13ರಿಂದ ಪ್ರಸಿದ್ಧ ಹುಲಿಗೆಮ್ಮ ದೇವಿ ಜಾತ್ರೆ ಶುರು

KannadaprabhaNewsNetwork |  
Published : May 02, 2025, 11:46 PM IST
2ಕೆಪಿಎಲ್21 ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಕೊಪ್ಪಳ ಜಿಲ್ಲೆಯ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ 2025ರ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಪೂರ್ವಭಾವಿ ಸಭೆ | Kannada Prabha

ಸಾರಾಂಶ

ಜಾತ್ರೆಗೆ ವಿವಿಧೆಡೆಯಿಂದ ಆಗಮಿಸುವ ಭಕ್ತರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರಿಗೆ ಬಸ್‌ಗಳ ವ್ಯವಸ್ಥೆ ಕಲ್ಪಿಸಬೇಕು. ಬಸ್‌ ಮೇಲೆ ಜಿಲ್ಲೆಯ ಪ್ರವಾಸೋದ್ಯಮ ಸ್ಥಳಗಳ ಜಾಗೃತಿ ಪೋಸ್ಟರ್‌ ಅಂಟಿಸಬೇಕು. ಜಾತ್ರಾ ಸಮಯದಲ್ಲಿ ತಡೆರಹಿತ ರೈಲುಗಳನ್ನು ಮುನಿರಾಬಾದ್ ರೈಲು ನಿಲ್ದಾಣದಲ್ಲಿ ನಿಲುಗಡೆ ಮತ್ತು ಗೂಡ್ಸ್ ರೈಲುಗಳ ಸಂಚಾರಕ್ಕೆ ತಾತ್ಕಾಲಿಕ ತಡೆ ಕುರಿತಂತೆ ಹುಬ್ಬಳ್ಳಿ ನೈಋತ್ಯ ರೈಲ್ವೆಗೆ ಪತ್ರ ಬರೆದು ಕ್ರಮಕೈಗೊಳ್ಳಬೇಕು.

ಕೊಪ್ಪಳ:

ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹುಲಿಗಿಯ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವ ಮೇ 13ರಿಂದ ಪ್ರಾರಂಭವಾಗಲಿದ್ದು, ಭಕ್ತರಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿ ನಲಿನ್ ಅತುಲ್ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಹುಲಿಗೆಮ್ಮ ದೇವಿ ದೇವಸ್ಥಾನದ-2025ರ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಸಂಸದ ಹಾಗೂ ಶಾಸಕರ ಉಪಸ್ಥಿತಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಭಕ್ತರಿಗೆ ಕುಡಿಯುವ ನೀರು, ನೆರಳು ಹಾಗೂ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಬೇಕು. ಸಂಪರ್ಕ ರಸ್ತೆ ಹಾಗೂ ಬೈಪಾಸ್ ರಸ್ತೆ ಸರಿಪಡಿಸಬೇಕು. ತಾತ್ಕಾಲಿಕವಾಗಿ ಸಾಮೂಹಿಕ ಸ್ನಾನದ ಗೃಹ ಮತ್ತು ಶೌಚಾಲಯ ವ್ಯವಸ್ಥೆ ಸಹ ಕಲ್ಪಿಸಿಕೊಡಬೇಕು. ಜಾತ್ರಾ ಅವಧಿಯಲ್ಲಿ ನಿರಂತರ ವಿದ್ಯುತ್ ಸರಬರಾಜು, ದೇವಸ್ಥಾನದ ಗುಡಿ-ಗೋಪುರಗಳಿಗೆ ವಿದ್ಯುತ್ ಅಲಂಕಾರ ಮತ್ತು ಬೆಳಕಿನ ವ್ಯವಸ್ಥೆ ಮಾಡಬೇಕು. ಸಿಸಿ ಕ್ಯಾಮೆರಾ ವ್ಯವಸ್ಥೆ ಸೇರಿದಂತೆ ಅಗತ್ಯ ಪೊಲೀಸ್ ಬಂದೋಬಸ್ತ್‌, ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಬಿಡುವ ಕುರಿತು ಸಂಬಂಧಿಸಿದ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದರು.

