ಕನ್ನಡಪ್ರಭ ವಾರ್ತೆ ಕಾರ್ಕಳ
ವಿಕ್ರಮ್ ಗೌಡನಿಗೆ ಪಿತೃಾರ್ಜಿತವಾಗಿ ಬಂದಿದ್ದ 1 ಎಕ್ರೆ ಜಮೀನಿನಲ್ಲಿ, ಹುಟ್ಟಿದ ಮನೆಯ ಮುಂದೆಯೇ, ತಮ್ಮ ಸುರೇಶ್ ಗೌಡ ಅಂತ್ಯ ಸಂಸ್ಕಾರದ ವಿಧಿಗಳನ್ನು ನೆರವೇರಿಸಿ, ಚಿತೆಗೆ ಬೆಂಕಿಯಿಟ್ಟರು. ಆತನ ತಂಗಿ ಸುಗುಣಾ, ಆಕೆಯ ಪತಿ ಮತ್ತು ಸಂಬಂಧಿಕರು ಈ ಸಂದರ್ಭ ಉಪಸ್ಥಿತರಿದ್ದರು.ಊರಿನ ನೂರಾರು ಮಂದಿ ಕುತೂಹಲದಿಂದ ಸೇರಿದ್ದರು. ಪೊಲೀಸರು ಕೂಡ ಮುಂಜಾಗರೂಕ ಕ್ರಮವಾಗಿ ಸ್ಥಳದಲ್ಲಿ ಸಶಸ್ತ್ರ ಬಂದೋಬಸ್ತ್ ಹಾಕಿದ್ದರು. ಉಡುಪಿಯ ಹೆಚ್ಚುವರಿ ಎಸ್ಪಿ ಸಿದ್ದಲಿಂಗಪ್ಪ ಮಾರ್ಗದರ್ಶನದಲ್ಲಿ ಎಎನ್ಎಫ್ ಹಾಗೂ ಹೆಬ್ರಿ ಠಾಣಾಧಿಕಾರಿಗಳಾದ ಮಹಂತೇಶ್ ಜಾಬಗೌಡ ಹಾಗೂ ಅಜೆಕಾರು ಠಾಣೆಯ ಠಾಣಾಧಿಕಾರಿ ರವಿ ಬಿ.ಕೆ. ಪೂರ್ತಿ ಅಂತ್ಯ ಸಂಸ್ಕಾರ ಪ್ರಕ್ರಿಯೆ ಮುಗಿವರೆಗೂ ಉಸ್ತುವಾರಿ ವಹಿಸಿದ್ದರು.-------------------ಅನಾಥನಂತಾಗುವುದು ಬೇಡ...
ಇದಕ್ಕೆ ಮೊದಲು ಮಂಗಳವಾರ ರಾತ್ರಿಯೇ ವಿಕ್ರಮ್ ಗೌಡ ಮೃತದೇಹವನ್ನು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ತರಲಾಗಿತ್ತು. ಬುಧವಾರ ಮುಂಜಾನೆ ಉಡುಪಿ ತಾಲೂಕು ನ್ಯಾಯಾಧೀಶರ ಉಪಸ್ಥಿತಿಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಯಿತು. ಈ ಸಂದರ್ಭ ವಿಕ್ರಮ್ ಗೌಡನಿಗೆ 7 ಗುಂಡು ತಗಲಿರುವುದು ಪತ್ತೆಯಾಯಿತು.ನಂತರ ಶವವನ್ನು ಮನೆಯವರಿಗೆ ಹಸ್ತಾಂತರಿಸಲಾಯಿತು. ವಿಕ್ರಮ್ ಗೌಡನ ತಮ್ಮ ಮತ್ತು ತಂಗಿ ಶವವನ್ನು ಪಡೆದುಕೊಂಡರು. ಈ ಸಂದರ್ಭ ಮನೆ ಮಗನನ್ನು ಅನಾಥನಂತೆ ಪೊಲೀಸರು ಅಂತ್ಯಸಂಸ್ಕಾರ ಮಾಡುವುದು ಬೇಡ, ಆತನಿಗೆ ಸೇರಿದ ಭೂಮಿ ಇದೆ. ಅದರಲ್ಲಿಯೇ ಆತನನ್ನು ಮಣ್ಣು ಮಾಡುತ್ತೇವೆ ಎಂದು ಅಣ್ಣ ಸುರೇಶ್ ಗೌಡ ಮತ್ತು ತಂಗಿ ಸುಗುಣಾ ಹೇಳಿದರು.-------------------
ಪಲ್ಟಿಯಾದ ಆಂಬುಲೆನ್ಸ್!ವಿಕ್ರಮ್ ಗೌಡನ ಮೃತದೇಹವನ್ನು ಮಣಿಪಾಲ್ ಆಸ್ಪತ್ರೆಯಿಂದ ಮರಣೋತ್ತರ ಪರೀಕ್ಷೆ ಮುಗಿಸಿ ಹುಟ್ಟೂರಿಗೆ ಸಾಗಿಸುತ್ತಿದ್ದ ಆಂಬುಲೆನ್ಸ್ ಹೆಬ್ರಿ ಪೇಟೆಯ ಬಂಟರ ಭವನದ ಮುಂದೆ ಪಲ್ಟಿಯಾದ ಘಟನೆಯೂ ನಡೆಯಿತು.
ಪೊಲೀಸ್ ರಕ್ಷಣೆಯಲ್ಲಿ ಅತ್ಯಂತ ವೇಗವಾಗಿ ಸಾಗುತ್ತಿದ್ದ ಆಂಬುಲೆನ್ಸ್‌ನ ಎದುರಿಗೆ ಅನಿರೀಕ್ಷಿತವಾಗಿ ದನವೊಂದು ಬಂತು. ಅದಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಚಾಲಕ ಬ್ರೇಕ್ ಹಾಕಿದ್ದರಿಂದ ರಸ್ತೆ ಬದಿಯ ಚರಂಡಿಗೆ ಇಳಿದು ಪಲ್ಟಿಯಾಯಿತು.ತಕ್ಷಣ ಅಂಬುಲೆನ್ಸ್‌ನ ಹಿಂದೆ ವರದಿಗಾಗಿ ತೆರಳುತ್ತಿದ್ದ ಮಾಧ್ಯಮ ಪ್ರತಿನಿಧಿಗಳು ಹಾಗೂ ಪೋಲೀಸರು ಆಂಬುಲೆನ್ಸನ್ನು ಚರಂಡಿಯಿಂದ ಮೇಲೆತ್ತುವಲ್ಲಿ ಸಹಕರಿಸಿದರು. ನಂತರ ಆಂಬುಲೆನ್ಸ್ ತ್ವರಿತವಾಗಿ ನಾಡ್ಪಾಲಿನ ಮೈರೋಳಿಯತ್ತ ಪ್ರಯಾಣ ಬೆಳೆಸಿತು.