ಕನ್ನಡಪ್ರಭ ವಾರ್ತೆ ಯಾದಗಿರಿ
ಅವಿಭಕ್ತ ಕುಟುಂಬದಲ್ಲಿ ಮಹಿಳೆಯರು ಅನೋನ್ಯತೆಯಿಂದ ಇರುವ ಜೊತೆಗೆ ತಾಳ್ಮೆಯಿಂದ ಇದ್ದಲ್ಲಿ ಕೌಟುಂಬಿಕ ದೌರ್ಜನ್ಯಗಳಿಂದ ದೂರ ಉಳಿಯಬಹುದಾಗಿದೆ ಎಂದು ಜಿಲ್ಲಾ ಸತ್ರ ನ್ಯಾಯಾಧೀಶರಾದ ಬಿ.ಎಸ್. ರೇಖಾ ಅವರು ಹೇಳಿದರು.ನಗರದ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪೊಲೀಸ್, ಶಿಕ್ಷಣ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ-2005 ಹಾಗೂ ನಿಯಮಗಳು 2006ರ ಕುರಿತು ಸಂರಕ್ಷಣಾಧಿಕಾರಿಗಳು ಹಾಗೂ ಸಹಭಾಗೀದಾರ ಇಲಾಖೆಗಳ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ 2 ದಿನಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ಹೆಣ್ಣು ಮಕ್ಕಳು ಒಂದಿಲ್ಲೊಂದು ದೌರ್ಜನ್ಯಕ್ಕೆ ತುತ್ತಾಗುತ್ತಿದ್ದಾರೆ. ಶಿಶು ಭ್ರೂಣ ಹತ್ಯೆ, ಗಂಡು-ಹೆಣ್ಣು ವಿದ್ಯಾಭ್ಯಾಸದಲ್ಲಿ ತಾರತಮ್ಯಗಳಂತಹ ಸಮಸ್ಯೆಗಳು ಇನ್ನೂ ಸಮಾಜದಲ್ಲಿ ಬೇರೂರಿವೆ. ಇತ್ತೀಚಿಗೆ ಹೆಣ್ಣು ಮಕ್ಕಳಿಗೆ ಕುಟುಂಬಗಳಲ್ಲಿ ಒಳ್ಳೆಯ ಸಂಸ್ಕಾರ, ಶಿಕ್ಷಣ, ಕುಟುಂಬದೊಂದಿಗೆ ಅನ್ಯೊನ್ಯತೆಯೊಂದಿಗೆ ಇರುವಂತಹ ಬೆಳವಣಿಗೆಗಳು ಒಳ್ಳೆಯ ಬೆಳವಣಿಗೆಗಳಾಗಿವೆ. ಅದರಂತೆ ಸರ್ಕಾರವು ಕೂಡ ಅನ್ನದಾನ, ಉಚಿತ ಶಿಕ್ಷಣ, ವಿವಿಧ ಇಲಾಖೆಗಳ ಮೂಲಕ ವಿದ್ಯಾಭ್ಯಾಸಕ್ಕೆ ನೀಡುತ್ತಿರುವ ಸೌಲಭ್ಯಗಳು ಹಾಗೂ ಪ್ರಾಮುಖ್ಯತೆಗಳು ಹೆಣ್ಣು ಮಕ್ಕಳಿಗೆ ಸಹಕಾರಿಯಾಗಿವೆ. ಸ್ವಾಭಿಮಾನ ಜೀವನಕ್ಕೆ ನೆರವಾಗುತ್ತಿವೆ ಎಂದು ಹೇಳಿದರು.ಮಹಿಳೆಯರು ಶಿಕ್ಷಣದಿಂದ ವಂಚಿತರಾದಲ್ಲಿ ದೌರ್ಜನ್ಯಕ್ಕೆ ಒಳಗಾಗಬಹುದು. ಈ ಹಿನ್ನೆಲೆಯಲ್ಲಿ ಉತ್ತಮ ಶಿಕ್ಷಣ, ಸಂಸ್ಕಾರ ಹಾಗೂ ಸ್ವಯಂ ರಕ್ಷಣೆ, ಕುಟುಂಬದಲ್ಲಿ ಅನೋನ್ಯತೆಯ ಜೀವನದ ಬಗ್ಗೆ ತಿಳಿ ಹೇಳಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರವೀಂದ್ರ ಹೊನೋಲೆ ಮಾತನಾಡಿ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ, ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಬೇಕು, ಒಳ್ಳೆಯ ಕುಟುಂಬ ಹಾಗೂ ಉತ್ತಮ ಸಮಾಜ ರೂಪಿಸಲು ಎಲ್ಲರೂ ಸಹಭಾಗಿಯಾಗಿಬೇಕು ಎಂದರು.ನ್ಯಾ. ಆರ್.ಎಸ್. ಪಾಟೀಲ್ ಹಾಗೂ ನ್ಯಾ. ಶರಣಗೌಡ ಪಾಟೀಲ್ ಮಾತನಾಡಿ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ 2005 ನಿಯಮ 2006 ಇದೆ. ಮಹಿಳಾ ಸಂಘಟನೆಗಳ ದೀರ್ಘಕಾಲದ ಹೋರಾಟದ ಫಲವಾಗಿ, ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರಿಗೆ ರಕ್ಷಣೆ ಎಂಬ ಕಾನೂನು 2006 ರಿಂದ ಜಾರಿಗೆ ಬಂದಿದೆ. ಕುಟುಂಬದ ಸದಸ್ಯರಿಂದಲೇ ನಡೆಯುವ ದೌರ್ಜನ್ಯ ಹಾಗೂ ಹಿಂಸೆಗಳ ವಿರುದ್ಧ ಹೋರಾಡಲು ಮಹಿಳೆಯರಿಗೆ ಅಗತ್ಯ ಅರಿವು ಬೇಕು. ಮಹಿಳೆಯು ಮಹಿಳೆಯರಿಂದ ಹಿಂಸೆಯನ್ನು ಅನುಭವಿಸುತ್ತಿದ್ದಾಳೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವೀರನಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಗುರುನಾಥ ಗೌಡಪ್ಪನೋರ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರಣೆಶ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ವಂದನಾ ಗಾಳಿಯವರ್, ಜಿಲ್ಲಾಸ್ಪತ್ರೆ ಸರ್ಜನ್ ಡಾ. ರಿಜ್ವಾನಾ ಮುಂತಾದವರಿದ್ದರು.