)
ರಾಮನಗರ: ಕೌಟುಂಬಿಕ ಕಲಹದಿಂದಾಗಿ ವ್ಯಕ್ತಿಯೊಬ್ಬರು ತನ್ನ ಪತ್ನಿಯನ್ನು ಕೊಲೆ ಮಾಡಿ, ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹಾಲಗಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚನ್ನಪಟ್ಟಣ ತಾಲೂಕಿನ ಮೈಲನಾಯ್ಕನಹಳ್ಳಿಯ ವತ್ಸಲಾ ಅವರನ್ನು 8 ವರ್ಷದ ಹಿಂದೆ ಮದುವೆಯಾಗಿದ್ದ ನವೀನ್ ಅವರಿಗೆ, 7 ವರ್ಷದ ಪುತ್ರಿ ಇದ್ದು ರಾಮನಗರದ ಪ್ರತಿಷ್ಠಿತ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಏಕೈಕ ಪುತ್ರನಾಗಿದ್ದ ನವೀನ್ ಅವರ ತಂದೆ ತೀರಿಕೊಂಡಿದ್ದು, ವಯಸ್ಸಾದ ತಾಯಿ ಇದ್ದಾರೆ. ಇದೀಗ ಪುತ್ರಿ ಮತ್ತು ತಾಯಿಗೆ ಯಾರೂ ದಿಕ್ಕಿಲ್ಲದಂತಾಗಿದೆ.
ಬಿಡದಿಯಲ್ಲಿ ಮಾಂಸಾಹಾರದ ಹೋಟೆಲ್ ಇಟ್ಟುಕೊಂಡಿದ್ದ ನವೀನ್, ಕುಟುಂಬದೊಂದಿಗೆ ಬೆಂಗಳೂರಿನ ನಾಯಂಡಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಅನ್ಯೋನ್ಯವಾಗಿದ್ದ ದಂಪತಿ ನಡುವೆ ಸಂಸಾರದ ವಿಷಯದಲ್ಲಿ ಮನಸ್ತಾಪ ಉಂಟಾಗಿತ್ತು.ಹೊಟೇಲ್ ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದ ನವೀನ್, ಕುಟುಂಬ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಪತ್ನಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಬದಲಾದ ಪತಿಯ ಸ್ವಭಾವದಿಂದ ಬೇಸತ್ತಿದ್ದ ವತ್ಸಲಾ ಬಿಡದಿಯ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಇದಕ್ಕೆ ನವೀನ್, ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಕಂಪನಿ ಬಳಿಯೂ ಹೋಗಿ ಜಗಳವಾಡಿದ್ದರು. ಜಗಳ ವಿಕೋಪಕ್ಕೆ ಹೋದಾಗಲೆಲ್ಲಾ ವತ್ಸಲ ಅವರು, ತವರು ಮನೆಗೆ ಬಂದು ಕೆಲ ದಿನ ಇದ್ದು ಹೋಗುತ್ತಿದ್ದರು. ದಿನದಿಂದ ದಿನಕ್ಕೆ ದಂಪತಿ ನಡುವೆ ಕಲಹ ಹೆಚ್ಚುತ್ತಲೇ ಇತ್ತು.
ಕೌಟುಂಬಿಕ ಕಲಹವು ಪೊಲೀಸ್ ಠಾಣೆ ಮೆಟ್ಟಿಲೇರಿದರೂ ದಂಪತಿ ನಡುವೆ ಹೊಂದಾಣಿಕೆ ಇರಲಿಲ್ಲ. ವತ್ಸಲಾ ಅವರು ಪುತ್ರಿ ಸಮೇತ ತವರು ಮನೆಗೆ ಹೋಗಿದ್ದರು. ಇದರ ನಡುವೆಯೇ ವತ್ಸಲಾ ಅವರು ವಿಚ್ಛೇದನ ಪಡೆಯಲು ನಿರ್ಧರಿಸಿದ್ದರು ಎನ್ನಲಾಗಿದೆ.
ಆತ್ಮಹತ್ಯೆಗೆ ಮುಂಚೆ ಸಂಬಂಧಿಗೆ ಕರೆ ಮಾಡಿ ಮನೆಯಲ್ಲಿ ಇಬ್ಬರ ನಡುವೆ ಜಗಳ ನಡೆದಾಗ ನವೀನ್ ಅವರು ವತ್ಸಲ ಅವರ ಮೇಲೆ ಹಲ್ಲೆ ನಡೆಸಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ನಂತರ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಕ್ಸ್.............
ರಾಮನಗರ: ನಗರದ ಹೊರವಲಯದ ರಂಗರಾಯನದೊಡ್ಡಿ ಕೆರೆ ರಸ್ತೆಯಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಐಜೂರು ಠಾಣೆ ಪೊಲೀಸರು ಬಂಧಿಸಿ, 2.5 ಗ್ರಾಂ ತೂಕದ ಎಂಡಿಎಂಎ ಮಾದಕವಸ್ತು ಹಾಗೂ 2 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ನಗರದ ತೌಸಿಫ್ ಮಹಮ್ಮದ್ (26) ಮತ್ತು ನವಾಜ್ ಪಾಷಾ(25) ಬಂಧಿತರು. ಆರೋಪಿಗಳು ಕೆರೆ ರಸ್ತೆಯಲ್ಲಿ ಮಾದಕವಸ್ತು ಮಾರಾಟ ಮಾಡುತ್ತಿರುವ ಕುರಿತು ಸಿಕ್ಕ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ, ಮಾಲು ಸಮೇತ ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಬೆಂಗಳೂರಿನ ಸಿಟಿ ಮಾರ್ಕೆಟ್‌ನಲ್ಲಿರುವ ಪರಿಚಿತರೊಬ್ಬರ ಅಂಗಡಿಯೊಂದರಲ್ಲಿ ತಂದು ಮಾರಾಟ ಮಾಡುತ್ತಿದ್ದರು. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಪ್ರತಿಕ್ರಿಯಿಸಿದ್ದಾರೆ.