ಗದಗ: ವೈದ್ಯರ ಮಗ ವೈದ್ಯ, ಎಂಜಿನಿಯರ್ ಮಗ ಎಂಜಿನಿಯರ್ ಆಗುವಂತೆ ರಾಜಕಾರಣಿಗಳ ಮಕ್ಕಳು ರಾಜಕೀಯಕ್ಕೆ ಬರುವುದರಲ್ಲಿ ತಪ್ಪೇನಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಕುಟುಂಬ ರಾಜಕಾರಣವನ್ನು ಸಮರ್ಥಿಸಿಕೊಂಡರು.
ಉಪಚುನಾವಣೆಯಲ್ಲಿ ಕುಟುಂಬಸ್ಥರಿಗೆ ಟಿಕೆಟ್ ನೀಡುವ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ನಿಧನ ಹೊಂದಿದ ವ್ಯಕ್ತಿಯ ಕುಟುಂಬದವರಿಗೆ ಟಿಕೆಟ್ ನೀಡುವುದು ಕಾಂಗ್ರೆಸ್‌ನ ಸಂಪ್ರದಾಯ. ನಾನೂ ಅಂತಹದ್ದೇ ಸಂದರ್ಭದಲ್ಲಿ ರಾಜಕೀಯಕ್ಕೆ ಬಂದವನು. ತಂದೆಯ ನಿಧನದ ನಂತರವೇ ನನಗೆ ಟಿಕೆಟ್ ನೀಡಲಾಗಿತ್ತು. ಟಿಕೆಟ್ ಪಡೆದ ನಂತರ ನಾವು ಜನರ ಮುಂದೆ ನಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿಕೊಳ್ಳಬೇಕು ಎಂದರು.
ಬಾಗಲಕೋಟೆ ಮತ್ತು ದಾವಣಗೆರೆ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಲಿದ್ದಾರೆ. ದಾವಣಗೆರೆಯಲ್ಲಿ ಮುಸ್ಲಿಂ ಸಮುದಾಯದ ಆಕ್ರೋಶದ ಕುರಿತಾದ ವದಂತಿಗಳನ್ನು ತಳ್ಳಿಹಾಕಿದ ಅವರು, ಸಾದಿಕ್ ಪೈಲ್ವಾನ್ ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ ಮತ್ತು ಸಚಿವ ಜಮೀರ್ ಅಹ್ಮದ್ ಅವರು ಶಾಮನೂರು ಕುಟುಂಬದ ಪರವಾಗಿ ಪ್ರಚಾರಕ್ಕೆ ಬರಲಿದ್ದಾರೆ ಎಂದು ಸ್ಪಷ್ಟಪಡಿಸಿದರು.ಸಿದ್ದರಾಮಯ್ಯ ಸರ್ಕಾರವನ್ನು ಸೂಟ್ ಕೇಸ್ ಸರ್ಕಾರ ಎಂದು ಟೀಕಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ತಿರುಗೇಟು ನೀಡಿದ ಎಂ.ಬಿ. ಪಾಟೀಲ್, ಸೂಟ್ ಕೇಸ್ ಸಂಸ್ಕೃತಿ ವಿಜಯೇಂದ್ರ ಅವರಿಗೆ ಹೊಸದೇನಲ್ಲ. ಅವರ ತಂದೆ ಸಿಎಂ ಆಗಿದ್ದಾಗ ಇದನ್ನೇ ಮಾಡಿಕೊಂಡು ಬಂದಿದ್ದಾರೆ. ಅದೇ ಅವರಿಗೆ ರೂಢಿಯಾಗಿದೆ.
ಸಿಲಿಂಡರ್ ಬೆಲೆ ಏರಿಕೆ ಮತ್ತು ಅಭಾವದ ಬಗ್ಗೆ ಮಾತನಾಡಿದ ಅವರು, ಗಟಾರ್‌ನಿಂದ ಗ್ಯಾಸ್ ಉತ್ಪಾದಿಸಬಹುದು ಎಂದು ಹೇಳಿದ ಪ್ರಧಾನಿ ಮೋದಿಯವರನ್ನೇ ಈ ಬಗ್ಗೆ ಕೇಳಬೇಕು. ಅವರ ಅವಧಿಯಲ್ಲಿ ಡಾಲರ್ ಬೆಲೆ 100 ರು.ಗೆ ತಲುಪಿದ್ದೇ ದೊಡ್ಡ ಸಾಧನೆ ಎಂದು ವ್ಯಂಗ್ಯವಾಡಿದರು. ವಿದೇಶಾಂಗ ನೀತಿಯ ಕುರಿತು ಮಾತನಾಡಿದ ಅವರು, ಇರಾನ್ ಮತ್ತು ಭಾರತದ ಬಾಂಧವ್ಯದ ನಡುವೆ ಕೇಂದ್ರ ಸರ್ಕಾರದ ನಿಲುವುಗಳು ದೇಶದ ಹಿತಾಸಕ್ತಿಗೆ ಪೂರಕವಾಗಿಲ್ಲ ಎಂದರು.