ರಾಜ್ಯದಲ್ಲಿ 2026ರ ಮೇ 31ರೊಳಗೆ ನಿರ್ಮಾಣ ಪೂರ್ಣಗೊಂಡಿರುವ 2400 ಚದರ ಅಡಿವರೆಗಿನ ವಾಸದ ಕಟ್ಟಡಗಳಿಗೆ ಸಿಸಿ, ಒಸಿ ವಿನಾಯಿತಿಯೊಂದಿಗೆ ಶಾಶ್ವತ ವಿದ್ಯುತ್‌ ಸಂಪರ್ಕ ಪಡೆಯಲು ಸರ್ಕಾರ ಯಾವತ್ತು ಆದೇಶ ಹೊರಡಿಸುವುದೋ ಅಂದಿನಿಂದ 15 ದಿನಗಳವರೆಗೆ ಅರ್ಜಿ ಸಲ್ಲಿಸುವುದಕ್ಕೆ ಕಾಲಾವಕಾಶ

ಬೆಂಗಳೂರು : ರಾಜ್ಯದಲ್ಲಿ 2026ರ ಮೇ 31ರೊಳಗೆ ನಿರ್ಮಾಣ ಪೂರ್ಣಗೊಂಡಿರುವ 2400 ಚದರ ಅಡಿವರೆಗಿನ (+20 ಹೆಚ್ಚುವರಿ ವ್ಯತ್ಯಾಸ ಮಿತಿಯಲ್ಲಿ) ವಾಸದ ಕಟ್ಟಡಗಳಿಗೆ ಸಿಸಿ, ಒಸಿ ವಿನಾಯಿತಿಯೊಂದಿಗೆ ಶಾಶ್ವತ ವಿದ್ಯುತ್‌ ಸಂಪರ್ಕ ಪಡೆಯಲು ಸರ್ಕಾರ ಯಾವತ್ತು ಆದೇಶ ಹೊರಡಿಸುವುದೋ ಅಂದಿನಿಂದ 15 ದಿನಗಳವರೆಗೆ ಅರ್ಜಿ ಸಲ್ಲಿಸುವುದಕ್ಕೆ ಕಾಲಾವಕಾಶ ನೀಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ಸಂಪುಟ ಸಭೆಯ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ

ಸಂಪುಟ ಸಭೆಯ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು, ಹೊಸ ಕಟ್ಟಡಗಳಿಗೆ ವಿದ್ಯುತ್‌ ಸಂಪರ್ಕ ನೀಡಲು ನಿಯಮಾನುಸಾರ ಪ್ರಾರಂಭಿಕ ಪ್ರಮಾಣ ಪತ್ರ(ಸಿಸಿ) ಮತ್ತು ಸ್ವಾಧೀನಾನುಭವ ಪ್ರಮಾಣ ಪತ್ರ (ಒಸಿ) ನೀಡುವುದು ಕಡ್ಡಾಯ.

ಆದರೆ, ಸಾರ್ವಜನಿಕ ಅನುಕೂಲಕ್ಕಾಗಿ 2026ರ ಮೇ 31ರೊಳಗೆ ಕಟ್ಟಡ ನಿರ್ಮಾಣ ಪೂರ್ಣಗೊಂಡು ತಾತ್ಕಾಲಿಕ ವಿದ್ಯುತ್‌ ಸಂಪರ್ಕ ಪಡೆದಿದ್ದು, ಶಾಶ್ವತ ವಿದ್ಯುತ್‌ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿರುವ ಕಟ್ಟಡಗಳಿಗೆ ಮಾತ್ರ ಒಮ್ಮೆ ಸಿಸಿ, ಒಸಿ ವಿನಾಯಿತಿ ನೀಡಿ ವಿದ್ಯುತ್‌ ಸಂಪರ್ಕ ಒದಗಿಸಲು ತೀರ್ಮಾನ ಮಾಡಲಾಗಿತ್ತು. ಆದರೆ, ಇದರಿಂದ ಹೆಚ್ಚು ಜನರಿಗೆ ಅನುಕೂಲ ಆಗುವುದಿಲ್ಲ ಎಂಬ ಅಭಿಪ್ರಾಯಗಳು ಬಂದಿವೆ. ಹಾಗಾಗಿ ಅರ್ಜಿ ಸಲ್ಲಿಸಲು ಸರ್ಕಾರ ಯಾವತ್ತು ಆದೇಶ ಮಾಡುತ್ತದೆಯೋ ಅಂದಿನಿಂದ 15 ದಿನಗಳ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಸಂಬಂಧಪಟ್ಟ ಇಲಾಖೆಗಳಿಂದ ಸಲಹೆ

ಈ ವಿಚಾರವಾಗಿ ಇಂಧನ ಇಲಾಖೆ, ನಗರಾಭಿವೃದ್ಧಿ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳಿಂದ ಸಲಹೆ ಪಡೆಯಲಾಗಿದೆ. ಅದರಂತೆ ಮೇ 31ರೊಳಗೆ ನಿರ್ಮಾಣ ಪೂರ್ಣಗೊಂಡಿದ್ದು ತಾತ್ಕಾಲಿಕ ವಿದ್ಯುತ್‌ ಸಂಪರ್ಕ ಹೊಂದಿರುವವರಿಗೆ ಸರ್ಕಾರದ ಆದೇಶವಾದ ದಿನದಿಂದ ಮುಂದಿನ 15 ದಿನಗಳ ವರೆಗೆ ಶಾಶ್ವತ ವಿದ್ಯುತ್‌ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಅರ್ಜಿ ಸಲ್ಲಿಸುವಾಗ ಕಟ್ಟಡದ ಜಿಪಿಎಸ್‌ ಆಧಾರಿತ ಫೋಟೋ ಮಾಹಿತಿ ಸಲ್ಲಿಸುವುದು ಕಡ್ಡಾಯ ಎಂದು ಹೇಳಿದರು.

ಇದರ ಹೊರತಾಗಿ ತರಾತುರಿಯಲ್ಲಿ ಮನೆ ಕಟ್ಟುತ್ತಿರುವವರಿಗೆ ಅವಲಾಶ ನೀಡುವುದಿಲ್ಲ. ಕೊಟ್ಟರೆ ಸಮಸ್ಯೆ ಆಗುತ್ತದೆ. ಈ ಸಂಬಂಧ ಪಂಚಾಯಿತಿ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಇಒಗಳಿಗೆ ನಿರ್ದೇಶನ ನೀಡುತ್ತೇವೆ. ರೈತರ ದನದ ಕೊಟ್ಟಿಗೆಗಳು, ರೇಷ್ಮೆ, ಕುರಿ, ಕೋಳಿ ಸಾಕಾಣಿಕೆ ಮನೆಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ, ಆರೋಗ್ಯ ಸಚಿವ ಯು.ಟಿ.ಖಾದರ್‌, ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್‌ ಖಂಡ್ರೆ ಇದ್ದರು.