ಬಸ್ಸಿಗಾಗಿ ಕಾಯುತ್ತಿದ್ದವರ ಮೇಲೆ ಹರಿದ ಬಸ್, ಬಾಲಕ ಸಾವು

KannadaprabhaNewsNetwork |  
Published : Apr 02, 2026, 02:00 AM IST
ಹಾವೇರಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಮೇಲೆ ಹರಿದ ಬಸ್ | Kannada Prabha

ಸಾರಾಂಶ

ಹಾವೇರಿ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ಪ್ರಯಾಣಿಕರ ಮೇಲೆ ಏಕಾಏಕಿ ಬಸ್ ಹರಿದ ಪರಿಣಾಮವಾಗಿ ತೀವ್ರವಾಗಿ ಗಾಯಗೊಂಡಿದ್ದ ಎರಡು ವರ್ಷದ ಬಾಲಕ ಅಸು ನೀಗಿದ್ದು, ನಾಲ್ವರಿಗೆ ಗಂಭೀರ ಗಾಯಗಳಾದ ಘಟನೆ ಬುಧವಾರ ನಡೆದಿದೆ.

ಹಾವೇರಿ: ಇಲ್ಲಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ಪ್ರಯಾಣಿಕರ ಮೇಲೆ ಏಕಾಏಕಿ ಬಸ್ ಹರಿದ ಪರಿಣಾಮವಾಗಿ ತೀವ್ರವಾಗಿ ಗಾಯಗೊಂಡಿದ್ದ ಎರಡು ವರ್ಷದ ಬಾಲಕ ಅಸು ನೀಗಿದ್ದು, ನಾಲ್ವರಿಗೆ ಗಂಭೀರ ಗಾಯಗಳಾದ ಘಟನೆ ಬುಧವಾರ ನಡೆದಿದೆ.

ಅಪಘಾತದಲ್ಲಿ ಸವಣೂರು ಪಟ್ಟಣದ ಹಜರತ್ ಅಲಿ ಇಸ್ಮಾಯಿಲ್ ರಾಯಚೂರ (2) ಎಂಬ ಮಗು ಪ್ರಾಣ ಕಳೆದುಕೊಂಡಿದೆ. ಅಪಘಾತ ನಡೆದ ತಕ್ಷಣ ಮಗುವಿಗೆ ಗಂಭೀರ ಗಾಯವಾದ್ದರಿಂದ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕೆಎಂಸಿಆರ್‌ಐಗೆ ಕಳಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸಲಿಲ್ಲ. ಮಗು ಅಸು ನೀಗಿತು. ಅಲ್ಲದೇ ವಾಸುದೇವ ಗುರುನಾಥಪ್ಪ ಉತಳೇಕರ (44), ಹರ್ಷಾ ವಾಸುದೇವ ಉತಳೇಕರ (6), ಕಾವ್ಯಾಂಜಲಿ ವಿಷ್ಣು ಉತಳೇಕರ (39) ಹಾಗೂ ಅರ್ಬಾಜಖಾನ ಸೌದಾಗರ (13) ಎಂಬವರಿಗೆ ಗಾಯಗಳಾಗಿದ್ದು, ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಗಾಯಾಳುಗಳು ಬಂಕಾಪುರ ಪಟ್ಟಣದ ನಿವಾಸಿಗಳಾಗಿದ್ದು, ಚಾಲಕ ಕಂ ಕಂಡಕ್ಟರ್ ಮಂಜುನಾಥ ರಾಜಪ್ಪ ಅವರ ಮೇಲೆ ಕೇಸ್ ದಾಖಲಿಸಲಾಗಿದೆ.

ಲಕ್ಷ್ಮೇಶ್ವರಕ್ಕೆ ತೆರಳುತ್ತಿದ್ದ ಬಸ್ ಅತಿ ವೇಗದಲ್ಲಿ ಬಸ್‌ ನಿಲ್ದಾಣಕ್ಕೆ ಬಂದಿದ್ದಲ್ಲದೇ, ಪ್ರಯಾಣಿಕರು ಕಾಯುವಿಕೆಗೆ ನಿರ್ಮಿಸಿದ ಕಾರಿಡಾರ್‌ಗೆ ನುಗ್ಗಿ ಮುಂದೆ ಇದ್ದ ಬೇಕರಿ ಕಟ್ಟಡಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಇದರ ರಭಸಕ್ಕೆ ಬಸ್‌ಗಾಗಿ ಕಾಯುತ್ತಿದ್ದವರು ಬಸ್‌ನ ಅಡಿಯಲ್ಲಿ ಸಿಲುಕಿ ಅವಘಡ ಸಂಭವಿಸಿದೆ. ಈ ದೃಶ್ಯ ಕಂಡು ಅಲ್ಲಿದ್ದ ನೂರಾರು ಪ್ರಯಾಣಿಕರು ಕಂಗಾಲಾದರು.

ಸ್ಥಳದಲ್ಲಿ ನೂರಾರು ಜನರ ಸೇರಿಕೊಂಡು ಬಸ್ ಚಾಲಕನ ನಿರ್ಲಕ್ಷ್ಯಕ್ಕೆ ಛೀಮಾರಿ ಹಾಕಿ, ಆಕ್ರೋಶ ವ್ಯಕ್ತಪಡಿಸಿದರು. ಘಟನಾ ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಾವೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಸಂಘಟಿತ ಕಾರ್ಮಿಕರಿಗೂ ಸರ್ಕಾರಿ ಸೌಲಭ್ಯ ಕಲ್ಪಿಸಿ: ಕಾಮಾಕ್ಷಿ ರೇವಣಕರ
ಮೈಲಾರ ಮಹಾದೇವಪ್ಪನವರ ರಾಷ್ಟ್ರಪ್ರೇಮ ಎಲ್ಲರಿಗೂ ಆದರ್ಶ: ಡಾ. ವಿಜಯಮಹಾಂತೇಶ ದಾನಮ್ಮನವರ