ರಾಮನಗರ : ಬಿಡದಿ ಟೌನ್‌ಶಿಪ್ ಯೋಜನೆ ಕೂಡಾ ನೈಸ್ ಯೋಜನೆ ರೀತಿಯಲ್ಲೇ ರೈತರನ್ನು ವಂಚಿಸುವ ಯೋಜನೆಯಾಗಿದೆ. ಭಾರೀ ಪರಿಹಾರ ನೀಡುವುದಾಗಿ ಹೇಳಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರೈತರಿಗೆ ಮೋಸ ಮಾಡುತ್ತಿದ್ದಾರೆ. ಇದಕ್ಕೆ ರೈತರು ಮರುಳಾಗಬಾರದು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರ ಸ್ವಾಮಿ ರೈತರಿಗೆ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ದ ಗ್ರೇಟ್ ಡಿ.ಕೆ.ಶಿವಕುಮಾರ್ ಅವರು ದೆಹಲಿಯಲ್ಲಿರುವ ಕಾಂಗ್ರೆಸ್ ಅಧಿನಾಯಕರಿಗೆ ಮಂತ್ಲಿ ಕೊಡುವುದಾಗಿ ಅಗ್ರಿಮೆಂಟ್ ಮಾಡಿಕೊಂಡು ಬಂದಿದ್ದಾರೆ. ಅಲ್ಲಿಗೆ ಹಣ ಕೊಡಲು ಬಿಡದಿ ಟೌನ್‌ಶಿಪ್ ಯೋಜನೆ ಮಾಡುತ್ತಿದ್ದಾರೆ. ಈ ಪಾದಯಾತ್ರೆಯೇ ಕಾಂಗ್ರೆಸ್ ಸರ್ಕಾರಕ್ಕೆ ಮರಣ ಶಾಸನವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಬಿಡದಿ ಟೌನ್ ಶಿಪ್ ) ಯೋಜನೆ ವಿರೋಧಿಸಿ ಬಿಜೆಪಿ ಬೆಂಬಲದೊಂದಿಗೆ ಜೆಡಿಎಸ್ ಹಮ್ಮಿಕೊಂಡಿರುವ 3 ದಿನಗಳ ಪಾದಯಾತ್ರೆಗೆ ಭಾನುವಾರ ಬಿಡದಿ ಸಮೀಪದ ಬೈರಮಂಗಲ ವೃತ್ತದಲ್ಲಿ ಪಾದಯಾತ್ರೆಗೆ ಚಾಲನೆ ನೀಡಿದ ಕುಮಾರಸ್ವಾಮಿ ರಾಜ್ಯದ ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಡಿಕೆ ಅಗ್ರಿಮೆಂಟ್:
ಮುಖ್ಯಮಂತ್ರಿ ಸ್ಥಾನ ನೀಡಿದ್ದಕ್ಕಾಗಿ ದಿಲ್ಲಿ ನಾಯಕರಿಗೆ ಡಿ.ಕೆ.ಶಿವಕುಮಾರ್ ಪ್ರತಿ ತಿಂಗಳು ಹಣ ಕೊಡುವ ಅಗ್ರಿಮೆಂಟ್ ಮಾಡಿಕೊಂಡು ಬಂದಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿದೆ. ಬೈರಮಂಗಲದಿಂದ ಕೈಗೊಂಡಿರುವ ಬಿಡದಿ ಟೌನ್‌ಶಿಪ್ ವಿರೋಧಿ ಪಾದಯಾತ್ರೆ ರೈತರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ದಿಕ್ಸೂಚಿ ಜತೆಗೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮರಣಶಾಸನವೂ ಆಗಲಿದೆ. ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯಲು ಈ ಪಾದಯಾತ್ರೆ ಮೂಲಕ ರೈತರು ಅಡಿಪಾಯ ಹಾಕಿದ್ದಾರೆ ಎಂದು ಹೇಳಿದರು.
