ಕನ್ನಡಪ್ರಭ ವಾರ್ತೆ ಮೈಸೂರು
ಬಿಜೆಪಿ ಹಾಗೂ ಅದರ ನಾಯಕತ್ವವು ಕಾಯಕ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು ಅನ್ನೋ ಕಾರಣಕ್ಕೆ ರಘು ಕೌಟಿಲ್ಯರನ್ನು ಎಂಎಲ್ಸಿ ಮಾಡಿರೋದು. ಸಣ್ಣ ಸಮುದಾಯಕ್ಕೆ ಪ್ರಾತಿನಿಧ್ಯ ಕೊಟ್ಟಿರೋದಕ್ಕೆ ನಾವು ಹೆಮ್ಮೆ ಪಡಬೇಕು ಎಂದು ವಿಧಾನರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.ನಗರದ ಜೆ.ಕೆ.ಮೈದಾನದಲ್ಲಿ ಕಾಯಕ ಸಮುದಾಯಗಳ ಒಕ್ಕೂಟ ಮೈಸೂರು ವಿಭಾಗವು ಶನಿವಾರ ಆಯೋಜಿಸಿದ್ದ ವಿಧಾನ ಪರಿಷತ್ ನೂತನ ಸದಸ್ಯ ಆರ್.ರಘು ಕೌಟಿಲ್ಯ ಅಭಿನಂದನೆ ಹಾಗೂ ಬಿಜೆಪಿ ಕೃತಜ್ಞತಾ ಸಮರ್ಪಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಯಕ ಸಮುದಾಯದ ಜನ ಶ್ರಮಜೀವಿಗಳು. ಕಾಯಕ ಸಮುದಾಯಗಳಿಗೆ ಕೇಂದ್ರ ಸರ್ಕಾರ ವಿಶೇಷ ಯೋಜನೆ ನೀಡಿದೆ. ಕಾಯಕ ಸಮುದಾಯದ ಏಳಿಗೆಗೆ ಪ್ರೇರೆಪಣೆ ನೀಡಿದೆ ಎಂದರು.
ಅಧಿಕಾರಕ್ಕಾಗಿ ಪಕ್ಷಗಳು ಯಾವ ರೀತಿ ನಡೆದುಕೊಳ್ಳುತ್ತಿವೆ ಎಂಬುದನ್ನು ತಾವು ನೋಡಿದ್ದೀರಾ. ಅಹಿಂದ ಹೆಸರಿನ ಮೂಲಕ ಅಧಿಕಾರ ಹಿಡಿದವರು, ಕಾಯಕ ಸಮುದಾಯವನ್ನು ಪರಿಗಣಿಸಲಿಲ್ಲ. ಅಧಿಕಾರ ಜಪಿಸಿದವರು ಉಂಡು, ಕೊಂಡು ಹೋಗಾಯ್ತು. ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರವು ಕೂಡ ಕಾಯಕ ಸಮುದಾಯವನ್ನು ಕಡೆಗಣಿಸಿದೆ ಎಂದು ಆರೋಪಿಸಿದರು.ದಲಿತ ಸಮುದಾಯಗಳು ಕೂಡ ಇಂದು ಚಿಂತನೆ ಮಾಡಬೇಕಿದೆ. ತಳ ಸಮುದಾಯದಿಂದ ಬಂದು ರಾಜ್ಯಕ್ಕೆ ಕೊಡುಗೆ ಕೊಟ್ಟವರು ವಿ.ಶ್ರೀನಿವಾಸಪ್ರಸಾದ್. ಒಂದೇ ಕೂಗಿಗೆ ಸಮಸ್ಯೆ ಬಗೆಹರಿಯುತ್ತಿತ್ತು ಅಂತಹ ವ್ಯಕ್ತಿಯನ್ನು ರಾತ್ರೋರಾತ್ರಿ ಅಧಿಕಾರದಿಂದ ಕೆಳಗೆ ಇಳಿಸಿದರು. ಅಂಬರೀಶ್, ಬಸವಲಿಂಗಪ್ಪ ಹಾದಿಯಾಗಿ ಅನೇಕ ನಾಯಕರನ್ನು ಕಾಂಗ್ರೆಸ್ ಕಡೆಗಣಿಸಿತು. ಇಂತಹ ಪಕ್ಷವನ್ನು ನಾವು ತಿರಸ್ಕಾರ ಮಾಡಬೇಕು ಎಂದು ಕರೆ ನೀಡಿದರು.
