ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ರಿದಮ್ಸ್ ವತಿಯಿಂದ ವೈದ್ಯರ ದಿನದ ಅಂಗವಾಗಿ ವೈದ್ಯರಿಗೆ ನಮನ ಸಂಗೀತ ನೃತ್ಯಗಳ ಸಮ್ಮಿಲನ- ರಸಸಂಜೆ ಬಹುಭಾಷಾ ಜನಪ್ರಿಯ ಚಿತ್ರಗೀತೆಗಳ ಕಾರ್ಯಕ್ರಮ ಶಾರದಾ ವಿಲಾಸ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಶನಿವಾರ ಜರುಗಿತು.

ಮೈಸೂರು ರಿದಮ್ಸ್‌ ತಂಡದಲ್ಲಿ ಸಾಫ್ಟ್‌ವೇರ್ ಉದ್ಯೋಗಿಗಳು, ಡಾಕ್ಟರ್‌ಗಳು ಮತ್ತಿತರ ವೃತ್ತಿಪರರೇ ಇರುವುದು ವಿಶೇಷ. ಈ ತಂಡದ ಸದಸ್ಯರು ಬಹುಭಾಷಾ ಜನಪ್ರಿಯ ಚಲನಚಿತ್ರೆಗೀತೆಗಳ ರಸಸಂಜೆ ಕರೋಕೆ ಕಾರ್ಯಕ್ರಮದಲ್ಲಿ ಸುಮಾರು 45 ಗೀತೆಗಳನ್ನು ಹಾಡಿದರು.

ಸಾಫ್ಟ್‌ವೇರ್‌ ಉದ್ಯೋಗಿಗಳಾದ ಎಸ್‌. ಅಮರ್‌, ಅಶ್ವಿನ್‌ ಅತ್ರಿ, ರವಿಕುಮಾರ್‌, ಪಿ.ಎಂ. ನವೀನ್‌ಕುಮಾರ್‌, ವೈದ್ಯರಾದ ಎಲ್‌. ಸುಮಾ, ಟಿ.ಕೆ. ಪ್ರಕಾಶ್‌, ಎ. ರವಿ, ಬಾಲಕಿರಣ್‌, ಸೌಮ್ಯಾ, ಎ.ಎನ್‌. ಪದ್ಮಾ, ಬ್ಯಾಂಕಿಂಗ್‌ ವೃತ್ತಿಯ ಸಂತೋಷ್‌ ನಾಯರ್‌, ಪೈ ಎಲೆಕ್ಟ್ರಾನಿಕ್ಸ್‌ನ ಸಹನಾ ಪೈ, ಶ್ರೀನಾಥ್‌ ಪೈ, ಯೋಗ ಗುರು ಸುಮಾ ಪ್ರಕಾಶ್‌, ಎಜುಟೆಕ್‌ನ ಕ್ರಿಷ್ಮಾ ರಘುರಾಂ, ನೃತ್ಯ ಮಾರ್ಗದರ್ಶಕಿ ದಿವ್ಯಶ್ರೀ ಅತ್ರಿ, ಪ್ರಥಮ ದರ್ಜೆ ಗುತ್ತಿಗೆದಾರ ಅಶ್ವತ್ಥ್‌ ನಾರಾಯಣ್‌, ಪ್ರವೀಣ್‌ ಘಾಟ್ಕೆ ಗೀತೆಗಳನ್ನು ಪ್ರಸ್ತುತಪಡಿಸಿದರು. ಸಾಫ್ಟ್‌ವೇರ್‌ ತರಬೇತುದಾರ ಎಸ್. ಉಮೇಶ್‌ ಕಾರ್ಯಕ್ರಮ ನಿರೂಪಿಸಿದರು.

ಇದೇ ವೇಳೆ ಹುಣಸೂರಿನ ಹಿರಿಯ ಇಎನ್‌ಟಿ ತಜ್ಞ ಡಾ.ಡಿ. ಮಾಧವ, ಜಿಲ್ಲಾಸ್ಪತ್ರೆಯ ಹಿರಿಯ ಅರವಳಿಕೆ ತಜ್ಢೆ ಡಾ.ಎಸ್. ಅಖಿಲಾ, ಮೈಸೂರು ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ. ರವಿಚೇತನ್ ಕುಮಾರ್, ಸಹಾಯಕ ಪ್ರಾಧ್ಯಾಪಕ ಡಾ.ಸಿ.ಎನ್. ಪ್ರದೀಪ್ ಕುಮಾರ್, ಸಂತಸ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ಸೌಮ್ಯಾ, ಕೆವಿಸಿ ಆಸ್ಪತ್ರೆಯ ಮೂಳೆ ಮತ್ತು ಸ್ನಾಯು ತಜ್ಞ ಡಾ.ಕೆ.ಸಿ. ನಂದೀಶ್ ಕುಮಾರ್, ಟಿ. ನರಸೀಪುರ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ. ಅಭಿಲಾಷ್ ಅವರನ್ನು ಸನ್ಮಾನಿಸಲಾಯಿತು.


