ವಿದ್ಯಾರ್ಥಿಗಳಾದ ನೀವು ಕನಸು ಕಾಣಬೇಕು. ಮಲಗಿದ್ದಾಗ ಕಾಣುವುದು ಕನಸಲ್ಲ, ನಿದ್ರೆ ಮಾಡಲು ಬಿಡದೇ ಇರುವ ಹಾಗೇ ಮಾಡುವುದೇ ಕನಸು ಎಂಬ ಅಬ್ದುಲ್ ಕಲಾಂರವರ ನುಡಿಯನ್ನು ನೆನಪಿಸಿ ಕಿವಿಮಾತು ಹೇಳಿದರು. ವಿದ್ಯಾವಂತರಲ್ಲಿ ಕೃತಜ್ಞತಾ ಭಾವ ಇರಬೇಕು. ನಾವು ಓದಿದ ಸಂಸ್ಥೆಗೆ ನಮ್ಮ ಕೈಲಾದ ಸಹಾಯವನ್ನು ಮಾಡಬೇಕು.
ಕನ್ನಡಪ್ರಭ ವಾರ್ತೆ ಸುತ್ತೂರು
ಪ್ರತಿ ವಿದ್ಯಾರ್ಥಿಯಲ್ಲೂ ಹೋರಾಟದ ಕಿಚ್ಚು ಇರಬೇಕು ಎಂದು ಮೈಸೂರಿನ ನೂಪುರ ನೃತ್ಯ ಶಾಲೆಯ ನಿರ್ದೇಶಕ, ನಾಟ್ಯಾಚಾರ್ಯ ಪ್ರೊ.ಕೆ.ರಾಮಮೂರ್ತಿರಾವ್ ಹೇಳಿದರು.ಸುತ್ತೂರು ಜೆಎಸ್‌ಎಸ್ ವಸತಿ ಶಾಲೆಯ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿದ ನಂತರ ಅವರು ಮಾತನಾಡಿದರು.
ಈ ಸಂಸ್ಥೆಯು ಆಧ್ಯಾತ್ಮಿಕ ಪೀಠವಿದ್ದಂತೆ, ಇಲ್ಲಿ ಓದಿದ ಪ್ರತಿಯೊಬ್ಬರಿಗೂ ಗೌರವ ಸಿಗುತ್ತದೆ. ನಾವು ಶಿಕ್ಷಣದ ಜೊತೆಗೆ ಎಲ್ಲಾ ಕೆಲಸಗಳನ್ನು ಮಾಡುವುದರಿಂದ ಜ್ಞಾನ ವೃದ್ಧಿಯಾಗುತ್ತದೆ ಹಾಗೂ ಬದುಕುವ ಕಲೆ ತಿಳಿಯುತ್ತದೆ. ಹಿಂದಿನ ಶಿಕ್ಷಣ ಹಾಗೂ ಇಂದಿನ ಶಿಕ್ಷಣ ಕ್ರಮಗಳನ್ನು ಹೋಲಿಕೆ ಮಾಡುತ್ತಾ ಇಂದು ನಾವೆಲ್ಲರೂ ಕ್ರಿಯಾಶೀಲರಾಗಬೇಕು, ಯಾವುದೇ ಕೆಲಸವನ್ನು ಧೈರ್ಯದಿಂದ ಮಾಡಬೇಕು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪಠ್ಯ ಮತ್ತು ಸಹಪಠ್ಯ ಚಟುವಟಿಕೆ ಅತ್ಯಂತ ಅವಶ್ಯ ಎಂದು ತಿಳಿಸಿದರು. ದೇಶದ ಸತ್ಪ್ರಜೆಗಳಾಗಿ, ಉನ್ನತ ಸ್ಥಾನವನ್ನು ಅಲಂಕರಿಸಿ ಎಂದು ಶುಭ ಹಾರೈಸಿದರು.ಮೈಸೂರಿನ ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಡೀನ್ ಡಾ.ಎಂ.ಎನ್. ನಾಗೇಂದ್ರ ಪ್ರಸಾದ್‌ರವರು ಮಾತನಾಡಿ, ವಿದ್ಯಾರ್ಥಿಗಳಾದ ನೀವು ಕನಸು ಕಾಣಬೇಕು. ಮಲಗಿದ್ದಾಗ ಕಾಣುವುದು ಕನಸಲ್ಲ, ನಿದ್ರೆ ಮಾಡಲು ಬಿಡದೇ ಇರುವ ಹಾಗೇ ಮಾಡುವುದೇ ಕನಸು ಎಂಬ ಅಬ್ದುಲ್ ಕಲಾಂರವರ ನುಡಿಯನ್ನು ನೆನಪಿಸಿ ಕಿವಿಮಾತು ಹೇಳಿದರು. ವಿದ್ಯಾವಂತರಲ್ಲಿ ಕೃತಜ್ಞತಾ ಭಾವ ಇರಬೇಕು. ನಾವು ಓದಿದ ಸಂಸ್ಥೆಗೆ ನಮ್ಮ ಕೈಲಾದ ಸಹಾಯವನ್ನು ಮಾಡಬೇಕು ಎಂದರು.
