ಗದಗ ಜಿಲ್ಲೆಯಲ್ಲಿ ಮುಂದುವರಿದ ಸಿಲಿಂಡರ್ ಸಮಸ್ಯೆ

KannadaprabhaNewsNetwork |  
Published : Apr 02, 2026, 02:15 AM IST
ಸಿಲಿಂಡರ್ ಸರಬರಾಜಿಗಾಗಿ ಕಾಯುತ್ತಿರುವ ವಾಹನಗಳು. | Kannada Prabha

ಸಾರಾಂಶ

ಜಿಲ್ಲಾದ್ಯಂತ ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಗಳು ಸಿಲಿಂಡರ್ ಬುಕ್ಕಿಂಗ್ ಅವಧಿಯನ್ನು 45 ದಿನಕ್ಕೆ ಏರಿಕೆ ಮಾಡಿದ್ದು, ಈವರೆಗೆ ಅವಧಿ ಕಡಿಮೆಯಾಗಿಲ್ಲ. ಇನ್ನು ಭಾರತ್ ಗ್ಯಾಸ್ ಕಂಪನಿ 25 ದಿನಕ್ಕೆ ಸಿಲಿಂಡರ್ ಬುಕ್ಕಿಂಗ್ ಅವಕಾಶ ನೀಡುತ್ತಿದೆ. ಆದರೆ 40 ದಿನ ಕಳೆದರೂ ಸಿಲಿಂಡರ್ ಸಾರ್ವಜನಿಕರಿಗೆ ಸಿಗುತ್ತಿಲ್ಲ.

ಗದಗ: ಮಧ್ಯಪ್ರಾಚ್ಯ ಯುದ್ಧದ ಪರಿಣಾಮ ಜಿಲ್ಲೆಗೂ ಸಿಲಿಂಡರ್ ಕೊರತೆಯ ಮೂಲಕ ತಟ್ಟುತ್ತಿದ್ದು, ಜಿಲ್ಲೆಯಲ್ಲಿ ಅಡುಗೆ ಅನಿಲ ಪೂರೈಕೆ ವ್ಯವಸ್ಥೆ ಸಂಪೂರ್ಣ ಗೊಂದಲದ ಗೂಡಾಗಿದೆ. ದಿನ ಕಳೆದಂತೆ ಸಮಸ್ಯೆ ಉಲ್ಬಣಿಸುತ್ತಿದ್ದು, ಈ ವಿಷಯದಲ್ಲಿ ಸರ್ಕಾರದ ಆದೇಶಗಳು ಕಾಗದಕ್ಕೆ ಮಾತ್ರ ಸೀಮಿತವಾಗಿದೆ.

ಜಿಲ್ಲಾದ್ಯಂತ ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಗಳು ಸಿಲಿಂಡರ್ ಬುಕ್ಕಿಂಗ್ ಅವಧಿಯನ್ನು 45 ದಿನಕ್ಕೆ ಏರಿಕೆ ಮಾಡಿದ್ದು, ಈವರೆಗೆ ಅವಧಿ ಕಡಿಮೆಯಾಗಿಲ್ಲ. ಇನ್ನು ಭಾರತ್ ಗ್ಯಾಸ್ ಕಂಪನಿ 25 ದಿನಕ್ಕೆ ಸಿಲಿಂಡರ್ ಬುಕ್ಕಿಂಗ್ ಅವಕಾಶ ನೀಡುತ್ತಿದೆ. ಆದರೆ 40 ದಿನ ಕಳೆದರೂ ಸಿಲಿಂಡರ್ ಸಾರ್ವಜನಿಕರಿಗೆ ಸಿಗುತ್ತಿಲ್ಲ.

ನಗರ ಮತ್ತು ಗ್ರಾಮೀಣ ಭಾಗದ ಗ್ರಾಹಕರಿಗೆ ಬುಕ್ಕಿಂಗ್ ಮಾಡಿದ 25 ದಿನದೊಳಗೆ ಸಿಲಿಂಡರ್ ಪೂರೈಕೆ ಮಾಡಬೇಕೆಂಬ ಕಟ್ಟುನಿಟ್ಟಿನ ಆದೇಶವಿದೆ. ಆದರೆ, ಜಿಲ್ಲೆಯ ವಾಸ್ತವ ಸ್ಥಿತಿಯೇ ಬೇರೆಯಾಗಿದೆ. ಎಚ್‌ಪಿ ಗ್ಯಾಸ್ ಬುಕ್ಕಿಂಗ್ ಅವಧಿ 45 ದಿನಗಳಿಗೆ ಏರಿಕೆಯಾಗಿದ್ದರೂ ಇದನ್ನು ಕಡಿತಗೊಳಿಸಲು ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ.

ಸಿಲಿಂಡರ್ ಸಿಗುತ್ತಿಲ್ಲ: ಭಾರತ್ ಗ್ಯಾಸ್ ಕಂಪನಿಯ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಮಾ. 19ಕ್ಕೆ ಸಿಲಿಂಡರ್ ಬುಕ್ಕಿಂಗ್ ಮಾಡಿದ್ದರೂ ಈ ವರೆಗೆ ಗ್ರಾಹಕರ ಮನೆಗೆ ಸಿಲಿಂಡರ್ ತಲುಪಿಲ್ಲ. ಈ ಕುರಿತು ಏಜೆನ್ಸಿಗಳನ್ನು ವಿಚಾರಿಸಿದರೆ, ಇನ್ನು ಒಂದೆರಡು ದಿನಗಳಲ್ಲಿ ಬರಲಿದೆ ಎಂಬ ಹಾರಿಕೆ ಉತ್ತರವನ್ನೇ ನೀಡುತ್ತಿದ್ದಾರೆ. ಒಂದೆಡೆ ಸಾರ್ವಜನಿಕರು ಸಿಲಿಂಡರ್ ಇಲ್ಲದೆ ಪರದಾಡುತ್ತಿದ್ದರೆ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳು ಮಾತ್ರ ಜಿಲ್ಲೆಯಲ್ಲಿ ಯಾವುದೇ ಗ್ಯಾಸ್ ಕೊರತೆ ಇಲ್ಲ ಎಂದು ಹೇಳುತ್ತಿರುವುದು ವಿಪರ್ಯಾಸ.