ಗ್ಯಾರಂಟಿ ಎಲ್ಲರಿಗೂ ಫ್ರೀ ಅಂದ್ರಲ್ಲ. ಈಗ ಗ್ಯಾರಂಟಿಗೂ ಜಾತಿ ಹುಡುಕುತ್ತಾ ಇದ್ದೀರಾ?, 42 ಸಾವಿರ ಕೋಟಿ ಹಣ ಎಸ್ಸಿ ಎಸ್ಟಿಗೆ ಅಂತೀರಲ್ಲ, ಕೇವಲ ಘೋಷಣೆಗೆ ಮಾತ್ರ ಇದು ಸೀಮಿತವಾಗಬಾರದು. ದಲಿತ ಸಮುದಾಯಕ್ಕೆ ಇಟ್ಟ ಹಣ ನುಂಗಿದರೂ ಈಗ ಯಾಕೆ ಹೋರಾಟ ಮಾಡುತ್ತಿಲ್ಲ?. ನಮ್ಮ ಜೊತೆ ನಿಲ್ಲುವವರನ್ನು ನಾವು ಬೆಂಬಲಿಸಬೇಕು. ಅನ್ಯಾಯ ಮಾಡಿದವರನ್ನು ತಿರಸ್ಕಾರ ಮಾಡಬೇಕು. ಈಗ ಚುನಾವಣೆ ನಡೆದರೂ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಬಿಜೆಪಿ ಅಧಿಕಾರಕ್ಕೆ ಬರೋದನ್ನು ತಡೆಯೋಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದರು.
ಕಾಯಕ ರಕ್ಷಕ ಪ್ರಶಸ್ತಿ ಪ್ರದಾನ:
ಇದೇ ವೇಳೆ ಕಾಯಕ ಸಮುದಾಯಗಳ ಒಕ್ಕೂಟ ಮೈಸೂರು ವಿಭಾಗ ವತಿಯಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಕಾಯಕ ರಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದರಾದ ಗೋವಿಂದ ಕಾರಜೋಳ, ಪಿ.ಸಿ.ಮೋಹನ್, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಸಚಿವರಾದ ಬಿ.ಶ್ರೀರಾಮುಲು, ಎನ್.ಮಹೇಶ್, ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕರಾದ ಬಿ.ಹರ್ಷವರ್ಧನ್, ಬಾಲರಾಜು, ಬಿಜೆಪಿ ಜಿಲ್ಲಾಧ್ಯಕ್ಷ ಕುಂಬ್ರಳ್ಳಿ ಸುಬ್ಬಣ್ಣ, ನಗರಾಧ್ಯಕ್ಷ ಎಲ್. ನಾಗೇಂದ್ರ ಮೊದಲಾದವರು ಇದ್ದರು.
ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ: ಶ್ರೀರಾಮುಲು2028ಕ್ಕೆ ವಿಜಯೇಂದ್ರರವರ ನೇತೃತ್ವದಲ್ಲಿ ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ತಿಳಿಸಿದರು.
