ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಏಕಪಕ್ಷೀಯವಾಗಿ ನಿರ್ಣಯ ಕೈಗೊಂಡಿದ್ದರು ಎಂಬ ಆರೋಪ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿರುವ ನಡುವೆಯೇ, ‘ಎಲ್ಲಾ ಆದೇಶಗಳನ್ನು ಮೂವರೂ ಚುನಾವಣಾ ಆಯುಕ್ತರ ಸರ್ವಾನುಮತದ ಅನುಮೋದನೆಯೊಂದಿಗೆ ಹೊರಡಿಸಲಾಗಿದೆ’ ಎಂದು ಭಾರತೀಯ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ನವದೆಹಲಿ : ಎಸ್‌ಐಆರ್‌ ಸೇರಿ ಹಲವು ವಿಚಾರಗಳಲ್ಲಿ ಇನ್ನಿಬ್ಬರು ಆಯುಕ್ತರ ಅಭಿಪ್ರಾಯಗಳನ್ನು ಕಡೆಗಣಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಏಕಪಕ್ಷೀಯವಾಗಿ ನಿರ್ಣಯ ಕೈಗೊಂಡಿದ್ದರು ಎಂಬ ಆರೋಪ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿರುವ ನಡುವೆಯೇ, ‘ಎಲ್ಲಾ ಆದೇಶಗಳನ್ನು ಮೂವರೂ ಚುನಾವಣಾ ಆಯುಕ್ತರ ಸರ್ವಾನುಮತದ ಅನುಮೋದನೆಯೊಂದಿಗೆ ಹೊರಡಿಸಲಾಗಿದೆ’ ಎಂದು ಭಾರತೀಯ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಮೂವರೂ ಆಯುಕ್ತರನ್ನು ಒಳಗೊಂಡ ಪೂರ್ಣ ಆಯೋಗ ಶನಿವಾರ ಮಹತ್ವದ ಸಭೆ ನಡೆಸಿ, ಆರೋಪಗಳ ಕುರಿತು ಸ್ಪಷ್ಟನೆ ನೀಡಿದೆ. ಇದೇ ವೇಳೆ, ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರಿಸಲು ಬಳಸುವ ‘ಫಾರ್ಮ್‌ 6’ರಲ್ಲಿ ಮಾಡಲಾದ ಬದಲಾವಣೆಗಳನ್ನು ಸುಪ್ರೀಂ ಕೋರ್ಟ್ ಈಗಾಗಲೇ ಎತ್ತಿಹಿಡಿದಿದೆ ಎಂದೂ ಆಯೋಗ ತಿಳಿಸಿದೆ.

‘ದೇಶಾದ್ಯಂತ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಸಿಇಸಿ ಜ್ಞಾನೇಶ್ ಕುಮಾರ್ ಮತ್ತು ಇಬ್ಬರು ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಹಾಗೂ ವಿವೇಕ್ ಜೋಶಿ ನಡುವೆ ಭಿನ್ನಾಭಿಪ್ರಾಯಗಳು ಮೂಡಿವೆ. ಇನ್ನಿಬ್ಬರ ಆಕ್ಷೇಪಗಳನ್ನು ಕಡೆಗಣಿಸಿ ಸಿಇಸಿ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ’ ಎಂದು ‘ದಿ ಇಂಡಿಯನ್‌ ಎಕ್ಸ್‌ಪ್ರೆಸ್‌’ ಪತ್ರಿಕೆ ವರದಿ ಮಾಡಿತ್ತು. ಇದು ಭಾರಿ ರಾಜಕೀಯ ಚರ್ಚೆಗೆ ಕಾರಣವಾಗಿ, ವಿಪಕ್ಷಗಳು ಜ್ಞಾನೇಶ್‌ ವಜಾ/ಬಂಧನ/ವಾಗ್ದಂಡನೆಗೆ ಪಟ್ಟು ಹಿಡಿದಿದ್ದವು. ಮಾತ್ರವಲ್ಲದೆ ಎನ್‌ಡಿಎ ಮಿತ್ರಪಕ್ಷಗಳು ಕೂಡ ಸಿಇಸಿಯಿಂದ ಸ್ಪಷ್ಟನೆ ಬಯಸಿದ್ದವು. ಇದಾದ ಬೆನ್ನಲ್ಲೇ ‘ಯಾವುದೇ ಭಿನ್ನಮತವಿಲ್ಲ’ ಎಂಬ ಸ್ಪಷ್ಟನೆ ಬಂದಿದೆ.

