ವೈಭವದ ‘ಮಂಗಳೂರು ದಸರಾ’ 15ರಿಂದ ಆರಂಭ

KannadaprabhaNewsNetwork |  
Published : Oct 06, 2023, 01:20 AM ISTUpdated : Oct 06, 2023, 10:20 AM IST
gupt navratri June 2023

ಸಾರಾಂಶ

ವಿಶ್ವವಿಖ್ಯಾತ ಮಂಗಳೂರು ದಸರಾಕ್ಕೆ ಕ್ಷಣಗಣನೆ ಆರಂಭಾಗಿದ್ದು, ಈ ಬಾರಿ ಅ.15ರಿಂದ 25ರವರೆಗೆ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು ಬ್ರಹ್ಮಶ್ರೀ ನಾರಾಯಣ ಗುರುಗಳು ಸ್ವತಃ ಪ್ರತಿಷ್ಠಾಪಿಸಿದ ರಾಜ್ಯದ ಏಕೈಕ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ನಡೆಯುವ ವಿಶ್ವವಿಖ್ಯಾತ ‘ಮಂಗಳೂರು ದಸರಾ’ ಈ ಬಾರಿ ಅ.15ರಿಂದ 25ರವರೆಗೆ ವೈಭವದಿಂದ ನಡೆಯಲಿದೆ. 

ಸುದ್ದಿಗೋಷ್ಠಿಯಲ್ಲಿ ಗುರುವಾರ ಈ ಕುರಿತು ಮಾಹಿತಿ ನೀಡಿದ ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಎಚ್‌.ಎಸ್‌. ಸಾಯಿರಾಮ್‌, ನವರಾತ್ರಿ ಮಹೋತ್ಸವ ಕಳೆದ 33 ವರ್ಷಗಳಿಂದ ವರ್ಷಂಪ್ರತಿ ಕ್ಷೇತ್ರದಲ್ಲಿ ನಡೆಯುತ್ತಿದ್ದು, ಈ ಬಾರಿ 34ನೇ ವರ್ಷಕ್ಕೆ ಕಾಲಿರಿಸಿದೆ. ಈ ಬಾರಿಯೂ ‘ಮಂಗಳೂರು ದಸರಾ’ ಕ್ಷೇತ್ರದ ನವೀಕರಣ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ನಡೆಯಲಿದೆ ಎಂದರು. 24ರಂದು ವೈಭವದ ಮೆರವಣಿಗೆ: ಅ.15ರಂದು ಶ್ರೀ ಗಣೇಶ, ನವದುರ್ಗೆಯರು ಮತ್ತು ಶ್ರೀ ಶಾರದಾ ಮಾತೆಯ ಮೂರ್ತಿ ಪ್ರತಿಷ್ಠಾಪನೆ ಮೂಲಕ ಆರಂಭವಾಗಲಿದೆ. ಅ.25ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 

ಅ.24ರಂದು ಸಂಜೆ 4 ಗಂಟೆಗೆ ಸರಿಯಾಗಿ ‘ಮಂಗಳೂರು ದಸರಾ’ ಮೆರವಣಿಗೆಯು ನಗರದ ರಾಜರಸ್ತೆಯಲ್ಲಿ ಸಾಗಿ ಕ್ಷೇತ್ರದ ಪುಷ್ಕರಿಣಿಯಲ್ಲಿ ಮೂರ್ತಿ ವಿಸರ್ಜನೆ ನಡೆಯುವುದರೊಂದಿಗೆ ಸಂಪನ್ನಗೊಳ್ಳಲಿದೆ ಎಂದು ಮಾಹಿತಿ ನೀಡಿದರು. 70ಕ್ಕೂ ಅಧಿಕ ಟ್ಯಾಬ್ಲೊ: ಕ್ಷೇತ್ರಾಡಳಿತ ಮಂಡಳಿಯ ಕೋಶಾಧಿಕಾರಿ ಪದ್ಮರಾಜ್ ಆರ್. ಮಾತನಾಡಿ, ಅ.15ರಿಂದ ಅ.23ರವರೆಗೆ ಕ್ಷೇತ್ರದಲ್ಲಿ ದಿನಂಪ್ರತಿ ಸಂಜೆ 6ರಿಂದ ರಾತ್ರಿ 9 ಗಂಟೆಯವರೆಗೆ ಪ್ರಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಂಗಳೂರು ದಸರಾ ಮೆರವಣಿಗೆಯಲ್ಲಿ ಜಿಲ್ಲೆ ಹಾಗೂ ರಾಜ್ಯದ ಹಲವೆಡೆಗಳಿಂದ 70ಕ್ಕೂ ಅಧಿಕ ವಿಶೇಷ ಟ್ಯಾಬ್ಲೊಗಳು ಭಾಗವಹಿಸಲಿದ್ದು, ಈ ವೈಭವದ ಮೆರವಣಿಗೆಗೆ ವಿಶೇಷ ಮೆರುಗು ನೀಡಲಿದೆ. ಸಾಮರಸ್ಯದ ನೆಲೆಗಟ್ಟಿನಲ್ಲಿ ಮಂಗಳೂರು ದಸರಾ ನಡೆಯಲಿದೆ ಎಂದು ತಿಳಿಸಿದರು. 

