ಕುಷ್ಟಗಿ: ನಮ್ಮ ಭಾರತೀಯರು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಗೌರವ ಕೊಡುವ ಸಂಪ್ರದಾಯ ಮರೆಯಾಗುತ್ತಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಂ.ಎಲ್. ಪೂಜೇರಿ ಹೇಳಿದರು.
ಪಟ್ಟಣದ ಮಾತೋಶ್ರೀ ಹೊಳಿಯಮ್ಮ ಮಹಿಳಾ ಕಲಾ ಪದವಿ ಮಹಾವಿದ್ಯಾಲಯದಲ್ಲಿ ಕುಷ್ಟಗಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿ ಅನುಕರಣೆ ಮಾಡುತ್ತಿರುವುದರಿಂದ ಸಾಮಾಜಿಕ ಮೌಲ್ಯಗಳು ಕುಸಿಯುತ್ತಿದ್ದು, ಈ ಪರಿಣಾಮದಿಂದ ಮಹಿಳೆಯನ್ನು ಸಹೋದರಿಯ ಭಾವನೆಯಲ್ಲಿ ನೋಡುವುದು ಕಡಿಮೆಯಾಗಿದೆ. ನಮ್ಮ ಸಂಸ್ಕೃತಿ ಮೈಗೂಡಿಸಿಕೊಂಡು ಮಹಿಳೆಯರನ್ನು ಗೌರವಿಸಿ ಸಹೋದರಿಯ ಭಾವನೆಯಿಂದ ಕಾಣಬೇಕು ಎಂದರು.ಸಮಾಜದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲೆ ದೌರ್ಜನ್ಯಗಳಾದ ಲೈಂಗಿಕ ದೌರ್ಜನ್ಯ, ಬಾಲ್ಯ ವಿವಾಹ, ಭ್ರೂಣ ಹತ್ಯೆ, ಮಾನವ ಕಳ್ಳಸಾಗಾಣಿಕೆ ಸೇರಿದಂತೆ ಅನೇಕ ದೌರ್ಜನ್ಯಗಳು ಕಂಡುಬಂದಲ್ಲಿ ಸಮೀಪದ ಪೊಲೀಸ್ ಠಾಣೆ ಅಥವಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಬೇಕು. ಮಹಿಳಾ ರಕ್ಷಣೆಯ ಬಗ್ಗೆ ಕಾನೂನಿನ ತಿಳಿವಳಿಕೆ ಪಡೆಯಬೇಕು ಎಂದರು.
ಪ್ಯಾನಲ್ ವಕೀಲರಾದ ಲತಾ ಸ್ಥಾವರಮಠ ಉಪನ್ಯಾಸ ನೀಡಿ, ಮಹಿಳಾ ಮತ್ತು ಮಕ್ಕಳ ರಕ್ಷಣೆಗಾಗಿ ಅನೇಕ ಕಾನೂನೂಗಳು ಇದ್ದು, ಈ ಕಾನೂನುಗಳು ಜಾರಿಗೆ ಬರಬೇಕಾದರೆ ಎಲ್ಲರ ಸಹಕಾರ ಅಗತ್ಯ. ಸಾರ್ವಜನಿಕರು ಸಹ ಅದಕ್ಕೆ ಕೈಜೋಡಿಸಬೇಕು. 2006 ಬಾಲ್ಯವಿವಾಹ ನಿಷೇಧ ಕಾಯ್ದೆ, 2009 ಹೆಣ್ಣು ಭ್ರೂಣಹತ್ಯೆ ಕಾಯ್ದೆ, 2016ರ ರಕ್ಷಣಾ ಕಾಯ್ದೆ ಹಾಗೂ ಮಹಿಳಾ ಮತ್ತು ಮಕ್ಕಳ ಹಕ್ಕುಗಳ ಕುರಿತು ಸಮಗ್ರ ಮಾಹಿತಿ ನೀಡಿದರು.ಸಂಸ್ಥೆಯ ಅಧ್ಯಕ್ಷ ಹನುಮಂತಪ್ಪ ಚೌಡ್ಕಿ ಮಾತನಾಡಿ, ಶತಮಾನಗಳಿಂದ ಹೆಣ್ಣಿನ ಮೇಲೆ ನಿರಂತರವಾಗಿ ಶೋಷಣೆ ನಡೆಯುತ್ತಾ ಬಂದಿದ್ದು, ಇದನ್ನು ತಡೆಗಟ್ಟಲು ಹೆಣ್ಣುಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು ಎಂದರು.
ಕಾಲೇಜು ಪ್ರಾಚಾರ್ಯ ತಿಪ್ಪಣ್ಣ ಬಿಜಕಲ್ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ದೊಡ್ಡನಗೌಡ ಪಾಟೀಲ, ಸಂಗನಗೌಡ ಪಾಟೀಲ, ಪಿ. ಮ್ಯಾತ್ರಿ ಮಲ್ಲಿಕಾರ್ಜುನ, ಈರಮ್ಮ ಮಡಿವಾಳರ, ಶಿವಮಲ್ಲಮ್ಮ ಕಂದಕೂರು, ಶರಣಪ್ಪ ಮಡಿವಾಳರ, ಮಂಜುನಾಥ ತಾಳಮರದ, ಸಮೀನಾಬೇಗಂ, ಸಂಗಪ್ಪ ಬಿಳಿಯಪ್ಪನವರು, ಸುಜಾತಾ ಎಚ್., ಸುಂದರ ಚೌಡ್ಕಿ, ಪಿ. ರಮೇಶ, ಎಂ.ಬಿ. ಕೋನಸಾಗರ, ಎಸ್.ಕೆ. ಪಾಟೀಲ ಇದ್ದರು. ಬಸವರಾಜ ಪೂಜಾರ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಗಂಗೂಬಾಯಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ವಿಜಯಲಕ್ಷ್ಮೀ ಪಾಟೀಲ್ ಸ್ವಾಗತಿಸಿದರು. ನಾಗರಾಜ ಹಳ್ಳಿಗುಡಿ ವಂದಿಸಿದರು.