ಸಮ ಸಮಾಜದ ಕನಸು ಕಂಡಿದ್ದ ಬಸವಣ್ಣ: ಸಚಿವ ಎಂ.ಬಿ. ಪಾಟೀಲ

KannadaprabhaNewsNetwork |  
Published : Apr 02, 2026, 02:15 AM IST
 | Kannada Prabha

ಸಾರಾಂಶ

ಕಾಯಕ ಮತ್ತು ದಾಸೋಹ ತತ್ವದಡಿ ಹೊಸ ಧರ್ಮವನ್ನೇ ಹುಟ್ಟುಹಾಕಿ, ಸಮಾನತೆಯ ಸಮಾಜದ ಕನಸು ಕಂಡವರು ಬಸವಣ್ಣನವರು.

ಗದಗ: ಬಸವಣ್ಣನವರ ಆಶಯಗಳನ್ನು ಮತ್ತು ಶರಣರ ಚಿಂತನೆಗಳನ್ನು ಆಧುನಿಕ ಕಾಲಕ್ಕೆ ವಿಸ್ತರಿಸಿದ ಕೀರ್ತಿ ಲಿಂ. ಡಾ. ಸಿದ್ಧಲಿಂಗ ಶ್ರೀಗಳಿಗೆ ಸಲ್ಲುತ್ತದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.

ಬುಧವಾರ ರಾತ್ರಿ ನಗರದ ತೋಂಟದಾರ್ಯ ಮಠದ ಆವರಣದಲ್ಲಿ ತೋಂಟದಾರ್ಯ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಕಾಯಕ ಮತ್ತು ದಾಸೋಹ ತತ್ವದಡಿ ಹೊಸ ಧರ್ಮವನ್ನೇ ಹುಟ್ಟುಹಾಕಿ, ಸಮಾನತೆಯ ಸಮಾಜದ ಕನಸು ಕಂಡವರು ಬಸವಣ್ಣನವರು ಎಂದರು.

ಇಂದು ನಾವು ಜಾತ್ಯತೀತ ಸಮಾಜದ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ ಬಸವಣ್ಣನವರು ಅಂದೇ ಜಾತಿರಹಿತ ಸಮಾಜದ ಬಗ್ಗೆ ಸ್ಪಷ್ಟ ಚಿಂತನೆ ನಡೆಸಿದ್ದರು. ಕಲ್ಯಾಣ ಕ್ರಾಂತಿಯ ನಂತರದ ದಿನಗಳಲ್ಲಿ ಅನುಭವ ಮಂಟಪದ ಆಶಯಗಳನ್ನು ಜೀವಂತವಾಗಿರಿಸಲು ತೋಂಟದಾರ್ಯ ಮಠ ಮಹತ್ತರ ಪಾತ್ರ ವಹಿಸಿದೆ. ಅಂದು 750 ವಿರಕ್ತರನ್ನು ಒಂದುಗೂಡಿಸಿ ಧರ್ಮ ಪ್ರಸಾರ ಮಾಡಿದ ಪರಂಪರೆ ಈ ಮಠಕ್ಕಿದೆ. ಅಂತಹ ಭವ್ಯ ಪರಂಪರೆಯನ್ನು ಬೆಳಗಿದವರು ಲಿಂ. ಸಿದ್ಧಲಿಂಗ ಶ್ರೀಗಳು. ಅವರು ಬಸವಾದಿ ಶರಣರ ವಿಚಾರಧಾರೆಗಳನ್ನು ಕೇವಲ ಧಾರ್ಮಿಕ ಚೌಕಟ್ಟಿನಲ್ಲಿರಿಸದೆ, ಕನ್ನಡ ಸಾಹಿತ್ಯದ ಮೂಲಕ ಜನಸಾಮಾನ್ಯರಿಗೆ ತಲುಪಿಸಿದರು ಎಂದರು.