ಕಟ್ಟಡ ಅಲಂಕಾರಕ್ಕೆ ಮನವಿ: ಕ್ಷೇತ್ರಾಡಳಿತ ಮಂಡಳಿ ಸದಸ್ಯ ಹರಿಕೃಷ್ಣ ಬಂಟ್ವಾಳ್‌ ಮಾತನಾಡಿ, ದಸರಾ ಮೆರವಣಿಗೆ ಸಾಗುವ 7 ಕಿ.ಮೀ. ರಸ್ತೆಯುದ್ದಕ್ಕೂ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ವಿದ್ಯುತ್ ಅಲಂಕಾರ ಕಾರ್ಯ ಈಗಾಗಲೇ ಆರಂಭವಾಗಿದೆ. ಇದಲ್ಲದೆ ರಸ್ತೆಯ ಎರಡೂ ಬದಿಗಳಲ್ಲಿರುವ ಕಟ್ಟಡಗಳ ಮಾಲೀಕರು ತಮ್ಮ ಕಟ್ಟಡಗಳನ್ನು ವಿದ್ದುದ್ದೀಪದಿಂದ ಅಲಂಕರಿಸಿ ‘ಮಂಗಳೂರು ದಸರಾ’ ಹಬ್ಬದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷೆ ಉರ್ಮಿಳಾ ರಮೇಶ್, ಪ್ರಧಾನ ಕಾರ್ಯದರ್ಶಿ ಮಾಧವ ಸುವರ್ಣ, ಹರಿಕೃಷ್ಣ ಬಂಟ್ವಾಳ್, ಸಮಿತಿ ಸದಸ್ಯರಾದ ಕೆ. ಮಹೇಶ್ಚಂದ್ರ, ರವಿಶಂಕರ್ ಮಿಜಾರ್, ಎಂ. ಶೇಖರ್ ಪೂಜಾರಿ, ಸಂತೋಷ್ ಕುಮಾರ್, ಜಗದೀಪ್ ಡಿ. ಸುವರ್ಣ, ದೇವೇಂದ್ರ ಪೂಜಾರಿ, ಡಾ.ಅನುಸೂಯ ಬಿ.ಟಿ. ಸಾಲಿಯಾನ್, ಕಿಶೋರ್ ಯೆಯ್ಯಾಡಿ, ಚಂದನ್, ಡಾ. ಬಿ.ಜಿ. ಸುವರ್ಣ, ವಾಸುದೇವ ಕೋಟ್ಯಾನ್ ಮತ್ತಿತರರು ಇದ್ದರು. ಬಾಕ್ಸ್‌ ಸಿಎಂ, ಡಿಸಿಎಂ, ಪ್ರಮುಖರು ಭಾಗಿ ಮಂಗಳೂರು ದಸರಾಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ರಾಜ್ಯ, ಕೇಂದ್ರದ ವಿವಿಧ ಸಚಿವರು, ಗಣ್ಯರು ಭಾಗವಹಿಸಲಿದ್ದಾರೆ. ಸಿಎಂ, ಡಿಸಿಎಂ ಜತೆ ಈಗಾಗಲೇ ಮಾತುಕತೆ ನಡೆಸಿದ್ದು, ಆಗಮಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಪದ್ಮರಾಜ್‌ ಆರ್‌. ತಿಳಿಸಿದ್ದಾರೆ. ಫೋಟೊ ಲಗತ್ತಿಸಲಾಗಿದೆ 5ಕುದ್ರೋಳಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವರ್ತಮಾನದೆಡೆಗೆ ಸಂಶೋಧನಾಸಕ್ತಿ ಕೇಂದ್ರಿತವಾಗಲಿ: ಡಾ. ಗಿರೀಶ ಕುಮಾರ
ಆಹಾರ ಸುರಕ್ಷತೆ: 9 ಪ್ರಕರಣಗಳಲ್ಲಿ ₹1.30 ಲಕ್ಷ ದಂಡ