ಮರುಳಾಗಬೇಡಿ:
ಮುಖ್ಯಮಂತ್ರಿ ಟೌನ್‌ಶಿಪ್ ಯೋಜನೆ ವಿಷಯದಲ್ಲಿ ಅತಿ ಕಾಳಜಿ ವಹಿಸುತ್ತಿದ್ದಾರೆ. ಯಾರಿಗೋ ಲಾಭ ಮಾಡಿಕೊಡಲು ಪ್ರಯತ್ನಿಸುತ್ತಿದ್ದಾರೆ. ಇದುವರೆಗೂ ಒಂದು ಎಕರೆಗೆ ₹2 ಕೋಟಿ ಭೂ ಪರಿಹಾರ ಕೊಡುವುದಾಗಿ ಹೇಳುತ್ತಿದ್ದವರು ಇವತ್ತು ಬೆಳಗ್ಗೆ ವೀಡಿಯೋ ಮಾಡಿ ಒಂದು ಎಕರೆಗೆ ₹3 ಕೋಟಿ ಕೊಡುವುದಾಗಿ ಹೇಳಿದ್ದಾರೆ. ಇದಕ್ಕೆ ನೀವು (ರೈತರು) ಮರುಳಾಗಬೇಡಿ. ಈ ಮುಖ್ಯಮಂತ್ರಿ ನಿಮಗೆ ಮೋಸ ಮಾಡುತ್ತಿದ್ದಾರೆ ಎಂದು ರೈತರನ್ನು ಎಚ್ಚರಿಸಿದರು.
ನೈಸ್ ಸಂತ್ರಸ್ತರಿಗೆ ಪರಿಹಾರ ಕೊಟ್ಟಿಲ್ಲ:
ನೈಸ್ (ಬಿಎಂಐಸಿ) ಯೋಜನೆಗೆ ಭೂಸ್ವಾಧೀನ ಮಾಡಿಕೊಂಡು 30 ವರ್ಷ ಕಳೆದರೂ ಭೂಮಿ ಕಳೆದುಕೊಂಡವರಿಗೆ ಪರಿಹಾರ ಮತ್ತು ನಿವೇಶನ ಕೊಟ್ಟಿಲ್ಲ. ಬಿಡದಿಯಲ್ಲಿ ಭೂಸ್ವಾಧೀನ ಮಾಡಿಕೊಳ್ಳುವ ಜಮೀನಿಗೆ ಒಂದು ಎಕರೆಗೆ 3 ಕೋಟಿ ಕೊಡುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಯಾವ ಆಧಾರದ ಮೇಲೆ ಹೇಳಿದ್ದಾರೆ. ಇದೇನು ಚೌಕಾಸಿ ವ್ಯಾಪಾರವೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಬಿಡದಿ ಟೌನ್‌ಶಿಪ್ ಹಾಗೂ ನೈಸ್ ಬ್ರಹ್ಮಾಂಡ ಭ್ರಷ್ಟಾಚಾರದ ಯೋಜನೆಗಳಾಗಿವೆ. ಎರಡೂ ಯೋಜನೆಗಳು ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆಯೇ. ಕಾಗೋಡು ತಿಮ್ಮಪ್ಪ ಅಧ್ಯಕ್ಷತೆಯ ಸತ್ಯ ಶೋಧನಾ ಸಮಿತಿಯಲ್ಲಿ 2ನೇ ಹೆಸರು ಡಿ.ಕೆ.ಶಿವಕುಮಾರ್ ಅವರದ್ದಾಗಿದೆ. 2 ಸಾವಿರ ಎಕರೆ ನೋಟಿಫಿಕೇಷನ್ ಆಗಿದೆಯೆಂದು ಸಮಿತಿಯಲ್ಲಿ ಹೇಳಿದ್ದರಲ್ಲ. ಆ ಭೂಮಿ ಎಲ್ಲಿ ಹೋಯಿತು ಎಂದು ಪ್ರಶ್ನೆ ಮಾಡಿದರು.
ನಾನು ಅಧಿಸೂಚನೆ ಹೊರಡಿಸಿರಲಿಲ್ಲ:
2006-07ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ, ಆ ನಂತರ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಬಿಡದಿ ಯೋಜನೆಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿರಲಿಲ್ಲ. ಕಾಂಗ್ರೆಸ್ ಸರ್ಕಾರವೇ ಪ್ರಾಥಮಿಕ ಹಾಗೂ ಅಂತಿಮ ಅಧಿಸೂಚನೆ ಹೊರಡಿಸಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿದೇಶಗಳಂತೆ ರಸ್ತೆ, ಬೃಹತ್ ಕಾರ್ಖಾನೆ, ಉದ್ಯೋಗ ನಿರ್ಮಿಸಿ ಯುವಕರಿಗೆ ಉದ್ಯೋಗ ಕೊಡುವ ಭರವಸೆ ನೀಡಿದ್ದಾರೆ. ಇದನ್ನು ನಂಬಬೇಕೇ. ಹೀಗೆ ಹೇಳುತ್ತಿರುವ ಇವರು ಕನಕಪುರದಲ್ಲಿ ದಲಿತರ ಭೂಮಿಯನ್ನು ಲೂಟಿ ಹೊಡೆದಿದ್ದಾರೆ ಎಂದು ಎಚ್‌ಡಿಕೆ ಆರೋಪ ಮಾಡಿದರು.