ಜಾತ್ರೆಗೆ ವಿವಿಧೆಡೆಯಿಂದ ಆಗಮಿಸುವ ಭಕ್ತರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರಿಗೆ ಬಸ್‌ಗಳ ವ್ಯವಸ್ಥೆ ಕಲ್ಪಿಸಬೇಕು. ಬಸ್‌ ಮೇಲೆ ಜಿಲ್ಲೆಯ ಪ್ರವಾಸೋದ್ಯಮ ಸ್ಥಳಗಳ ಜಾಗೃತಿ ಪೋಸ್ಟರ್‌ ಅಂಟಿಸಬೇಕು. ಜಾತ್ರಾ ಸಮಯದಲ್ಲಿ ತಡೆರಹಿತ ರೈಲುಗಳನ್ನು ಮುನಿರಾಬಾದ್ ರೈಲು ನಿಲ್ದಾಣದಲ್ಲಿ ನಿಲುಗಡೆ ಮತ್ತು ಗೂಡ್ಸ್ ರೈಲುಗಳ ಸಂಚಾರಕ್ಕೆ ತಾತ್ಕಾಲಿಕ ತಡೆ ಕುರಿತಂತೆ ಹುಬ್ಬಳ್ಳಿ ನೈಋತ್ಯ ರೈಲ್ವೆಗೆ ಪತ್ರ ಬರೆದು ಕ್ರಮಕೈಗೊಳ್ಳಬೇಕು. ಸ್ವಚ್ಛತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ದೇವಸ್ಥಾನಕ್ಕೆ ಗ್ರಾಮ ಪಂಚಾಯಿತಿ ಸಹಕಾರ ನೀಡಬೇಕು. ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಅಂಗಡಿ ಮುಂಗಟ್ಟು ಇಡದಂತೆ ಕ್ರಮವಹಿಸಬೇಕು. ಜಾತ್ರಾ ಸಮಯದಲ್ಲಿ ಪ್ರಾಣಿಬಲಿ, ಮದ್ಯಪಾನ ನಿಷೇಧಿಸಬೇಕು.

ದೇವಸ್ಥಾನದ ಮಹಾರಥಕ್ಕೆ ಲೋಕೋಪಯೋಗಿ ಇಲಾಖೆಯಿಂದ ಅರ್ಹತಾ ಪ್ರಮಾಣಪತ್ರ ಪಡೆಯಬೇಕಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು. ಜಾತ್ರಾ ಸಮಯದಲ್ಲಿ ಅಗ್ನಿಶಾಮಕ ವಾಹನ ಕಾಯ್ದಿರಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಜಾತ್ರೆಗೆ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಆಗಮಿಸಲಿದ್ದು ಅವರಿಗೆ ಎಲ್ಲ ಸೌಕರ್ಯ ಒದಗಿಸಬೇಕು. ಜನಸಂದಣಿ ವೇಳೆ ಟ್ಯಾಂಕರ್‌ ಮೂಲಕ ನೀರು ಪೂರೈಸುವುದು ಸಮಸ್ಯೆಯಾಗಲಿದೆ. ಇದರ ಬದಲು ದೇವಸ್ಥಾನ ಸುತ್ತಲಿನ ಬೋರ್‌ವೆಲ್‌ ನೀರು ಪೂರೈಕೆಗೆ ಕ್ರಮಕೈಗೊಳ್ಳಬೇಕು. ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯಿಂದ ವಿಶೇಷ ಬಸ್‌ಗಳ ಹೆಚ್ಚಿಸಬೇಕು ಎಂದು ಹೇಳಿದರು.

ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಜಾತ್ರೆಗೆ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಮೂಲಭೂತ ಸೌಲಭ್ಯ ಕಲ್ಪಿಸುವ ಜತೆಗೆ ಸುವ್ಯವಸ್ಥಿತವಾಗಿ ಯಾವುದೇ ಗದ್ದಲಕ್ಕೆ ಅವಕಾಶ ನೀಡದಂತೆ ನೋಡಿಕೊಳ್ಳಬೇಕು. ಸ್ವಚ್ಛತೆಗೆ ಕೊಪ್ಪಳ ನಗರಸಭೆ ಹಾಗೂ ತಾಲುಕು ಪಂಚಾಯಿತಿಯ ಸ್ವಚ್ಛತಾ ಯಂತ್ರ ಪೂರೈಸಬೇಕು ಎಂದರು.

ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಎಚ್. ಪ್ರಕಾಶ್‌ರಾವ್ ಮಾತನಾಡಿ, ಮಹಾರಥೋತ್ಸವ ಮೇ 21ರಂದು ಸಂಜೆ 5.30ಕ್ಕೆ ನಡೆಯಲಿದೆ. ಮೇ 13ರಿಂದ 24ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿದ್ದು, ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಕೊಪ್ಪಳ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಜಿಪಂ ಯೋಜನಾ ನಿರ್ದೇಶಕ ಪ್ರಕಾಶ ವಿ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ. ಲಿಂಗರಾಜು, ಪಶು ಇಲಾಖೆ ಉಪನಿರ್ದೇಶಕ ಡಾ. ಪಿ.ಎಂ. ಮಲ್ಲಯ್ಯ, ತಹಸೀಲ್ದಾರ ವಿಠ್ಠಲ್ ಚೌಗಲಾ, ತಾಪಂ ಇಒ ದುಂಡಪ್ಪ ದುರಾದಿ ಸೇರಿದಂತೆ ವಿವಿಧ ಅಧಿಕಾರಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧರಣಿ ಸ್ಥಳಕ್ಕೆ ಎಡಿಸಿ ಭೇಟಿ: ಪಟ್ಟು ಬಿಡದ ರೈತರು
ಸಂಕ್ರಮಣದ ಸಂಭ್ರಮದ ತೆಪ್ಪೋತ್ಸವ