ಲಿಂ. ಸಿದ್ಧಲಿಂಗ ಶ್ರೀಗಳ ರೀತಿಯಲ್ಲಿಯೇ ಸಿದ್ದರಾಮ ಸ್ವಾಮೀಜಿ ಅವರು ಗಡಿ ಭಾಗದಲ್ಲಿ ಕನ್ನಡವನ್ನು ಕಟ್ಟುವ ಕೆಲಸವನ್ನು ಅತ್ಯಂತ ನಿಷ್ಠೆಯಿಂದ ಮಾಡಿದ್ದಾರೆ. ನಾಗನೂರು ಮಠದ ಮೂಲಕ ಅವರು ಕೈಗೊಂಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಗಳನ್ನು ಗುರುತಿಸಿ ಸರ್ಕಾರ ಶ್ರೀಮಠಕ್ಕೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ ಎಂದರು.

ಸಾನ್ನಿಧ್ಯವನ್ನು ತೋಂಟದ ಸಿದ್ದರಾಮ ಶ್ರೀ, ಆನಂದಪುರ ಮುರುಘಾಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀ, ಹುಕ್ಕೇರಿಮಠದ ಸದಾಶಿವ ಶ್ರೀ, ಭೈರನಹಟ್ಟಿಯ ಶಾಂತಲಿಂಗ ಶ್ರೀ, ಚನ್ನಮಲ್ಲಿಕಾರ್ಜುನ ಶ್ರೀ, ಸಿದ್ದಲಿಂಗ ದೇವರು, ಬಸವಮಹಾಂತ ಸ್ವಾಮೀಜಿ, ಶಿವಾನಂದ ದೇವರು, ವೆಂಕಟಾಪುರ ಶರಣರು, ಶಿವಮಹಾಂತ ಸ್ವಾಮೀಜಿ ವಹಿಸಿದ್ದರು.

ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಮಾಜಿ ಸಚಿವ ಎಸ್.ಎಸ್. ಪಾಟೀಲ, ಮಾಜಿ ಸಂಸದ ಐ.ಜಿ. ಸನದಿ, ಡಾ. ಐಹೊಳೆ, ಶ್ರೀಮಠದ ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟರ್ ಉಪಸ್ಥಿತರಿದ್ದರು. ಜಾತ್ರಾ ಸಮಿತಿ ಅಧ್ಯಕ್ಷ ವಿನಾಯಕ ಮಾನ್ವಿ ಸ್ವಾಗತಿಸಿದರು. ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಬಾಹುಬಲಿ ಜೈನರ್ ನಿರೂಪಿಸಿದರು.

ಆಕಾಶವಾಣಿ ಜಾಗೂ ದೂರದರ್ಶನ ಕಲಾವಿದರಾದ ಸ್ಥಾಯಿ ನಾಕೋಡ ಮತ್ತು ಪಂ. ಬಾಲಚಂದ್ರ ನಾಕೋಡ ಅವರಿಂದ ವಚನ ಸಂಗೀತ ಜರುಗಿತು. ಡಾ. ಎಂ.ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆ ಪ್ರಕಟಿಸಿದ ಫ.ಗು. ಸಿದ್ದಾಪುರ ಅವರು ಬರೆದ ಹಣತೆ ಹಚ್ಚಿದವರು-2, ಡಾ. ಎಸ್. ಗಂಗಾಬಿಕೆ ಗೋವರ್ಧನ ಅವರು ಬರೆದ ತಾರಕಗುರೂಪದೇಶ ಕೃತಿಯನ್ನು ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಬಿಡುಗಡೆಗೊಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಡವರಿಗೆ ಸಾಮೂಹಿಕ ವಿವಾಹ ಅನುಕೂಲ: ಮುದುಕೇಶ್ವರ ಶಿವಾಚಾರ್ಯರು ಸ್ವಾಮಿಗಳು
ಲಿಂ. ಸಿದ್ಧಗಂಗಾ ಡಾ. ಶಿವಕುಮಾರ ಶ್ರೀ ಸದಾ ಸ್ಮರಣೀಯರು: ಜಗದೀಶ ಸಂಕನೂರ