ಸರ್ವಸಮ್ಮತದ ನಿರ್ಧಾರ:

‘ಎಸ್‌ಐಆರ್‌ ಪ್ರಕ್ರಿಯೆ ಸರ್ವಸಮ್ಮತದ ನಿರ್ಧಾರವಲ್ಲ. ಇಬ್ಬರು ಆಯುಕ್ತರು ಸಾಕಷ್ಟು ವಿಚಾರಗಳಲ್ಲಿ ಅಸಮ್ಮತಿ ಹೊಂದಿದ್ದರು’ ಎಂದು 14 ಆಕ್ಷೇಪ ಟಿಪ್ಪಣಿ ಉಲ್ಲೇಖಿಸಿ ‘ಇಂಡಿಯನ್‌ ಎಕ್ಸ್‌ಪ್ರೆಸ್’ ವರದಿ ಮಾಡಿತ್ತು.

ಇದಕ್ಕೆ ಸ್ಪಷ್ಟನೆ ನೀಡಿರುವ ಆಯೋಗ, ‘ಆಯೋಗವು ಇತ್ತೀಚಿನ ತಿಂಗಳುಗಳಲ್ಲಿ ದೇಶಾದ್ಯಂತ ಎಸ್‌ಐಆರ್‌ ಪ್ರಕ್ರಿಯೆಯನ್ನು ಸುಸೂತ್ರವಾಗಿ ಜಾರಿಗೆ ತಂದಿದೆ. 2025ರ ಜೂ.24ರಂದು ಬಿಹಾರ, ಪ.ಬಂಗಾಳ ಸೇರಿದಂತೆ 32 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್‌ ಆರಂಭಿಸಲು ಹೊರಡಿಸಿದ ಆದೇಶವನ್ನು ಆಯೋಗವು ‘ಸರ್ವಾನುಮತದಿಂದ’ ಅಂಗೀಕರಿಸಿತ್ತು. ಇದನ್ನು 2026ರ ಮೇ 27ರಂದು ಸುಪ್ರೀಂ ಕೋರ್ಟ್ ತನ್ನ ಆದೇಶದ ಮೂಲಕ ಎತ್ತಿಹಿಡಿದಿದೆ’ ಎಂದಿದೆ.

‘2025ರ ಅ.27ರಂದು 12 ರಾಜ್ಯಗಳಿಗೆ ಹಾಗೂ 2026ರ ಮೇ 14ರಂದು 19 ರಾಜ್ಯಗಳಿಗೆ ಹೊರಡಿಸಲಾದ ಎಸ್‌ಐಆರ್‌ ವೇಳಾಪಟ್ಟಿಗಳಿಗೂ ಆಯುಕ್ತರ ಒಮ್ಮತದ ಅನುಮೋದನೆ ಇತ್ತು. ಹಂತ-3ರ ಅಂತಿಮ ಪಟ್ಟಿ ಪ್ರಕಟವಾದ ನಂತರವೇ ಒಟ್ಟು ಮತದಾರರ ಅಂತಿಮ ಸಂಖ್ಯೆ ಹೊರಬೀಳಲಿದೆ’ ಎಂದು ಆಯೋಗ ಸ್ಪಷ್ಟಪಡಿಸಿದೆ.

ಫಾರ್ಮ್‌ 6ಗೆ ಸುಪ್ರೀಂ ಅಂತಿಮ ಮುದ್ರೆ:

‘ಮತದಾರ ನೋಂದಣಿಯ ಫಾರ್ಮ್‌ 6 ಸ್ವರೂಪ ಬದಲಾವಣೆ ಅಕ್ರಮ’ ಎಂದು ಇಬ್ಬರು ಆಯುಕ್ತರು ಆಕ್ಷೇಪಿಸಿದ್ದಾಗಿ ವರದಿ ಹೇಳಿತ್ತು.

ಇದಕ್ಕೆ ಆಯೋಗ ಹೇಳಿಕೆನೀಡಿ, ‘ಎಸ್‌ಐಆರ್‌ ಅವಧಿಯಲ್ಲಿ ಫಾರ್ಮ್ 6ರ ಜೊತೆಗೆ ಲಗತ್ತಿಸಲಾದ ಸ್ವಯಂ ಘೋಷಣಾಪತ್ರವನ್ನು (ಡಿಕ್ಲರೇಷನ್‌) ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಎಸ್‌ಐಆರ್‌ ಇಲ್ಲದ ಸಾಮಾನ್ಯ ಅವಧಿಯಲ್ಲಿ ಮತದಾರರ ನೋಂದಣಿ ಕಾಯ್ದೆ 1960ರ ನಿಯಮಗಳ ಪ್ರಕಾರವೇ ಅರ್ಜಿಗಳನ್ನು ಸ್ವೀಕರಿಸಲಾಗುವುದು. ಇನ್ನು ಮುಂದೆ ಚುನಾವಣಾ ಆಯೋಗದ ಪ್ರತಿಯೊಂದು ಸಭೆಯ ಕಾರ್ಯಸೂಚಿಯನ್ನು ಮುಂಚಿತವಾಗಿಯೇ ಹಂಚಿಕೊಳ್ಳಲಾಗುವುದು ಹಾಗೂ ಸಭೆಯ ನಡಾವಳಿಗಳನ್ನು ಕಡ್ಡಾಯವಾಗಿ ದಾಖಲಿಸಿ ಹೊರಡಿಸಲಾಗುವುದು’ ಎಂದು ತಿಳಿಸಿದೆ.

