ಕನ್ನಡಪ್ರಭ ವಾರ್ತೆ ಮಂಡ್ಯ

ಟಾಟಾ ಪವರ್ ಕಂಪನಿ ಲಿಮಿಟೆಡ್ ಎಸ್ಕಾಂಗಳ ವ್ಯಾಪ್ತಿಯಲ್ಲಿ ವಿದ್ಯುತ್ ವಿತರಣೆ ಚಟುವಟಿಕೆಯನ್ನು ಪ್ರಾರಂಭಿಸಲು ಪರವಾನಿಗೆ ಪಡೆಯಲು ರಾಜ್ಯ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿರುವುದನ್ನು ವಿರೋಧಿಸಿ ಚೆಸ್ಕಾಂ ಅಧಿಕಾರಿಗಳು, ನೌಕರರು ಮತ್ತು ಸಿಬ್ಬಂದಿ ನಗರದ ಚೆಸ್ಕಾಂ ಕಚೇರಿ ಬಳಿ ಶನಿವಾರ ಪ್ರತಿಭಟನೆ ನಡೆಸಿದರು.

ಕಚೇರಿ ಎದುರು ಸೇರಿದ ಅಧಿಕಾರಿಗಳು, ನೌಕರರು, ಸಿಬ್ಬಂದಿ ವಿದ್ಯುತ್‌ ಖಾಸಗೀಕರಣದ ವಿರುದ್ಧ ಘೋಷಣೆ ಕೂಗಿದರು. ವಿದ್ಯುತ್‌ ಕ್ಷೇತ್ರವನ್ನು ಖಾಸಗಿಯವರಿಗೆ ನೀಡುತ್ತಿರುವುದು ನಿಗಮದ ನೌಕರರು ಮತ್ತು ಗ್ರಾಹಕರಲ್ಲಿ ಆತಂಕ ಸೃಷ್ಟಿಸಿದೆ ಎಂದು ಕಳವಳ ವ್ಯಕ್ತಪಡಿಸಿದರು.

ನಿಗಮದ ಅಧಿಕಾರಿಗಳು, ನೌಕರರು ಜಾಗೃತಿಗೊಂಡು ವಿದ್ಯುತ್‌ ಖಾಸಗೀಕರಣದ ವಿರುದ್ಧ ಸಂಘವು ರೂಪಿಸುವ ಯಾವುದೇ ಹೋರಾಟಕ್ಕೆ ಸದಾ ಸಿದ್ದರಾಗಿರಬೇಕು. ನೌಕರರ ಅಸ್ತಿತ್ವ, ಉಳಿವು ಮತ್ತು ಭವಿಷ್ಯಕ್ಕಾಗಿ ಹೋರಾಡುವ ಸಂದರ್ಭ ಎದುರಾಗಿದೆ ಎಂದು ಎಚ್ಚರಿಸಿದರು.

ಟಾಟಾ ಪವರ್‌ ಕಂಪನಿ ಲಿಮಿಟೆಡ್‌ಗೆ ಪರವಾನಗಿ ನೀಡುವ ಉದ್ದೇಶವನ್ನು ವಿರೋಧಿಸಿ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರ ಉಪಸ್ಥಿತಿಯಲ್ಲಿ ಎಲ್ಲಾ ಸಂಘ ಸಂಸ್ಥೆಗಳಾದ ಎಂಜಿನಿಯರ್ ಅಸೋಸಿಯೇಷನ್ ಪದಾಧಿಕಾರಿಗಳು, ಕಲ್ಯಾಣ ಸಂಸ್ಥೆಯ ಪದಾಧಿಕಾರಿಗಳು, ಲೆಕ್ಕಾಧಿಕಾರಿಗಳು ಸಂಘದ ಪದಾಧಿಕಾರಿಗಳು, ಡಿಪ್ಲೋಮಾ ಎಂಜಿನಿಯರ್ ಅಸೋಸಿಯೇಷನ್ ಪದಾಧಿಕಾರಿಗಳು, ವಿದ್ಯುತ್ ಗುತ್ತಿಗೆದಾರರು, ನಿವೃತ್ತ ಅಧಿಕಾರಿಗಳು ಮತ್ತು ನೌಕರರು ಬೆಂಬಲಿಸಬೇಕು ಎಂದು ಕೊರಿದರು.


ಶಾಸಕರ ಮುಖಾಂತರ ಸರ್ಕಾರಕ್ಕೆ ಮನವಿ:

ಕಚೇರಿಯಿಂದ ಬೈಕ್ ಮೂಲಕ ಹೊರಟ ಪ್ರತಿಭಟನಾಕಾರರು, ಶಾಸಕ ರವಿಕುಮಾರ್‌ ಅವರ ನಿವಾಸದ ಕಚೇರಿ ಬಳಿ ಬಂದು ಶಾಸಕರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಪಿ.ರವಿಕುಮಾರ್‌, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ವೇಳೆ ಸರ್ಕಾರಗಳು ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ನಡೆಸಲಾಗುವುದಿಲ್ಲ. ಆದ್ದರಿಂದ ಖಾಸಗೀಕರಣ ಮಾಡುತ್ತೇವೆ ಎಂದು ಹೇಳಿದ್ದರ ಪರಿಣಾಮ ಈಗ ನೋವು ಅನುಭವಿಸುತ್ತಿದ್ದೇವೆ ಎಂದು ಎಚ್ಚರಿಸಿದರು.

ಬಿಜೆಪಿ ಸರ್ಕಾರಗಳು ಯಾವ ರಾಜ್ಯಗಳಲ್ಲಿವೆಯೋ ಅಲ್ಲಿ ಟಾಟಾ ಪವರ್ ಕಂಪನಿಯ ವಿದ್ಯುತ್ ವಿತರಣೆ ಪರವಾನಗಿ ನೀಡಲಾಗಿದೆ. ನಮ್ಮರಾಜ್ಯದಲ್ಲೂ ಕೇಳುತ್ತಿದ್ದಾರೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೊಡುವುದಿಲ್ಲ ಎಂಬ ಭರವಸೆ ನಮಗಿದೆ ಎಂದರು.

ಪ್ರತಿಭಟನೆಯಲ್ಲಿ ವಿದ್ಯುತ್ ನಿಗಮ ಕಚೇರಿಯ ಕಾರ್ಯಪಾಲಕ ಎಂಜನಿಯರ್ ಅನಿತಾಬಾಯಿ, ಅರುಣೇಶ್, ರಾಕೇಶ್, ಮಹೇಂದ್ರ, ಶ್ರೀನಿವಾಸ್, ರವಿಚಂದ್ರನ್, ಮಧು, ಮಹೇಶ್, ಹೇಮಂತ್ ಮತ್ತಿತರರಿದ್ದರು.