ಶಾಸಕರಾದ ಕೆ. ಹರೀಶ್ ಗೌಡ, ಡಾ.ಡಿ. ತಿಮ್ಮಯ್ಯ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಕರ್ನಾಟಕ ರಕ್ಷಣಾ ವೇದಿಕೆ ಮಾಜಿ ಅಧ್ಯಕ್ಷ ಎಚ್.ಎಸ್‌.ಸುಜಿತ್‌ ಕುಮಾರ್‌, ಉದ್ಯಮಿ ಸಾವಿತ್ರಿ ಗೋಪಿನಾಥ್‌ ಶೆಣೈ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್‌. ಚಿದಂಬರಂ ಮುಖ್ಯ ಅತಿಥಿಗಳಾಗಿದ್ದರು.

ವೈದ್ಯ ವೃತ್ತಿ ಕಷ್ಟಕರವಾದುದು: ಕೆ.ಹರೀಶ್‌ ಗೌಡ

ಹೊರಗಿನಿಂದ ನೋಡಿದಾಗ ವೈದ್ಯರು ಒಳ್ಳೆಯ ಬಟ್ಟೆ ಹಾಕುತ್ತಾರೆ,. ಕಾರುಗಳಲ್ಲಿ ಓಡಾಡುತ್ತಾರೆ. ವಿಲಾಸ ಜೀವನ ನಡೆಸುತ್ತಾರೆ ಎಂದುಕೊಳ್ಳುತ್ತೇವೆ. ಆದರೆ ಒಳಹೊಕ್ಕು ನೋಡಿದಾಗ ಈ ವೃತ್ತಿ ಅತ್ಯಂತ ಕಷ್ಟಕರವಾದುದು ಎಂದು ಚಾಮರಾಜ ಕ್ಷೇತ್ರದ ಶಾಸಕ ಕೆ. ಹರೀಶ್‌ ಗೌಡ ಹೇಳಿದರು.

ಮೈಸೂರು ರಿದಮ್ಸ್‌ ತಂಡವು ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ವೈದ್ಯರ ದಿನಾಚರಣೆಯಲ್ಲಿ ಸಾಧಕ ವೈದ್ಯರನ್ನು ಸನ್ಮಾನಿಸಿ ಮಾತನಾಡಿದ ಅವರು, ಕೋವಿಡ್‌ ಬಂದ ನಂತರ ವೈದ್ಯರ ಕೆಲಸ ಎಷ್ಟು ಸವಾಲಿನದು ಎಂದು ಗೊತ್ತಾಯಿತು. ಅವರಿಗೆ ಸಾಕಷ್ಟು ಒತ್ತಡ ಇರುತ್ತದೆ. ಹೀಗಿರುವಾಗ ಒತ್ತಡ ನಿವಾರಣೆಗಾಗಿ ಅಮರ್‌ ಅವರ ನೇತೃತ್ವದಲ್ಲಿ ವೈದ್ಯರು ಸೇರಿದಂತೆ ವೃತ್ತಿಪರರು ಸಂಗೀತದಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.

ನನ್ನನ್ನು ಡಾಕ್ಟ್ರು ಮಾಡಬೇಕು ಎಂಬುದು ನಮ್ಮಪ್ಪನ ಆಸೆಯಾಗಿತ್ತು. ಅದಕ್ಕಾಗಿಯೇ ಮಹಾಜನ ಕಾಲೇಜಿನಲ್ಲಿ ಪಿಯುಸಿಯಲ್ಲಿ ಸೈನ್ಸ್‌ ಕೊಡಿಸಿದ್ದರು. ಆದರೆ ಅನಿವಾರ್ಯ ಕಾರಣಗಳಿಂದ ನಾನು ಪಿಯುಸಿಯನ್ನು ಮಿರ್ಲೆಯಲ್ಲಿ ಓದಬೇಕಾಗಿ ಬಂತು. ಅಲ್ಲಿ ಸೈನ್ಸ್‌ ಇರಲಿಲ್ಲ. ಹೀಗಾಗಿ ಆರ್ಟ್ಸ್‌ ವಿಭಾಗಕ್ಕೆ ಸೇರಿದೆ. ಡಾಕ್ಟ್ರು ಆಗದಿದ್ದರೂ ಜನರ ಬೆಂಬಲದಿಂದ ಈಗ ಶಾಸಕನಾಗಿದ್ದೇನೆ ಎಂದ ಅವರು, ನಾನು ವೈದ್ಯನಾಗಬೇಕು ಎಂಬ ನಮ್ಮ ತಂದೆಯ ಆಸೆಯನ್ನು ನನ್ಮ ಮಗ ಎಂಬಿಬಿಎಸ್‌ ಓದುವ ಮೂಲಕ ಪೂರೈಸಿದ್ದಾನೆ ಎಂದರು.

ವಿಧಾನ ಪರಿಷತ್‌ ಸದಸ್ಯ ಡಾ.ಡಿ. ತಿಮ್ಮಯ್ಯ ಮಾತನಾಡಿ, ಆರೋಗ್ಯವಂತ ಎಂದು ಹೇಳಬೇಕಾದರೆ ಎಲ್ಲಾ ರೀತಿಯಲ್ಲಿಯೂ ಸರಿಯಾಗಿರಬೇಕು. ಮನುಷ್ಯರ ಆರೋಗ್ಯ ಕಾಪಾಡುವಂಥ ವೈದ್ಯರು ಸಂಗೀತ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳುತ್ತಿರುವುದು ಸಂತಸಕರವಾದುದು ಎಂದರು.