ಫಲವತ್ತಾದ ಭೂಮಿ:
ಬಿಡದಿ ಟೌನ್‌ಶಿಪ್ ಭಾಗದಲ್ಲಿ 6 ಲಕ್ಷ ಲೀಟರ್ ಹಾಲು ಉತ್ಪಾದಿಸಲಾಗುತ್ತಿದೆ. ಜೊತೆಗೆ ರೇಷ್ಮೆ, ಮಾವು, ಅಡಿಕೆ, ತೆಂಗು ಎಲ್ಲವೂ ಇದೆ. ಇಂತಹ ಭೂಮಿಯನ್ನು ಅವರೇ ನೀಡಿದ್ದ ಸತ್ಯಶೋಧನಾ ಸಮಿತಿ ವರದಿಗೆ ವಿರುದ್ಧವಾಗಿ ಟೌನ್‌ಶಿಪ್ ಮಾಡಲು ಹೊರಟಿದ್ದಾರೆ. ದಲ್ಲಾಳಿಗಳು ಮಾತ್ರ ಜಮೀನು ಕೊಡುತ್ತಿದ್ದಾರೆ. ಪಿತ್ರಾರ್ಜಿತ ಆಸ್ತಿ ಹಾಗೂ ಭೂಮಿಯನ್ನೇ ನಂಬಿ ಬದುಕುತ್ತಿರುವ ರೈತರು ಹೋರಾಟ ಮಾಡುತ್ತಿದ್ದಾರೆ. ಅವರ ಪರವಾಗಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಹೋರಾಟ ನಡೆಸುತ್ತಿವೆ ಎಂದರು.
ರಾಜಕೀಯಕ್ಕಾಗಿ ಪಾದಯಾತ್ರೆ ಅಲ್ಲ
ರಾಜಕೀಯಕ್ಕಾಗಿ ಈ ಪಾದಯಾತ್ರೆ ಮಾಡ್ತಿಲ್ಲ. ಯೋಜನೆ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿ ಕುಮಾರಸ್ವಾಮಿಯವರು ಮಾತು ಕೊಟ್ಟಿದ್ದು, ಅದರಂತೆ ರೈತರ ಪರ ನಿಂತಿದ್ದೇವೆ. ದೇವೇಗೌಡರ ಕುಟುಂಬ ಯಾವಾಗಲೂ ರೈತರ ಪರವಾಗಿದೆ.
- ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ.
ದಿಲ್ಲಿಗೆ ತಿಂಗಳ ವಂತಿಗೆ ನೀಡಲು ಟೌನ್‌ಶಿಪ್
ಸಿಎಂ ಡಿಕೆಶಿ ದೆಹಲಿಯಲ್ಲಿರುವ ಕಾಂಗ್ರೆಸ್ ಅಧಿನಾಯಕರಿಗೆ ತಿಂಗಳ ವಂತಿಗೆ ಕೊಡುವುದಾಗಿ ಅಗ್ರಿಮೆಂಟ್ ಮಾಡಿಕೊಂಡು ಬಂದಿದ್ದಾರೆ. ಅಲ್ಲಿಗೆ ಹಣ ಕೊಡಲು ಬಿಡದಿ ಟೌನ್‌ಶಿಪ್ ಯೋಜನೆ ಮಾಡುತ್ತಿದ್ದಾರೆ. ಈ ಪಾದಯಾತ್ರೆಯೇ ಕಾಂಗ್ರೆಸ್ ಸರ್ಕಾರಕ್ಕೆ ಮರಣ ಶಾಸನವಾಗಲಿದೆ.
ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ
ಡಿಕೆಗೆ ದುರ್ಯೋಧನಗೆ ಆದ ಗತಿಯೇ ಆಗುತ್ತೆ
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ, ಬಿಡದಿ ಟೌನ್ ಶಿಪ್ ಅನ್ನು ಜಾರಿ ಮಾಡುವುದಾಗಿ ದುರ್ಯೋಧನನ ರೀತಿ ಹಠ ಮಾಡಬೇಡಿ. ಇಲ್ಲದಿದ್ದರೆ ದುರ್ಯೋಧನನಿಗೆ ಆದ ಗತಿಯೇ ನಿಮಗೂ ಆಗುತ್ತದೆ. ಈ ಟೌನ್‌ಶಿಪ್ ವಿರುದ್ಧದ ಹೋರಾಟವೇ ಕಾಂಗ್ರೆಸ್ ಸರ್ಕಾರದ ಕೊನೆ ಮೊಳೆಯಾಗುತ್ತದೆ.
- ಆರ್.ಅಶೋಕ್, ವಿಪಕ್ಷ ನಾಯಕ.
