ಡಿ.ಕೆ.ಶಿವಕುಮಾರ್ ಮುಖವಾಡದ ಸಿಎಂ. ಊರಿನವರಿಗೆಲ್ಲಾ ನಾಮ ಹಾಕುವ ವ್ಯಕ್ತಿ. ಡಿಕೆಶಿ ಎಲ್ಲರಿಗೂ ಕಾಣುವ ರೀತಿ ವಿಭೂತಿ, ನಾಮ ಹಾಕುತ್ತಾರೆ. ಹಣೆಯ ತುಂಬ ವಿಭೂತಿ. ಹೃದಯದ ತುಂಬಾ ಬಾಂಗ್ಲಾ ವಲಸಿಗರ ಮೇಲೆ ಪ್ರೀತಿ. ಬಾಂಗ್ಲಾ ವಲಸಿಗರಿಗೆ ಮತದಾನದ ಹಕ್ಕು ಕೊಡಲು ರಾಜ್ಯ ಸರ್ಕಾರ ಮುಂದಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಕರ್ನಾಟಕದಲ್ಲೂ 20 ರಿಂದ 30 ಲಕ್ಷ ಮಂದಿ ಅಕ್ರಮ ಬಾಂಗ್ಲಾ ವಲಸಿಗರು ಇದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದರು.

ನಗರದ ಜೆ.ಕೆ.ಮೈದಾನದಲ್ಲಿ ಕಾಯಕ ಸಮುದಾಯಗಳ ಒಕ್ಕೂಟ ಮೈಸೂರು ವಿಭಾಗವು ಶನಿವಾರ ಆಯೋಜಿಸಿದ್ದ ವಿಧಾನ ಪರಿಷತ್ ನೂತನ ಸದಸ್ಯ ಆರ್.ರಘು ಕೌಟಿಲ್ಯ ಅಭಿನಂದನೆ ಹಾಗೂ ಬಿಜೆಪಿ ಕೃತಜ್ಞತಾ ಸಮರ್ಪಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಡಿ.ಕೆ.ಶಿವಕುಮಾರ್ ಮುಖವಾಡದ ಸಿಎಂ. ಊರಿನವರಿಗೆಲ್ಲಾ ನಾಮ ಹಾಕುವ ವ್ಯಕ್ತಿ. ಡಿಕೆಶಿ ಎಲ್ಲರಿಗೂ ಕಾಣುವ ರೀತಿ ವಿಭೂತಿ, ನಾಮ ಹಾಕುತ್ತಾರೆ. ಹಣೆಯ ತುಂಬ ವಿಭೂತಿ. ಹೃದಯದ ತುಂಬಾ ಬಾಂಗ್ಲಾ ವಲಸಿಗರ ಮೇಲೆ ಪ್ರೀತಿ. ಬಾಂಗ್ಲಾ ವಲಸಿಗರಿಗೆ ಮತದಾನದ ಹಕ್ಕು ಕೊಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ದೂರಿದರು.

ಸಿದ್ದರಾಮಯ್ಯ ತಮ್ಮ ಆಡಳಿತದಲ್ಲಿ ಮೂಡಾ ಸೈಟ್ ಮಾಡಿಕೊಂಡಿದ್ದೇ ಅವರ ಸಾಧನೆ. ರಾಜ್ಯದಲ್ಲಿ ಇರೋದು ಟೆಂಡರ್ ಸರ್ಕಾರ. ಇನ್ನೂ ಒಂದೂವರೆ ವರ್ಷ ಈ ಸರ್ಕಾರಕ್ಕೆ ಸಮಯವಿದೆ. ಆದರೆ, ಒಂದೂವರೆ ವರ್ಷ ಕೂಡ ಉಳಿಯೋದು ಅನುಮಾನ. ಒಂದೂವರೆ ವರ್ಷದಲ್ಲಿ ಇನ್ನೊಬ್ಬರು ಸಿಎಂ ಬರಬಹುದು. ಒಂದೂವರೆ ವರ್ಷದ ಸರ್ಕಾರ ಇದು ಎಂದು ವಾಗ್ದಾಳಿ ನಡೆಸಿದರು.

30ಕ್ಕೆ ಟೆಂಡರ್ ಕರೆದುಕೊಂಡಿದ್ದಾರೆ. ಡಿಕೆಶಿ ಅಂದರೆ ಟೆಂಡರ್. ಡಿಕೆಶಿ ಟೆಂಡರ್ ಸಿಎಂ. ರಾಹುಲ್ ಗಾಂಧಿ ಹಾಕಿದ ಟೆಂಡರ್ ಅನ್ನು ಡಿಕೆಶಿ ಖರೀದಿ ಮಾಡುತ್ತಿದಾರೆ. ಮೂರು ಸಾವಿರ, ನಾಲ್ಕು ಸಾವಿರ ಕೋಟಿ ಹಣ ಕೊಡ್ತೀನಿ ಎಂದು ಹೈಕಮಾಂಡ್‌ಗೆ ಹೇಳಿ ಡಿಕೆಶಿ ಸಿಎಂ ಆಗಿದ್ದಾರೆ. 60 ಸಾವಿರ ಎಕರೆ ಭೂಮಿ ನೋಟೀಫಿಕೇಷನ್ ಮಾಡಿದ್ದಾರೆ. ಡಿಕೆಶಿಯದ್ದು ಶೇ.60 ಪರ್ಸೆಂಟ್ ಸರ್ಕಾರ ಎಂದು ಆರೋಪಿಸಿದರು.

