ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್‌ ಭಾನುವಾರ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಅರಮನೆ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ನಿರ್ಗಮಿತ ಅಧ್ಯಕ್ಷ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಬಿ.ಕೆ. ಹರಿಪ್ರಸಾದ್‌ ಅವರಿಗೆ ಪಕ್ಷದ ಸಾರಥ್ಯ ಹಸ್ತಾಂತರಿಸಲಿದ್ದಾರೆ.

ಬೆಂಗಳೂರು : ಕಾಂಗ್ರೆಸ್‌ ಹಿರಿಯ ನಾಯಕ, ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್‌ ಭಾನುವಾರ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಅರಮನೆ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ನಿರ್ಗಮಿತ ಅಧ್ಯಕ್ಷ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಬಿ.ಕೆ. ಹರಿಪ್ರಸಾದ್‌ ಅವರಿಗೆ ಪಕ್ಷದ ಸಾರಥ್ಯ ಹಸ್ತಾಂತರಿಸಲಿದ್ದಾರೆ.

ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಬಿ.ಕೆ. ಹರಿಪ್ರಸಾದ್‌ ಪದಗ್ರಹಣಕ್ಕೆ ಭರ್ಜರಿ ಸಿದ್ಧತೆ ನಡೆಸಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ನಾಯಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ಜತೆಗೆ 1 ಲಕ್ಷಕ್ಕೂ ಹೆಚ್ಚಿನ ಕಾರ್ಯಕರ್ತರು ಪದಗ್ರಹಣ ಕಾರ್ಯಕ್ರಮಕ್ಕೆ ಸಾಕ್ಷಿಯಾಗುವ ನಿರೀಕ್ಷೆಯಿದೆ.

ಈ ಕುರಿತು ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕೆಪಿಸಿಸಿ ಗೌರವಾಧ್ಯಕ್ಷ ಜಿ.ಸಿ. ಚಂದ್ರಶೇಖರ್‌, ಕೆಪಿಸಿಸಿ ಅಧ್ಯಕ್ಷ ಜವಾಬ್ದಾರಿ ಹಸ್ತಾಂತರ ಕಾರ್ಯಕ್ರಮ ಭಾನುವಾರ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದೆ. ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್‌, ರಣದೀಪ್‌ಸಿಂಗ್‌ ಸುರ್ಜೇವಾಲಾ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು, ಮುಂಚೂಣಿ ನಾಯಕರು ಉಪಸ್ಥಿತರಿರಲಿದ್ದಾರೆ. ವೇದಿಕೆಯಲ್ಲಿ 350 ಗಣ್ಯರು ಕೂರಲು ಆಸನದ ವ್ಯವಸ್ಥೆ ಮಾಡಲಾಗಿದೆ. ಜತೆಗೆ 200 ಜನ ಆಸೀನರಾಗಲು ಪರ್ಯಾಯ ವೇದಿಕೆ, 4 ಸಾವಿರ ಬ್ಲಾಕ್‌ ಕಾಂಗ್ರೆಸ್‌ ಪ್ರತಿನಿಧಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದರು.

