ಕನ್ನಡಪ್ರಭ ವಾರ್ತೆ ಮೈಸೂರು

ಡಿ.ಕೆ.ಶಿವಕುಮಾರ್ ಕೈ ತುಂಬಾ ದಾರ ಹಾಕಿರುತ್ತಾರೆ. ದಿನನಿತ್ಯ ದೇವಸ್ಥಾನಗಳಿಗೆ ಹೋಗುತ್ತಾರೆ. ಇದನ್ನು ನೋಡಿ ನೀವು ಗೊಂದಲಕ್ಕೆ ಸಿಲುಕಬಾರದು. ಶಿವ ಬೆಟ್ಟವನ್ನು ಕಪಾಲಿ ಬೆಟ್ಟ ಮಾಡಲು ಹೊರಟಿದ್ದು ಇದೇ ಡಿ.ಕೆ.ಶಿವಕುಮಾರ್. ಈಗ ಅವರು ಕೈಯಲ್ಲಿ ದಾರ ಕಟ್ಟಿಕೊಂಡಿದ್ದಾರೆ ಎಂದು ನಂಬಲು ಹೋಗಬೇಡಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ನಗರದ ಜೆ.ಕೆ.ಮೈದಾನದಲ್ಲಿ ಕಾಯಕ ಸಮುದಾಯಗಳ ಒಕ್ಕೂಟ ಮೈಸೂರು ವಿಭಾಗವು ಶನಿವಾರ ಆಯೋಜಿಸಿದ್ದ ವಿಧಾನ ಪರಿಷತ್ ನೂತನ ಸದಸ್ಯ ಆರ್.ರಘು ಕೌಟಿಲ್ಯ ಅಭಿನಂದನೆ ಹಾಗೂ ಬಿಜೆಪಿ ಕೃತಜ್ಞತಾ ಸಮರ್ಪಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಎಸ್ಐಆರ್ ಹೊತ್ತಿನಲ್ಲಿ ರಾಜ್ಯದಲ್ಲಿ ಪಿಆರ್‌ಸಿ ತರುತ್ತಿರುವ ರಾಜ್ಯ ಸರ್ಕಾರದ ಉದ್ದೇಶ ಶುದ್ಧಿಯಿಲ್ಲ. ರಾಜ್ಯ ಸರ್ಕಾರ ಪಿಆರ್‌ ಸಿ ಸಂಬಂಧ ಅಧಿಸೂಚನೆ ಹೊರಡಿಸಿದೆ. ಇದರ ವಿರುದ್ಧ ನಾವು ಹೋರಾಟ ಮಾಡಬೇಕು. ಇದರ ಬಗ್ಗೆ ನಮಗೆ ಆತಂಕ ಇರಬೇಕು, ಪ್ರತಿಭಟನೆ ಮಾಡಬೇಕು ಎಂದು ಕರೆ ನೀಡಿದರು.

ಎನ್ಆರ್‌ಸಿಯನ್ನು ತರಲು ಹೊರಟಿದ್ದಾಗ ಇದೇ ಕಾಂಗ್ರೆಸ್ ವಿರೋಧ ಮಾಡಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಇದೀಗ ಪಿಆರ್‌ಸಿ ಅನ್ನು ಸದ್ದಿಲ್ಲದೇ ರಾಜ್ಯದಲ್ಲಿ ತರುತ್ತಿದೆ. ಟೋಪಿ ವಾಲಾಗಳಿಗೆ ಶಾಶ್ವತವಾಗಿ ಹಕ್ಕು ಪತ್ರವನ್ನು ನೀಡಲು ಹೊರಟಿದ್ದಾರೆ ಎಂದು ಆರೋಪಿಸಿದರು.


ಎನ್ಆರ್‌ಸಿಯನ್ನು ಕೇಂದ್ರ ಸರ್ಕಾರ ಮಾಡುತ್ತದೆ. ಆದರೆ, ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಎನ್ಆರ್‌ಸಿಯನ್ನು ‌ವಿರೋಧ ಮಾಡಿತ್ತು. ಆದರೆ, ಕಾಂಗ್ರೆಸ್ ಸರ್ಕಾರವು ಪಿಆರ್‌ಸಿಯನ್ನು ಜಾರಿ ಮಾಡಲಾಗುತ್ತಿದೆ. ಇದು ಟೋಪಿವಾಲಾಗಳಿಗೆ ಕಾಯಂ ಸ್ಥಾನ ಕೊಡುವ ಉದ್ದೇಶವಾಗಿದೆ ಎಂದು ವಾಗ್ದಾಳಿ ನಡೆಸಿದರು.