ಮೈಸೂರಿನ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಸಹ ಪ್ರಾಧ್ಯಾಪಕರಾದ ಡಾ. ಅಶ್ವಿನಿ ಪ್ರಸಾದ್‌ರವರು, ವಿದ್ಯಾರ್ಥಿಸಂಘದ ನಾಯಕರಾದವರು ಇತರ ವಿದ್ಯಾರ್ಥಿಗಳಿಗೆ ದಾರಿದೀಪವಾಗಬೇಕು. ನಾವು ಬೇರೆಯವರ ಸಂತೋಷದಲ್ಲಿ ನಮ್ಮ ಸಂತೋಷವನ್ನು ಕಾಣಬೇಕು ಎಂದರು.ಸುತ್ತೂರು ಶಾಲೆಯ ಹಿರಿಯ ವಿದ್ಯಾರ್ಥಿಯಾದ ಡಾ.ಎಸ್. ಹರ್ಷವರ್ಧನ್ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ಈ ಶಾಲೆಯು ವಿದ್ಯಾರ್ಥಿಗಳಿಗೆ ಒಂದು ಸ್ಪೂರ್ತಿದಾಯಕವಾಗಿದ್ದು, ವಿದ್ಯಾರ್ಥಿಯಾದ ನೀವು ಒಂದು ಗುರಿ, ಸಾಮರ್ಥ್ಯವನ್ನು ಇಟ್ಟುಕೊಂಡು ಪರಿಶ್ರಮದ ಮೂಲಕ ಮುಂದೆ ಸಾಗಿದರೆ ಗುರಿಯನ್ನು ಆತ್ಮವಿಶ್ವಾಸದಿಂದ ತಲುಪಬಹುದು ಎಂದರು.
ವಿದ್ಯಾರ್ಥಿ ದೆಸೆಯಲ್ಲಿ ಸಮಯವನ್ನು ಸದ್ಭಳಕೆ ಮಾಡಿಕೊಂಡು ದುಶ್ಚಟಗಳಿಗೆ, ಸಾಮಾಜಿಕ ಮಾಧ್ಯಮಗಳಿಗೆ ಬಲಿಯಾಗದಿರಿ ಎಂದರು.ಸುತ್ತೂರು ಜೆಎಸ್‌ಎಸ್ ಸಂಸ್ಥೆಗಳ ಸಹಾಯಕ ಆಡಳಿತಾಧಿಕಾರಿ ಜಿ.ಎಲ್. ತ್ರಿಪುರಾಂತಕ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜೆಎಸ್‌ಎಸ್ ಸಂಸ್ಥೆಗಳ ಸಹಾಯಕ ಸಂಯೋಜನಾಧಿಕಾರಿ ವೀರಭದ್ರಯ್ಯ, ಮುಖ್ಯಸ್ಥರಾದ ಡಾ.ಬಿ.ಎನ್. ಜ್ಞಾನೇಶ್, ಎಚ್.ಎಂ. ಮಹೇಶ್, ಎಂ. ರಾಜಶೇಖರಮೂರ್ತಿ, ಜಿ. ಶಿವಮಲ್ಲು, ಮ.ಗು. ಬಸವಣ್ಣ, ಜಿ.ಎಂ. ಷಡಕ್ಷರಿ, ಜಿ. ಶಿವಸ್ವಾಮಿ ಇದ್ದರು.ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಬಿ. ವೇದಾವತಿ ಸ್ವಾಗತಿಸಿದರು. ಸಿದ್ದರಾಜು ವಂದಿಸಿದರು, ಎಚ್.ಎಂ. ಸವಿತಾ ನಿರೂಪಿಸಿದರು.