ರಾಜ್ಯದ ವಿವಿಧ ಭಾಗಗಳಿಂದ 1 ಲಕ್ಷಕ್ಕೂ ಹೆಚ್ಚಿನ ಜನರು ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ. 1200ಕ್ಕೂ ಹೆಚ್ಚಿನ ಬಸ್‌ಗಳಲ್ಲಿ ಜನರು ಆಗಮಿಸಲಿದ್ದು, ಅರಮನೆ ಮೈದಾನದಲ್ಲಿ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗಾಗಿ 70 ಕಡೆ ಆಹಾರ ವಿತರಣಾ ಕೌಂಟರ್‌ಗಳನ್ನು ತೆರೆಯಲಾಗಿದ್ದು, ಬೆಳಗ್ಗೆ 8ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಊಟ ನೀಡಲಾಗುತ್ತದೆ. ಕಾರ್ಯಕ್ರಮದಲ್ಲಿ ಜನರಿಗೆ ಆರೋಗ್ಯ ಸಮಸ್ಯೆ ಉಂಟಾದರೆ ಬಳಕೆಗಾಗಿ 6 ಆಂಬ್ಯುಲೆನ್ಸ್‌, ವೈದ್ಯರನ್ನು ನಿಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಡಿ.ಕೆ. ಶಿವಕುಮಾರ್‌ ಅವರು ಲೋಕಭವನದಲ್ಲಿ ಸರಳವಾಗಿ ಪ್ರಮಾಣ ವಚನ ಸ್ವೀಕರಿಸಿದಂತೆಯೇ ಬಿ.ಕೆ. ಹರಿಪ್ರಸಾದ್‌ ಅವರು ಕೂಡ ಭಾರತ್‌ ಜೋಡೋ ಸಭಾಂಗಣದಲ್ಲಿ ಪ್ರಮಾಣ ವಚನ ಸ್ವೀಕರಿಸುವುದಾಗಿ ತಿಳಿಸಿದ್ದರು. ಆದರೆ, ಇದು ಸರ್ಕಾರದ ಕಾರ್ಯಕ್ರಮವಲ್ಲ, ಪಕ್ಷದ ಕಾರ್ಯಕ್ರಮವಾಗಿದೆ. ಹೀಗಾಗಿ ಹಬ್ಬದಂತೆ ಮಾಡಬೇಕು ಎಂದು ಅವರನ್ನು ಒತ್ತಾಯಿಸಿ ಅರಮನೆ ಮೈದಾನದಲ್ಲಿ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ವಿವರಿಸಿದರು.

ಇದು ಜವಾಬ್ದಾರಿ ಹಸ್ತಾಂತರವಾಗಿದ್ದು, ಪಕ್ಷದ ಎಲ್ಲ ಪದಾಧಿಕಾರಿಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. 2028ರ ವಿಧಾನಸಭೆ ಚುನಾವಣೆ ಮತ್ತು 2029ರ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಹೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸಲು ಸಂಕಲ್ಪ ಮಾಡುವ ಕಾರ್ಯಕ್ರಮ ಇದಾಗಿದೆ. ಪಕ್ಷದ ಸಂಘಟನಾ ಸಮಾರಂಭ, ಭವಿಷ್ಯದ ಕಾರ್ಯಕ್ರಮಗಳ ಕುರಿತಂತೆ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವ ವೇದಿಕೆ ಇದಾಗಿದೆ. ಮುಂದಿನ 2 ವರ್ಷಗಳು ಚುನಾವಣಾ ವರ್ಷಗಳಾಗಿದ್ದು, ಅದಕ್ಕೆ ಇಲ್ಲಿಂದಲೇ ತಯಾರಿ ಮಾಡಿಕೊಳ್ಳಲಾಗುವುದು ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ವಿಧಾನಪರಿಷತ್‌ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್‌, ಸದಸ್ಯ ರಮೇಶ್‌ ಬಾಬು ಇತರರಿದ್ದರು.

ನೀಟ್‌ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ಕ್ರಮ

ಭಾನುವಾರ ನೀಟ್ ಪರೀಕ್ಷೆ ಇರುವ ಕಾರಣಕ್ಕೆ ಕಾರ್ಯಕರ್ತರು ಪೊಲೀಸರ ಜತೆ ಸಹಕರಿಸಬೇಕು ಎಂದು ಈಗಾಗಲೇ ಸೂಚಿಸಲಾಗಿದೆ. ನೀಟ್‌ ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಎಲ್ಲರಿಗೂ ತಿಳಿಸಲಾಗಿದೆ. ಪೊಲೀಸರು ಸಿದ್ಧಪಡಿಸಿರುವ ಮಾರ್ಗದಲ್ಲಿಯೇ ಸಂಚರಿಸಬೇಕು, ಸಂಚಾರ ದಟ್ಟಣೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ ಎಂದು ಜಿ.ಸಿ. ಚಂದ್ರಶೇಖರ್‌ ಹೇಳಿದರು.

