ಬಾಳೆಲೆ: ಅರಮಣಮಾಡ ಕುಟುಂಬಸ್ಥರ ಕ್ರಿಕೆಟ್ ನಮ್ಮೆ ಚಾಲನೆ

KannadaprabhaNewsNetwork | Published : Apr 22, 2024 2:23 AM

ಸಾರಾಂಶ

ಒಟ್ಟು 49 ಮಹಿಳಾ ತಂಡಗಳ ನಡುವೆ ಪಂದ್ಯಾಟ ನಡೆಯಲಿದೆ. 264 ಪುರುಷರ ತಂಡಗಳು ನೋಂದಣಿಯಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡವ ಕುಟುಂಬಗಳ ನಡುವಿನ ಅರಮಣಮಾಡ ಕ್ರಿಕೆಟ್ ಉತ್ಸವಕ್ಕೆ ಬಾಳೆಲೆ ವಿಜಯಲಕ್ಷ್ಮಿ ಪ.ಪೂ.ಕಾಲೇಜು ಮೈದಾನದಲ್ಲಿ ಭಾನುವಾರ ಅದ್ದೂರಿ ಚಾಲನೆ ದೊರೆಯಿತು.

ಮೇ 19 ರವರೆಗೆ ನಡೆಯಲಿರುವ ಪಂದ್ಯಾವಳಿಯನ್ನು ಶಾಸಕ ಎ. ಎಸ್. ಪೊನ್ನಣ್ಣ ಉದ್ಘಾಟಿಸಿದ್ದರು.

ಇದೇ ಪ್ರಥಮ ಬಾರಿಗೆ ಕೊಡವ ಮಹಿಳಾ ಕ್ರಿಕೆಟ್ ಕೂಡ ನಡೆಯಲಿದ್ದು, ಒಟ್ಟು 49 ಮಹಿಳಾ ತಂಡಗಳ ನಡುವೆ ಪಂದ್ಯಾಟ ನಡೆಯಲಿದೆ. 264 ಪುರುಷರ ತಂಡಗಳ ನೋಂದಣಿಯಾಗಿವೆ.

ಕ್ರಿಕೆಟ್ ಹಬ್ಬದ ಚಾಲನೆಯ ಪರವಾಗಿ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮೈದಾನಕ್ಕೆ ಮೆರವಣಿಗೆ ಮೂಲಕ ತೆರಳಿದರು.

ದುಡಿಕೊಟ್ಟ್ ಪಾಟ್, ತಳಿಯತಕ್ಕಿ ಬೊಳ್ಚದೊಂದಿಗೆ ಸ್ವಾಗತಿಸಿಕೊಳ್ಳಲಾಯಿತು. ಎಜ್ಡಿ ಕ್ಲಬ್ ಸದಸ್ಯರು ಬೈಕ್ ಜಾಥಾ ನಡೆಸಿಕೊಟ್ಟರು. 20 ಕ್ಕೂ ಅಧಿಕ ಬೈಕ್‌ಗಳು ಪಾಲ್ಗೊಂಡಿದ್ದವು. ವಿರಾಜಪೇಟೆ ಕಾವೇರಿ ಕಾಲೇಜು ವಿದ್ಯಾರ್ಥಿಗಳು ಕೊಡವ ನೃತ್ಯದ ಮೂಲಕ ಸಾಂಸ್ಕೃತಿಕ ಮೆರಗು ನೀಡಿದರು. ಉಮ್ಮತ್ತಾಟ್, ಬೊಳಕಾಟ್, ಕೊಡವ ಆಟ್ ಗಮನ ಸೆಳೆಯಿತು. ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ, ಅರಮಣಮಾಡ ಕುಟುಂಬ ಅಧ್ಯಕ್ಷ ಮುತ್ತು ಮುತ್ತಪ್ಪ ಅಕಾಡೆಮಿ ಧ್ವಜ ಮತ್ತು ಕುಟುಂಬ ಧ್ವಜಾರೋಹಣ ನೆರವೇರಿಸಿದರು.

ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಅಜ್ಜಿಕುಟ್ಟೀರ ಎಸ್ ಪೊನ್ನಣ್ಣ ಮಾತನಾಡಿ, ಕೊಡವತಿಯರ ಸಂಖ್ಯೆ ಕಡಿಮೆ ಇರುವ ಕಾಲದಲ್ಲಿ ಮಹಿಳಾ ತಂಡಗಳು ಕ್ರೀಡೆಯಲ್ಲಿ ಹೆಚ್ಚು ತೊಡಗಿಕೊಂಡಿರುವುದು ಮೆಚ್ಚುವ ವಿಚಾರ ಎಂದರು.