‘ಆಯೋಗದ ಅಧಿಕಾರಿಗಳಿಗೆ ಆಯುಕ್ತರು ನೀಡುವ ಎಲ್ಲಾ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಯಾವುದೇ ಆಡಳಿತಾತ್ಮಕ ಸಂಸ್ಥೆಯಲ್ಲಿ ಚರ್ಚೆಯ ವೇಳೆ ವಿಭಿನ್ನ ಅಭಿಪ್ರಾಯಗಳು ಬರುವುದು ಸಹಜ ಪ್ರಕ್ರಿಯೆ. ಆಯೋಗ ಹೊರಡಿಸುವ ಎಲ್ಲಾ ನಿರ್ಧಾರಗಳಿಗೆ ಕಾನೂನುಬದ್ಧ ಸಂಸದೀಯ ಚೌಕಟ್ಟಿದೆ’ ಎಂದು ಅದು ಸ್ಪಷ್ಟಪಡಿಸಿದೆ.

ಸಂಪುಟ ಕಾರ್ಯದರ್ಶಿಗೆ ಪತ್ರ:

‘ಜ್ಞಾನೇಶ್‌ ಕುಮಾರ್‌ ನಿರ್ಣಯಗಳ ವಿರುದ್ಧ ಸಂಧು ಮತ್ತು ಜೋಶಿ ಸಂಪುಟ ಕಾರ್ಯದರ್ಶಿಗೆ ಪತ್ರ ಬರೆದಿದ್ದರು’ ಎಂದು ಆರೋಪಿಸಲಾಗಿತ್ತು.

ಈ ಕುರಿತು ಸ್ಪಷ್ಟನೆ ನೀಡಿರುವ ಆಯೋಗ, ‘ಈ ಪತ್ರಗಳು ಚುನಾವಣಾ ಆಯೋಗದ ಯಾವುದೇ ನೀತಿ ನಿರೂಪಣೆ ಅಥವಾ ಮಾಹಿತಿ ತಂತ್ರಜ್ಞಾನ ವಿಭಾಗದ ಕಾರ್ಯಾಚರಣೆಗೆ ಸಂಬಂಧಿಸಿದ್ದಲ್ಲ. ಬದಲಿಗೆ, ಡೆಪ್ಯುಟೇಶನ್‌ನಲ್ಲಿದ್ದ ಅಧಿಕಾರಿಯೊಬ್ಬರ ಕಾರ್ಯವೈಖರಿಗೆ ಸಂಬಂಧಿಸಿದ ವಿಷಯವಾಗಿತ್ತು. ಸದರಿ ಅಧಿಕಾರಿ ಹೊರಡಿಸಿದ್ದ ಕೆಲಸದ ಮರುಹಂಚಿಕೆ ಆದೇಶಗಳನ್ನು ಇಬ್ಬರು ಆಯುಕ್ತರು ಸೂಚಿಸಿದ ತಕ್ಷಣವೇ ತಡೆಹಿಡಿಯಲಾಗಿತ್ತು. ಅಲ್ಲದೆ, ಐಟಿ ವಿಭಾಗದ ಮೇಲಿನ ಉಪ ಚುನಾವಣಾ ಆಯುಕ್ತರ ಉಸ್ತುವಾರಿಯನ್ನು ಎಂದಿಗೂ ಹಿಂಪಡೆದಿರಲಿಲ್ಲ’ ಎಂದು ತಿಳಿಸಿದೆ.

ಆರೋಪ

1. ಎಸ್‌ಐಆರ್‌ ಬಗ್ಗೆ ಸಿಇಸಿ ಏಕಪಕ್ಷೀಯ ನಿರ್ಧಾರ

2. ಫಾರ್ಮ್‌ 6 ಸ್ವರೂಪ ಬದಲಾವಣೆಯಲ್ಲಿ ಅಕ್ರಮ

3. ಸಿಇಸಿ ಬಗ್ಗೆ ಸಂಪುಟ ಕಾರ್‍ಯದರ್ಶಿಗೆ ಪತ್ರ ದೂರು

ಸ್ಪಷ್ಟನೆ

1. ಎಸ್ಐಆರ್‌ ಬಗ್ಗೆ ಭಿನ್ನಮತವಿಲ್ಲ, ಸರ್ವಸಮ್ಮತ

2. ಫಾರ್ಮ್‌ 6 ಸ್ವರೂಪ ಬದಲಿಗೆ ಸುಪ್ರೀಂ ಅನುಮತಿ

3. ಸಂಪುಟ ಕಾರ್ಯದರ್ಶಿಗೆ ಬರೆದ ಪತ್ರ SIR ಕುರಿತಲ್ಲ