ಬಿಎಲ್‌ಎ ಸಮಾವೇಶ:

ಮತಪಟ್ಟಿ ಪರಿಷ್ಕರಣೆ ಮತ್ತು ಮುಂದಿನ ಚುನಾವಣೆಗಳಿಗೆ ಸಿದ್ಧತೆಗಾಗಿ ಶೀಘ್ರವೇ ಬಿಎಲ್‌ಎ ಸಮಾವೇಶ ಮಾಡಬೇಕು ಎಂದು ಆಲೋಚಿಸಲಾಗಿದೆ. ಅದಕ್ಕೆ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರನ್ನು ಆಹ್ವಾನಿಸಲಾಗುವುದು. ಈಗಾಗಲೇ 59 ಸಾವಿರ ಬಿಎಲ್‌ಎಗಳನ್ನು ನೇಮಕ ಮಾಡಿ ತರಬೇತಿ ನೀಡಲಾಗಿದೆ. ಮತಪಟ್ಟಿ ಪರಿಷ್ಕರಣೆ ಮೂಲಕ 95 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಹೊಡೆತ ಬೀಳುವಂತೆ ಮಾಡಲು ಬಿಜೆಪಿ ಹುನ್ನಾರ ಮಾಡಿದ್ದು, ಅದನ್ನು ವಿಫಲವಾಗಿಸಲು ಎಲ್ಲ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಜಿ.ಸಿ. ಚಂದ್ರಶೇಖರ್‌ ತಿಳಿಸಿದರು.

2028, 2029ರಲ್ಲಿ ಹೆಚ್ಚು

ಸೀಟು ಗೆಲ್ಲಲು ಸಂಕಲ್ಪ

2028ರ ವಿಧಾನಸಭೆ ಚುನಾವಣೆ ಮತ್ತು 2029ರ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಹೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸಲು ಹರಿಪ್ರಸಾದ್‌ ಪದಗ್ರಹಣ ಕಾರ್ಯಕ್ರಮದಲ್ಲಿ ಸಂಕಲ್ಪ ಮಾಡಲಾಗುತ್ತದೆ. ಪಕ್ಷದ ಸಂಘಟನಾ ಸಮಾರಂಭ, ಭವಿಷ್ಯದ ಕಾರ್ಯಕ್ರಮಗಳ ಕುರಿತಂತೆ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವ ವೇದಿಕೆ ಇದಾಗಿದೆ. ಮುಂದಿನ 2 ವರ್ಷಗಳು ಚುನಾವಣಾ ವರ್ಷಗಳಾಗಿದ್ದು, ಅದಕ್ಕೆ ಇಲ್ಲಿಂದಲೇ ತಯಾರಿ ಮಾಡಿಕೊಳ್ಳಲಾಗುವುದು ಎಂದು ಕೆಪಿಸಿಸಿ ಗೌರವಾಧ್ಯಕ್ಷ ಜಿ.ಸಿ. ಚಂದ್ರಶೇಖರ್‌ ತಿಳಿಸಿದ್ದಾರೆ.

ಡಿ.ಕೆ. ಶಿವಕುಮಾರ್‌ ಅವರು ಲೋಕಭವನದಲ್ಲಿ ಸರಳವಾಗಿ ಪ್ರಮಾಣ ವಚನ ಸ್ವೀಕರಿಸಿದಂತೆಯೇ ಬಿ.ಕೆ. ಹರಿಪ್ರಸಾದ್‌ ಅವರು ಕೂಡ ಭಾರತ್‌ ಜೋಡೋ ಸಭಾಂಗಣದಲ್ಲಿ ಪ್ರಮಾಣ ವಚನ ಸ್ವೀಕರಿಸುವುದಾಗಿ ತಿಳಿಸಿದ್ದರು. ಆದರೆ, ಇದು ಸರ್ಕಾರದ ಕಾರ್ಯಕ್ರಮವಲ್ಲ, ಪಕ್ಷದ ಕಾರ್ಯಕ್ರಮವಾಗಿದೆ. ಹೀಗಾಗಿ ಹಬ್ಬದಂತೆ ಮಾಡಬೇಕು ಎಂದು ಅವರನ್ನು ಒತ್ತಾಯಿಸಿ ಅರಮನೆ ಮೈದಾನದಲ್ಲಿ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ.

ಜಿ.ಸಿ. ಚಂದ್ರಶೇಖರ್‌, ಕೆಪಿಸಿಸಿ ಗೌರವಾಧ್ಯಕ್ಷ