಿ ಬನ್ನಿ ಮುಡಿಯುವ ಆಚರಣೆಗೆ ಸ್ವಾಮಿಗಳೇ ಚಾಲನೆ ನೀಡಿದರು. ಅನೇಕ ಶತಮಾನಗಳಿಂದ ಈ ಸಂಪ್ರದಾಯ ನಡೆದು ಬಂದಿದೆ. ಪರಸ್ಪರ ದ್ವೇಷ ಹಾಗೂ ಭೇದ ಭಾವನೆ ತೊರೆದು ಬನ್ನಿ ಮುಡಿದು ದ್ವೇಷ ಬಿಡು ಪ್ರೀತಿ ಮಾಡು ಎಂದು ಸಾರಿದರು. ಹಿರಿಯರು ಹೇಳುವಂತೆ ಈ ಸಂಪ್ರದಾಯಕ್ಕೆ ಅನೇಕ ದಶಕಗಳ ಇತಿಹಾಸವೇ ಇದೆ.ಒಂದೆಡೆ ಶ್ರೀಗಳು ಬನ್ನಿ ಮುಡಿಯುವ ಕಾರ್ಯಕ್ಕೆ ಚಾಲನೆ ನೀಡಿ ಜನತೆಯನ್ನು ಆಶೀರ್ವದಿಸಿದರು. ಮತ್ತೊಂದೆಡೆ ಮರಾಠಾ ಗಲ್ಲಿಯಿಂದ ಭಕ್ತರು ಪಲ್ಲಕ್ಕಿಯಲ್ಲಿ ಅಂಬಾಭವಾನಿ ದೇವಿಯ ಭಾವಚಿತ್ರ ಹೊತ್ತು ಮುತ್ತೈದೆಯರು, ಮಹಿಳೆಯರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಹಬ್ಬದ ಕಳೆ ಹೆಚ್ಚಿಸಿದರು.ಒಂಬತ್ತು ದಿನ ದೇವಿಯ ಘಟಸ್ಥಾಪನೆ ಮಾಡಿ, ಮಡಿಯಿಂದ ಪೂಜೆ ಸಲ್ಲಿಸಿ ಕೊನೆಯ ದಿನ ಆಯುಧ ಪೂಜೆ ಹಾಗೂ ಮಾರನೆ ದಿನ ವಿಜಯದಶಮಿಯನ್ನು ವಿಜೃಂಭಣೆಯಿಂದ ಆಚರಿಸುವುದು ರೂಡಿ. ವಿಜಯದಶಮಿಯ ಸಡಗರಕ್ಕೆ ನಗರವೆಲ್ಲ ಶೃಂಗಾರಗೊಂಡಿತ್ತು. ದೀಪಾಲಂಕಾರ- ತಳಿರು- ತೋರಣಗಳಿಂದ ಬೀದಿಗಳು ಝಗಮಗಿಸುತ್ತಿದ್ದವು. ಈ ಬಾರಿ ಮಳೆಯಿಂದ ಹರ್ಷಿತರಾಗಿರುವ ತಾಲೂಕಿನ ರೈತಾಪಿ ಸೇರಿದಂತೆ ಎಲ್ಲ ವರ್ಗದ ಜನತೆ ಹಿಂಗಾರು ಹಂಗಾಮಿನ ಕೃಪೆಗಾಗಿ ಪ್ರಾರ್ಥಿಸುತ್ತ ದೇವಿ ಆರಾಧನೆ ದಸರಾ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು.ಸ್ವಾಮಿಗಳಿಂದ ಬನ್ನಿ ಮುಡಿಯುವ ಕಾರ್ಯಕ್ರಮ ಪ್ರಾರಂಭಗೊಂಡ ನಂತರ ಜನತೆ ಬನ್ನಿಕೊಟ್ಟು ಬಂಗಾರದಂತೆ ಬಾಳೋಣ ಎಂದು ಸ್ನೇಹಿತರು, ಬಂಧುಗಳು, ಹಿರಿ-ಕಿರಿಯರು ಬನ್ನಿ ವಿನಿಮಯ ಮಾಡಿಕೊಳ್ಳುವ ಮೂಲಕ ವಿಜಯ ದಶಮಿ ಸಂಭ್ರಮದಲ್ಲಿ ಮಿಂದೆದ್ದರು. ಪರಸ್ಪರ ಬನ್ನಿ ಕೊಟ್ಟು ನಾವು ನೀವು ಬಂಗಾರದಂಗ್ ಇರೋಣ ಎಂಬ ಶುಭ ಹಾರೈಕೆಯೊಂದಿಗೆ ಹಿರಿಯರು ಕಿರಿಯರಿಗೆ ಆಶೀರ್ವಾದ ಮಾಡಿದರು. ಮುಖಂಡರಾದ ಡಿ.ಎನ್. ಡಬಾಲಿ, ಚಂದ್ರಕಾಂತ ನೂರಶೆಟ್ಟರ, ಎನ್.ಆರ್. ಕುಲಕರ್ಣಿ, ಹುಮಾಯೂನ್ ಮಾಗಡಿ, ಹೊನ್ನಪ್ಪ ಶಿರಹಟ್ಟಿ, ಅಜ್ಜು ಪಾಟೀಲ, ಯಲ್ಲಪ್ಪ ಇಂಗಳಗಿ, ಮಹಾಂತೇಶ ದಶಮನಿ, ಅಪ್ಪಣ್ಣ ಕುಬೇರ, ಬಾಬು ಪಾಟೀಲ, ಬಾಬು ತಹಸೀಲ್ದಾರ, ಹಸರತ ಢಾಲಾಯತ, ಮಾಬೂಸಾಬ ಮಾಚೇನಹಳ್ಳಿ ಇದ್ದರು.

PREV

Recommended Stories

ಸರ್ಕಾರಿ ನೌಕರರ ಸೊಸೈಟಿಗೆ 50.58 ಲಕ್ಷ ಲಾಭ
ಡಿಸಿಸಿ ಬ್ಯಾಂಕ್‌ಗೆ ಅಣ್ಣಾಸಾಹೇಬ್ ಜೊಲ್ಲೆ ಆಯ್ಕೆ ನಿಶ್ಚಿತ