ಹಾವೇರಿ: ಕರ್ನಾಟಕದ ಭಗತ್ ಸಿಂಗ್ ಎಂದು ಕರೆಸಿಕೊಳ್ಳುವ ಹುತಾತ್ಮ ಮೈಲಾರ ಮಹಾದೇವಪ್ಪ ಅವರ ದೇಶಪ್ರೇಮ, ತ್ಯಾಗ ಮತ್ತು ಬಲಿದಾನ ನಮ್ಮೆಲ್ಲರಿಗೂ ಆದರ್ಶವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ಮೈಲಾರ ಮಹಾದೇವಪ್ಪ ಅವರು ಬಹಳ ಸಾತ್ವಿಕ ವ್ಯಕ್ತಿಯಾಗಿದ್ದರು. ಹತ್ತುವರ್ಷದ ಬಾಲಕನಾಗಿದ್ದಾಗಲೇ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದರು. ಅವರು ಮಹಾತ್ಮ ಗಾಂಧೀಜಿ ಅವರ ಅಹಿಂಸಾ ಮಾರ್ಗವನ್ನು ಅನುಸರಿಸಿ ಹೋರಾಟ ನಡೆಸಿದವರು. 43ನೇ ವಯಸ್ಸಿನಲ್ಲಿ ಬ್ರಿಟಿಷರ ಗುಂಡಿಗೆ ಬಲಿಯಾದ ಅವರು ದೇಶಪ್ರೇಮದ ಪ್ರತೀಕವಾಗಿದ್ದಾರೆ ಎಂದು ಬಣ್ಣಿಸಿದರು.
ಮಹಾತ್ಮಾ ಗಾಂಧೀಜಿ ಅವರು 1930ರಲ್ಲಿ ಹಮ್ಮಿಕೊಂಡಿದ್ದ ಐತಿಹಾಸಿಕ ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ 78 ಜನರಲ್ಲಿ ಕರ್ನಾಟಕದಿಂದ ಏಕೈಕ ಪ್ರತಿನಿಧಿ ಮೈಲಾರ ಮಹದೇವಪ್ಪನವರು. ಸಬರಮತಿ ಆಶ್ರಮದಲ್ಲಿ ತರಬೇತಿ ಪಡೆದು ಹಾವೇರಿ ಜಿಲ್ಲೆಯ ಹೊಸರಿತ್ತಿ ಹಾಗೂ ಕೊರಡೂರನ್ನು ತಮ್ಮ ಕರ್ಮಭೂಮಿಯನ್ನಾಗಿಸಿಕೊಂಡು ಅವರು ಹೋರಾಟ ನಡೆಸಿದ್ದರು. 1941ರಲ್ಲಿ ಸೆರೆಮನೆ ವಾಸ ಅನುಭವಿಸಿದ್ದರೂ ಹಾಗೂ ಮರಳಿ ಬಂದು ಬ್ರಿಟಿಷರ ವಿರುದ್ಧ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ ಧೀಮಂತ ವ್ಯಕ್ತಿತ್ವ ಅವರದು ಎಂದು ಹೇಳಿದರು.ಮೈಲಾರರ ಹೆಸರಿನಲ್ಲಿ ಸ್ಥಾಪಿತವಾಗಿರುವ ಟ್ರಸ್ಟ್ ಮೂಲಕ ಅನೇಕ ಪುಸ್ತಕಗಳು ಪ್ರಕಟವಾಗಿವೆ. ವೀರಸೌಧದ ಆವರಣದಲ್ಲಿ ಮೈಲಾರರ ಜೀವನ ಚಿತ್ರಣ ನೀಡುವ ಸುಸಜ್ಜಿತ ಸಂಗ್ರಹಾಲಯ ನಿರ್ಮಿಸುವ ಚಿಂತನೆ ಇದೆ. ಕೊರಡೂರು ಸೇವಾಶ್ರಮವನ್ನು ನವೀಕರಿಸಲಾಗಿದ್ದು, ಈ ಬಾರಿ ಜೂ. 8ರಂದು ಅವರ ಜನ್ಮದಿನವನ್ನು ಸಡಗರದಿಂದ ಆಚರಿಸಲಾಗುವುದು ಎಂದು ಹೇಳಿದರು.
ಹರಿಹರದ ಹಿರಿಯ ಸಾಹಿತಿ ಪ್ರೊ. ಲಿಂಗರಾಜ ಕಮ್ಮಾರ ಅವರು ಮೈಲಾರ ಮಹಾದೇವಪ್ಪನವರ ತ್ಯಾಗ, ಧೈರ್ಯ ಮತ್ತು ಸಾಧನೆಗಳ ಕುರಿತು ಉಪನ್ಯಾಸ ನೀಡಿದರು. ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಎಂ.ಎಂ. ಮೈದೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ. ಹಿರೇಮಠ, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯೆ ಪರಿಮಳಾ ಜೈನ್, ಸಾಹಿತಿ ಸತೀಶ ಕುಲಕರ್ಣಿ, ಎಚ್.ಎಸ್. ಮಹಾದೇವ, ವಿ.ಎನ್. ತಿಪ್ಪನಗೌಡ, ನಾಗೇಂದ್ರ ಕಟಕೋಳ, ಟಿಎಂಎಇಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಎಸ್.ಕೆ. ಪ್ರಸಾದಿಮಠ, ಬಳ್ಳಾರಿ ರುದ್ರಪ್ಪ ಬಿಇಡಿ ಕಾಲೇಜಿನ ಪ್ರಾಂಶುಪಾಲ ಸುರೇಶ್ ಎಂ., ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗಯ್ಯ ಹಿರೇಮಠ ಇತರರಿದ್ದರು.