ಭಾರತ ದೇಶ ತಾಂತ್ರಿಕತೆಯಲ್ಲಿ ಮುಂದುವರೆಯುತ್ತಿದ್ದು, ಹೆಣ್ಣು ಮಕ್ಕಳು ಕೂಡ ಇಂದು ಎಲ್ಲ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಒಂದು ದೇಶ ಪ್ರಗತಿ ಹೊಂದಬೇಕಾದರೆ ಮೊದಲು ಹೆಣ್ಣು ಮಕ್ಕಳು ಶಿಕ್ಷಿತರಾಗಬೇಕು. ಇಂತಹ ಹೆಣ್ಣು ಮಕ್ಕಳ ಕಾಲೇಜನ್ನು ತೆರೆದಿದ್ದು, ಶ್ರೀಗಳ ಮಾರ್ಗದರ್ಶನದಲ್ಲಿ ಶಿಸ್ತು ಎದ್ದು ಕಾಣುತ್ತಿರುವುದು ಶ್ಲಾಘನೀಯ.
ಕನ್ನಡಪ್ರಭ ವಾರ್ತೆ ಮೈಸೂರು
ವಿದ್ಯೆಯ ಜೊತೆ ಸಂಸ್ಕಾರ ಇದ್ದರೆ ಮಾತ್ರ ವಿದ್ಯಾರ್ಥಿನಿಯರ ಭವಿಷ್ಯ ಸುಂದರವಾಗಿರುತ್ತದೆ ಎಂದು ಕುವೆಂಪುನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಗುಬ್ಬಿಗೂಡು ರಮೇಶ್ ಹೇಳಿದರು.ಶ್ರೀ ನಟರಾಜ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಸ್ನೇಹಸಿಂಚನ ಹಾಗೂ 2025-26ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿದ ನಂತರ ಅವರು ಮಾತನಾಡಿದರು.
ಭಾರತ ದೇಶ ತಾಂತ್ರಿಕತೆಯಲ್ಲಿ ಮುಂದುವರೆಯುತ್ತಿದ್ದು, ಹೆಣ್ಣು ಮಕ್ಕಳು ಕೂಡ ಇಂದು ಎಲ್ಲ ಕ್ಷೇತ್ರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಒಂದು ದೇಶ ಪ್ರಗತಿ ಹೊಂದಬೇಕಾದರೆ ಮೊದಲು ಹೆಣ್ಣು ಮಕ್ಕಳು ಶಿಕ್ಷಿತರಾಗಬೇಕು. ಇಂತಹ ಹೆಣ್ಣು ಮಕ್ಕಳ ಕಾಲೇಜನ್ನು ತೆರೆದಿದ್ದು, ಶ್ರೀಗಳ ಮಾರ್ಗದರ್ಶನದಲ್ಲಿ ಶಿಸ್ತು ಎದ್ದು ಕಾಣುತ್ತಿರುವುದು ಶ್ಲಾಘನೀಯ.