-ದೈಹಿಕ ಶಿಕ್ಷಣ ಶಿಕ್ಷಕರ ವಿರುದ್ಧ ಹುಣಸಗಿ ಠಾಣೆಯಲ್ಲಿ ಶಿವರಾಜ ಕಲಕೇರಿ ದೂರು ದಾಖಲು

----

ಕನ್ನಡಪ್ರಭ ವಾರ್ತೆ ಹುಣಸಗಿ

ಬಣಜಿಗ ಸಮಾಜದ ಕುರಿತು ಅವಹೇಳನಕಾರಿ ಪದಗಳನ್ನು ಬಳಸಿ ಮಾತನಾಡಿ, ಸಮಾಜಗಳ ನಡುವೆ ದ್ವೇಷ ಮತ್ತು ವೈಮನಸ್ಸು ಉಂಟುಮಾಡಲು ಯತ್ನಿಸಿದ ಆರೋಪದಡಿ ದೈಹಿಕ ಶಿಕ್ಷಣ ಶಿಕ್ಷಕರೊಬ್ಬರ ವಿರುದ್ಧ ಹುಣಸಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಸುರಪುರ ತಾಲೂಕು ಯುವ ಘಟಕದ ಅಧ್ಯಕ್ಷ ಶಿವರಾಜ ಶರಣಪ್ಪ ಕಲಕೇರಿ ರಂಗಮಪೇಠ ಇವರು ನೀಡಿದ ದೂರಿನ ಮೇರೆಗೆ, ರಾಜನಕೊಳೂರ ನಿವಾಸಿ ಹಾಗೂ ದೈಹಿಕ ಶಿಕ್ಷಕ ಬಸನಗೌಡ ನಾನಾಗೌಡ ವಠಾರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.


ದೂರಿನ ಹಿನ್ನಲೆ: ಜುಲೈ 11ರಂದು ಮಧ್ಯಾಹ್ನ ಸುಮಾರು 12.30 ಗಂಟೆಗೆ ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ವಾಟ್ಸಪ್ ಗುಂಪಿನಲ್ಲಿ ಹರಿದಾಡಿದ ಆಡಿಯೋ ಕ್ಲಿಪ್‌ನಲ್ಲಿ, ಬಸನಗೌಡ ವಠಾರ ಅವರು ಗುಳಬಾಳ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯೊಂದಿಗೆ ದೂರವಾಣಿ ಸಂಭಾಷಣೆ ನಡೆಸುವ ವೇಳೆ ಬಣಜಿಗ ಸಮಾಜದ ಕುರಿತು ಅವಹೇಳನಕಾರಿ ಹಾಗೂ ನಿಂದನಾತ್ಮಕ ಪದಗಳನ್ನು ಬಳಸಿರುವುದು ಕೇಳಿಬಂದಿದೆ ಎನ್ನಲಾಗಿದೆ.

ಒಬ್ಬ ಜವಾಬ್ದಾರಿಯುತ ಶಿಕ್ಷಕರಾಗಿ ಸಮಾಜದಲ್ಲಿ ಸೌಹಾರ್ದತೆ ಬೆಳೆಸುವ ಬದಲು, ಬಣಜಿಗ ಹಾಗೂ ರೆಡ್ಡಿ ಸಮಾಜಗಳ ನಡುವೆ ದ್ವೇಷ ಮತ್ತು ವೈಮನಸ್ಸು ಉಂಟುಮಾಡುವ ಉದ್ದೇಶದಿಂದ ಈ ರೀತಿಯ ಹೇಳಿಕೆ ನೀಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಹುಣಸಗಿ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ.159/2026ರಡಿ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಕಲಂ 78(3) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹುಣಸಗಿ ಪೊಲೀಸ್ ಠಾಣೆ ಕ್ರೈಂ ಪಿಎಸ್ಐ ಭಾಗಣ್ಣ ತಿಳಿಸಿದ್ದಾರೆ.