ಪಿಆರ್‌ಸಿ ಆದೇಶ ವಾಪಸ್ ಪಡೆಯಿರಿ:

ಸಂವಿಧಾನಕ್ಕೆ ವಿರುದ್ಧವಾಗಿರುವ ಶಾಶ್ವತ ವಾಸ ದೃಢೀಕರಣ ಪತ್ರ (ಪಿಆರ್‌ಸಿ) ಆದೇಶವನ್ನು ರಾಜ್ಯ ಸರ್ಕಾರ ವಾಪಸ್ ಪಡೆಯಬೇಕು. ಪಿಆರ್‌ಸಿ ಕೊಡುವ ಹಕ್ಕು ರಾಜ್ಯ ಸರ್ಕಾರಕ್ಕೆ ಇಲ್ಲ. ಇದು ಸಂವಿಧಾನದ ವಿರೋಧಿ ನಡೆ ಎಂದು ಟೀಕಿಸಿದರು.

ಈಗ ದೇಶದಲ್ಲಿ ಎಸ್ಐಆರ್ ಪ್ರಕ್ರಿಯೆ ನಡೆಯುತ್ತಿದೆ. ಎಲ್ಲರೂ ಇದರಲ್ಲಿ ಭಾಗಿಯಾಗಬೇಕು. ನಮ್ಮ ದೇಶದಲ್ಲಿ 2 ಕೋಟಿಗೂ ಹೆಚ್ಚು ಬಾಂಗ್ಲಾ ಹಾಗೂ ಪಾಕಿಸ್ತಾನದ ಜನರಿದ್ದಾರೆ. ಕರ್ನಾಟಕದಲ್ಲೂ ಬಾಂಗ್ಲಾ, ಪಾಕಿಸ್ತಾನ ವಲಸಿಗರು ಇದ್ದಾರೆ. ಇವರೆಲ್ಲರೂ ಪಡಿತರ ಅಕ್ಕಿ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ಬಾಂಗ್ಲಾ ವಲಸಿಗರ ಮೇಲೆ ಡಿಕೆಶಿಗೆ ಪ್ರೀತಿ ಜಾಸ್ತಿ. ಬಾಂಗ್ಲಾ ವಲಸಿಗರನ್ನು ನಾವು ಬಿಟ್ಟಿಲ್ಲ. ನಿಮ್ಮ ಪಾರ್ಟ್ನರ್ ಮಮತಾ ಬ್ಯಾನರ್ಜಿ ಬಿಟ್ಟಿರೋದು. ಕೇಂದ್ರದಲ್ಲಿ ನೀವಿದ್ದಾಗ ಅವರನ್ನು ಒಳ ಬಿಟ್ಟಿರೋದು. ಮತಕ್ಕಾಗಿ ಪಿಆರ್‌ಸಿ ಕೊಡ್ತೀವಿ ಅಂತಿದ್ದಾರೆ. ಬಾಂಗ್ಲಾ ವಲಸಿಗರಿಗಾಗಿ ಈ ಪಿಆರ್‌ಸಿ ಆದೇಶ ಹೊರಡಿಸಿದ್ದಾರೆ. ಕೇಂದ್ರದ ಕಾನೂನನ್ನು ತಿರುಚುವ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ದೂರಿದರು.

ಅತ್ಯಂತ ಹಿಂದುಳಿದ ಸಮುದಾಯದ ನರೇಂದ್ರ ಮೋದಿ ಅವರು ಪ್ರಧಾನಿ ಆಗಿರೋದನ್ನು ಕಾಂಗ್ರೆಸ್ ನವರು ಸಹಿಸುತ್ತಿಲ್ಲ.

ಮೋದಿ ಅವರ ಜಾತಿಯ ಕಾರಣಕ್ಕೆ ಕಾಂಗ್ರೆಸ್ ಮೋದಿ ಅವರನ್ನು ವಿರೋಧಿಸುತ್ತಿದೆ. ರಾಜ್ಯದಲ್ಲಿ ಇರೋದು ನಾಲಾಯಕ್ ಕಾಂಗ್ರೆಸ್ ಸರ್ಕಾರ. ಅಹಿಂದ ವರ್ಗಗಳ ರಕ್ಷಣೆ ಮಾಡಲು ಆಗದ ನರ ಸತ್ತ ಕಾಂಗ್ರೆಸ್ ಸರ್ಕಾರ ಇದು. ಕಾಂಗ್ರೆಸ್ ಅತಿಯಾದ ಅಲ್ಪಸಂಖ್ಯಾತ ಓಲೈಕೆಯಿಂದಾಗಿ ರಾಜ್ಯದಲ್ಲಿ ಹಿಂದೂಗಳ ಮಾರಣಹೋಮ ನಡೆಯುತ್ತಿದೆ.

- ಆರ್. ಅಶೋಕ್, ವಿಧಾನಸಭೆ ಪ್ರತಿಪಕ್ಷ ನಾಯಕರು