ಕೊಡಗು ಕ್ರೀಡೆ ಹಾಗೂ ಸೇನೆಯಲ್ಲಿ ಹೆಚ್ಚಿನ ಹೆಸರು ಮಾಡುವ ಮೂಲಕ ಗುರುತಿಸಿಕೊಂಡಿದೆ. ಗ್ರಾಮೀಣ ಮಟ್ಟದಲ್ಲಿ ಕ್ರೀಡೆಯಲ್ಲಿ ಮುಂದಿರುವ ಮಕ್ಕಳಿಗೆ ಪ್ರೋತ್ಸಾಹ ನೀಡಿ ಅವರನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವಂತೆ ಪ್ರೇರಣೆ ನೀಡಬೇಕು. ಕೊಡಗಿನ ಮಕ್ಕಳು ಹಾಕಿ, ಕ್ರಿಕೆಟ್, ಟೆನಿಸ್, ಬಾಕ್ಸ್ಯಿಂಗ್ ಕ್ರೀಡೆಯಲ್ಲಿ ದೇಶವನ್ನು ಪ್ರತಿನಿಧಿಸುತಿದ್ದಾರೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕ್ರೀಡೆ ಸಹಕಾರಿಯಾಗಿದೆ. ಹೋಬಳಿ ಮಟ್ಟದಲ್ಲಿ ಮೈದಾನ ಅಭಿವೃದ್ಧಿ ಮಾಡಲಾಗುತ್ತಿದೆ ಎಂದರು.

ಮೇಜರ್ ಜನರಲ್ (ನಿ) ಪಾರುವಂಗಡ ಎಂ. ಕಾರ್ಯಪ್ಪ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕ್ರಿಕೆಟ್ ನಮ್ಮೆಯಲ್ಲಿ ಮಹಿಳೆಯರು ಭಾಗವಹಿಸುತ್ತಿರುವುದು ವಿಶೇಷವಾಗಿದೆ. ಇದು ಹೆಣ್ಣುಮಕ್ಕಳು ಹಾಗೂ ಮಹಿಳೆಯರ ಬೆಳವಣಿಗೆಗೆ ಸಹಕಾರಿಯಾಗಿದೆ. ಕೊಡವ ಕೌಟುಂಬಿಕ ಕ್ರೀಡೆ ಸಂದರ್ಭದಲ್ಲಿ ಒಟ್ಟಿಗೆ ಒಗ್ಗಟ್ಟಿನಲ್ಲಿ ಸೇರಲು ಅವಕಾಶ ಮಾಡಿಕೊಡುತ್ತದೆ. ನಮ್ಮ ಸಂಸ್ಕೃತಿ, ಪರಂಪರೆ ಬಗ್ಗೆ ಅರಿವು ಮೂಡಿಸಲು ಸಹಕಾರಿ ಎಂದರು.

ಕೊಡವ ಮಹಿಳಾ ಕ್ರಿಕೆಟ್ ರೂವಾರಿ ಐಚೇಟ್ಟಿರ ಸುನಿತಾ ಮಾತನಾಡಿ, ಮಹಿಳೆ ಮುಂದಾಳತ್ವದಲ್ಲಿ ಮಹಿಳೆಯರು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಶಕ್ತಿ, ದೃಢತೆ, ಸಮಾನತೆ, ಶಿಸ್ತು, ನಾಯಕತ್ವ ಗುಣಗಳನ್ನು ಹೊರ ಜಗತ್ತಿಗೆ ಪರಿಚಯಿಸಲು ಅವಕಾಶ ದೊರೆಯುತ್ತಿದೆ ಎಂದರು.

ಹಾಕಿ ಕರ್ನಾಟಕ ಕಾರ್ಯದರ್ಶಿ ಡಾ. ಅಂಜಪರವಂಡ ಬಿ. ಸುಬ್ಬಯ್ಯ, ಕೆ.ಎ.ಎಸ್. ಅಧಿಕಾರಿ ಚೊಟ್ಟೆಯಂಡಮಾಡ ಕೆ. ರಾಜೇಂದ್ರ, ಕೊಡವ ಕ್ರಿಕೆಟ್ ಅಕಾಡೆಮಿ ಕಾರ್ಯದರ್ಶಿ ಕುಂಡ್ರಂಡ ಬೋಪಣ್ಣ, ವಿಜಯಲಕ್ಷ್ಮಿ ಜೂನಿಯರ್ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ, ಬಾಳೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮುಕ್ಕಾಟೀರ ಜಾನಕ್ಕಿ ಕಾವೇರಪ್ಪ, ಅರಮಣಮಾಡ ಕ್ರಿಕೆಟ್ ನಮ್ಮೆ ಅಧ್ಯಕ್ಷ ಎ.ಕೆ. ಸುರೇಶ್, ಉಪಾಧ್ಯಕ್ಷ ಸುಗುಣ ಗಣಪತಿ, ಕಾರ್ಯದರ್ಶಿ ಎ. ಎ. ಅಜಯ್, ಖಜಾಂಚಿ ದಿನು ಬೆಳ್ಯಪ್ಪ, ಟೂರ್ನಿ ನಿರ್ದೇಶಕ ಕೊಕ್ಕೇಂಗಡ ರಂಜನ್ ಇದ್ದರು.

Share this article