ಈ ಸಂಸ್ಥೆಯ ಸಂಪ್ರದಾಯ, ಸಂಸ್ಕಾರ ನನಗೆ ತುಂಬಾ ಇಷ್ಟವಾಯಿತು. ಸಂಸ್ಕೃತಿಯೇ ನಶಿಸಿ ಹೋಗುತ್ತಿರುವ ಈ ಕಾಲದಲ್ಲಿ ಸಂಸ್ಥೆಯಲ್ಲಿ ಸಂಸ್ಕಾರ ಎದ್ದು ಕಾಣುತ್ತಿರುವುದು ಸಂತೋಷದ ವಿಷಯ. ಸುಸಂಸ್ಕೃತವಾದ ಉಡುಗೆಯಲ್ಲಿ ಭಾರತೀಯ ಸಂಸ್ಕೃತಿಗೆ ಪ್ರತೀಕವಾಗಿರುವುದು ಶಿಕ್ಷಣ ಸಂಸ್ಥೆ ಸಂಸ್ಕೃತಿಯನ್ನು ಉಳಿಸಿ, ಬೆಳೆಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಗ್ರಾಮೀಣ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡುವಲ್ಲಿ ಸಂಸ್ಥೆ ಮೊದಲಿನಿಂದಲೂ ತುಂಬಾ ಹೆಸರುವಾಸಿಯಾಗಿದೆ. ಮನಸ್ಸಿನಲ್ಲಿ ಬೇರೆ ಯಾವ ವ್ಯಾಮೋಹಗಳಿಗೂ ಅವಕಾಶ ಕೊಡದೇ ಮುಂದುವರೆಯಬೇಕು. ಮೌಲ್ಯಯುತ ಶಿಕ್ಷಣವನ್ನು ಪಡೆಯಬೇಕು. ಮೌಲ್ಯವಿಲ್ಲದ ಶಿಕ್ಷಣದಿಂದಲೇ ಇಂದು ಜಗತ್ತಿನಾದ್ಯಂತ ಹಿಂಸೆ, ಅತ್ಯಾಚಾರ, ಬಾಲಾಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೆಣ್ಣು ಮಕ್ಕಳು ಮನಸ್ಸು ಮಾಡಿದರೆ ಇಡೀ ಸಮಾಜಕ್ಕೆ ನೈತಿಕ ಶಿಕ್ಷಣವನ್ನು ನೀಡಬಹುದು.ಕ್ಷಣಿಕ ಸುಖ ಜೀವನವನ್ನು ನಾಶ ಮಾಡುತ್ತದೆ. ಹಾಗಾಗಿ ವಿದ್ಯಾರ್ಜನೆಯ ಕಡೆಗೆ ಗಮನ ಹರಿಸಬೇಕು. ಶಿಕ್ಷಣವಿಲ್ಲದಿದ್ದರೆ ಸಮಾಜದಲ್ಲಿ ಒಳ್ಳೆಯ ಸ್ಥಾನ ಮಾನವಿರುವುದಿಲ್ಲ. ಪದವಿ ಪಡೆಯುವುದರ ಜೊತೆಗೆ ನೀವೆಲ್ಲರೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಒಳ್ಳೆಯ ಸ್ಥಾನ-ಮಾನಗಳನ್ನು ಪಡೆಯಿರಿ, ಮುಂದೆ ಜೀವನದಲ್ಲಿ ನೀವೆ ಸಾವಿರಾರು ಜನರಿಗೆ ಸಹಾಯ ಮಾಡಬಹುದು. ಕಲಾ ವಿಭಾಗದ ವಿದ್ಯಾರ್ಥಿನಿಯರು ಕೀಳರಿಮೆಯನ್ನು ಇಟ್ಟುಕೊಳ್ಳಬಾರದು.