ಕಾಯಕ ಸಮುದಾಯಗಳಲ್ಲಿ ನಾಯಕರಾಗೋದು ತುಂಬಾ ಕಷ್ಟ. ಅಂತಹ ನಾಯಕರನ್ನು ಪಕ್ಷಗಳು ಗುರುತಿಸೋದು ವಿರಳ.ಇಂತಹ ಸಮುದಾಯವನ್ನು ಗುರುತಿಸೋದು ಯಡಿಯೂರಪ್ಪ ಅವರು ಮಾತ್ರ. ರಘು ಕೌಟಿಲ್ಯ ಆಯ್ಕೆ ವೇಳೆಯೂ ಒಮ್ಮತದ ನಿರ್ಧಾರದಿಂದ ಆಯ್ಕೆ ಮಾಡಲಾಯಿತು. ಬಿಜೆಪಿ ಹೊರತುಪಡಿಸಿ ಉಳಿದೆಲ್ಲ ಪಕ್ಷಗಳು ಕಾಯಕ ಸಮುದಾಯವನ್ನು ಕಡೆಗಣಿಸಿವೆ. ಸಣ್ಣ ಸಮುದಾಯದಿಂದ ಬಂದ ಮೋದಿಯವರು ದೇಶದ ಪ್ರಧಾನಿಯಾದರು ಎಂದರು.
ಇದೇ ವೇಳೆ ಪ್ರಚಾರಕ್ಕಾಗಿ ವಿದೇಶಿ ಕಿಡ್ ರಾಹುಲ್ ಗಾಂಧಿ ದೇಶದ ಬಗ್ಗೆ ಮಾತನಾಡ್ತಾರೆ ಎಂದು ಅವರು ಹರಿಹಾಯ್ದರು.ಬಿಜೆಪಿಯವರು ಅಹಿಂದ ನಾಯಕರು ಅಂತ ಬೋರ್ಡ್ ಹಾಕೊಂಡು ಓಡಾಡಲ್ಲ. ನಿಜಕ್ಕೂ ಅಹಿಂದ ಸಮುದಾಯಕ್ಕೆ, ಸಣ್ಣ ಸಣ್ಣ ಸಮುದಾಯಕ್ಕೆ ಪ್ರಾತಿನಿಧ್ಯ ಕೊಟ್ಟಿದ್ದು ಯಡಿಯೂರಪ್ಪನವರು. ಎಸ್ಟಿ ಸಮುದಾಯಕ್ಕೆ ಪರಿವಾರ ಸಮುದಾಯ ಸೇರಿಸಲು ಯಡಿಯೂರಪ್ಪ ಕಾರಣ. ಬಿಜೆಪಿ ಯಾವಾಗಲೂ ಸಣ್ಣ ಸಣ್ಣ ಸಮುದಾಯಗಳ ಜೊತೆ ಇರುತ್ತದೆ.- ಪ್ರತಾಪ್ ಸಿಂಹ, ಮಾಜಿ ಸಂಸದರು.
ಬೆಂಗಳೂರಿನಲ್ಲಿ ಫುಟ್ ಪಾತ್ ಒತ್ತುವರಿ ತೆರವಿನ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಫುಟ್ ಪಾತ್ ಮೇಲೆ ಕಾಯಕ ಸಮುದಾಯಗಳು ಜೀವನ ಕಟ್ಟಿಕೊಂಡಿವೆ. ಇಂತಹ ಕಾಯಕ ಸಮುದಾಯಗಳ ಮೇಲೆ ಡಿ.ಕೆ.ಶಿವಕುಮಾರ್ ಸರ್ಕಾರ ದಬ್ಬಾಳಿಕೆ ಮಾಡುತ್ತಿದೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾ ಗಾಂಧಿ ಮಗ ಸಂಜಯ್ ಗಾಂಧಿ ದೆಹಲಿಯಲ್ಲಿ ಮಾಡಿದ ರೀತಿ ಇಲ್ಲಿ ಫುಟ್ ಪಾತ್ ಒತ್ತುವರಿ ತೆರವು ಮಾಡಲಾಗುತ್ತಿದೆ. ಫುಟ್ ಪಾತ್ ವ್ಯಾಪಾರಿಗಳಿಗೆ ಮೊದಲು ಪರ್ಯಾಯ ವ್ಯವಸ್ಥೆ ಕಲ್ಪಿಸಿ ನಂತರ ಅದನ್ನು ತೆರವು ಮಾಡಿ.- ಗೋವಿಂದ ಕಾರಜೋಳ, ಸಂಸದರು