ಆಟೋ ಚಾಲಕರು ಕಂಗಾಲು

ಜನಸಾಮಾನ್ಯರ ಜೀವನಾಡಿಯಾಗಿರುವ ಆಟೋಗಳ ಮೇಲೆ ಇದೀಗ ಬೆಲೆ ಏರಿಕೆಯ ಬಿಸಿ ಜೋರಾಗಿ ತಟ್ಟಿದೆ. ಕೇವಲ ಒಂದು ತಿಂಗಳ ಅಂತರದಲ್ಲಿ ಆಟೋ ಎಲ್‌ಪಿಜಿ ದರವು ಅನಿರೀಕ್ಷಿತವಾಗಿ ಏರಿಕೆಯಾಗಿದ್ದು, ಆಟೋ ಚಾಲಕರ ಬದುಕನ್ನು ಸಂಕಷ್ಟಕ್ಕೆ ದೂಡಿದೆ.

​ಕಳೆದ ಒಂದು ತಿಂಗಳ ಹಿಂದೆ ಪ್ರತಿ ಲೀಟರ್‌ಗೆ 54 ರುಪಾಯಿ ಇದ್ದ ಎಲ್‌ಪಿಜಿ ದರವು, ದಿಢೀರನೆ 100 ರುಪಾಯಿ ತಲುಪುವ ಮೂಲಕ ಚಾಲಕರಿಗೆ ಶಾಕ್ ನೀಡಿದೆ. ಅಲ್ಪ ಅವಧಿಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಏರಿಕೆ ಕಂಡುಬಂದಿರುವುದು ಆಟೋ ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲೆಯ ಬಹುತೇಕ ಆಟೋಗಳು ಎಲ್‌ಪಿಜಿ ಇಂಧನವನ್ನೇ ಅವಲಂಬಿಸಿವೆ. ಈ ಬೇಕಾಬಿಟ್ಟಿ ಬೆಲೆ ಏರಿಕೆಯಿಂದಾಗಿ ದೈನಂದಿನ ಜೀವನ ನಡೆಸುವುದು ಅಸಾಧ್ಯ ಎಂಬಂತಾಗಿದೆ. ಆಟೋ ಚಾಲಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನಂತರ, ಸದ್ಯ ದರವನ್ನು 84 ರುಪಾಯಿಗೆ ಇಳಿಕೆ ಮಾಡಲಾಗಿದೆ. ಆದರೂ ಇದು ಸಾಮಾನ್ಯ ದರಕ್ಕಿಂತ ಹೆಚ್ಚೇ ಇರುವುದು ಚಾಲಕರ ಕಳವಳಕ್ಕೆ ಕಾರಣವಾಗಿದೆ. ಈ ಬೆಲೆ ಏರಿಕೆಯನ್ನು ಯಾರು ಮಾಡುತ್ತಿದ್ದಾರೆ ಮತ್ತು ಯಾವುದರ ಆಧಾರದ ಮೇಲೆ ದರ ನಿಗದಿಯಾಗುತ್ತಿದೆ ಎಂಬುದು ನಮಗೆ ತಿಳಿಯುತ್ತಿಲ್ಲ ಎಂದು ಚಾಲಕರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಜಿಲ್ಲೆಯಲ್ಲಿ ಎಲ್ಲ ಗ್ಯಾಸ್ ಏಜೆನ್ಸಿಗಳ ಜತೆ ಮಾತುಕತೆ ನಡೆಸಲಾಗಿದೆ. ಪೂರೈಕೆಯಲ್ಲಿ ಒಂದೆರಡು ದಿನಗಳ ವಿಳಂಬವಾಗಿರುವುದು ಬಿಟ್ಟರೆ, ಅಂಥ ಗಂಭೀರ ಸಮಸ್ಯೆ ಇಲ್ಲ. ನಿರ್ದಿಷ್ಟವಾಗಿ ಯಾವುದಾದರೂ ಸಮಸ್ಯೆ ಇದ್ದರೆ ಆಹಾರ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ಆಹಾ ಇಲಾಖೆಯ ಉಪನಿರ್ದೇಶಕರಾದ ಎಸ್.ಡಿ. ಪಾಟೀಲ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಡವರಿಗೆ ಸಾಮೂಹಿಕ ವಿವಾಹ ಅನುಕೂಲ: ಮುದುಕೇಶ್ವರ ಶಿವಾಚಾರ್ಯರು ಸ್ವಾಮಿಗಳು
ಲಿಂ. ಸಿದ್ಧಗಂಗಾ ಡಾ. ಶಿವಕುಮಾರ ಶ್ರೀ ಸದಾ ಸ್ಮರಣೀಯರು: ಜಗದೀಶ ಸಂಕನೂರ