ಸಮಾಜ ವಿಜ್ಞಾನವೇ ಈ ದೇಶದ ಜೀವಾಳ. ವಿದ್ಯೆಯ ಜೊತೆಗೆ ವಿಚಾರವಂತರಾಗಿ ವಿಶ್ಲೇಷಣೆ ಮಾಡುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಹೆಣ್ಣು ಮಕ್ಕಳು ತಮಗೆ ತಾವೇ ಸರಿ ಸಾಟಿಯಾಗಬೇಕು. ನಾವು ಬೇರೆಯವರಿಗೆ ಮಾದರಿಯಾಗುವಂತೆ ಬದುಕಬೇಕು. ಇಂದು ಸಾಕಷ್ಟು ಅವಕಾಶಗಳು ನಮ್ಮ ಮುಂದಿವೆ. ಕಲಿಯಲು ಆಸಕ್ತಿ ಮತ್ತು ಮನಸ್ಸು ಮುಖ್ಯ ಎಂದರು.ಮುಖ್ಯಅತಿಥಿಯಾಗಿದ್ದ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಕೆ.ಪಿ. ಗುರುರಾಜ್ ಮಾತನಾಡಿ, ವಿದ್ವಾಂಸರು, ಜ್ಞಾನಿಗಳು ಜಗತ್ತಿನಾದ್ಯಂತ ಪೂಜಿಸಲ್ಪಡುತ್ತಾರೆ. ಪ್ರತಿಭೆಗೆ ಯಾವುದೇ ಜಾತಿ, ವರ್ಣ ಮತಗಳಿಲ್ಲ, ಶ್ರೀಗಳು ಮಹಿಳಾ ಕ್ಷೇತ್ರದಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳ ಬೆಳವಣೆಗಾಗಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ತೆರೆದಿದ್ದಾರೆ. ಶ್ರೀಗಳ ಪರಿಶ್ರಮದ ಫಲ ಇಂದು ಹೆಮ್ಮರವಾಗಿ ಬೆಳೆಯುತ್ತಿದೆ. ಜಗತ್ತಿನಲ್ಲಿ ಎಲ್ಲದಕ್ಕಿಂತ ಬೆಲೆಯುಳ್ಳದ್ದು ವಿದ್ಯೆ. ಶಾಂತಿ, ಸಂಯಮ, ಏಕಾಗ್ರತೆ ಹಾಗೂ ಶ್ರದ್ಧೆಯ ಮೂಲಕ ನಾವು ಬೆಳೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ನಟರಾಜ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಎಚ್.ವಿ. ಬಸವರಾಜು ಹಿನಕಲ್ ಮಾತನಾಡಿ, ಯುವ ಶಕ್ತಿ ನಮ್ಮ ದೇಶದ ಶಕ್ತಿ, ನಮ್ಮ ಪ್ರೇರಕ ಶಕ್ತಿ, ಬಡತನದಿಂದಲ್ಲೇ ನಾವು ಸಿರಿತನವಾಗಬೇಕು. ಶರಣ ಚಿಂತನೆಯೇ ಶಿಕ್ಷಣದ ಧ್ಯೇಯೋದ್ದೇಶವಾಗಬೇಕು. ಗ್ರಾಮೀಣ ಪ್ರದೇಶದಿಂದ ಬರುವ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನಮ್ಮ ಸಂಸ್ಥೆಯೇ ಸ್ಫೂರ್ತಿದಾಯಕ ಮತ್ತು ಪ್ರೇರಣದಾಯಕವಾದ ಪ್ರತಿಷ್ಠಾನವಗಿದೆ. ಜೀವನದಲ್ಲಿ ವಿದ್ಯಾರ್ಜನೆಯೇ ಕಾಯಕವಾಗಬೇಕು. ನಾವು ಶಿಕ್ಷಣವನ್ನು ಇಷ್ಟಪಟ್ಟು ಪಡೆಯಬೇಕು, ಕಷ್ಟಪಟ್ಟು ಪಡೆಯಬಾರದು. ಎಲ್ಲದಕ್ಕೂ ಪ್ರೇರಣೆಯೇ ಹೆಣ್ಣು ಮಕ್ಕಳು ಎಂದು ತಿಳಿಸಿದರು.ಶ್ರೀಹೊಸಮಠದ ಅಧ್ಯಕ್ಷ ಶ್ರೀಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀ ನಟರಾಜ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ವಿ.ಡಿ. ಸುನೀತಾರಾಣಿ ಇದ್ದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು, ಉಪನ್ಯಾಸಕಿ ಬಿ. ರಾಧಾ ಸ್ವಾಗತಿಸಿದರು, ಉಪನ್ಯಾಸಕಿ ಕೆ.ಎಸ್. ಪುಷ್ಪಾ ವಂದಿಸಿದರು, ಎಸ್. ವೇದಾವತಿ ನಿರೂಪಿಸಿದರು.