ಕಲೆ ಮತ್ತು ಕಲಾವಿದರು ಬೆಳೆಯಬೇಕಾದರೆ ಅಭಿಮಾನಿ ಬಂಧುಗಳ ಪ್ರೋತ್ಸಾಹ, ಸಂಘಟಕರ ಆಶ್ರಯ ಅತಿ ಮುಖ್ಯ ಎಂದು ಕುಂದಾಪುರದ ಪ್ರಸಿದ್ಧ ಭಾಗ್ವತರಾದ ರಾಘವೇಂದ್ರ ಆಚಾರ್ಯಘ ಹೇಳಿದರು.
ಮುಂಡಗೋಡ: ಕಲೆ ಮತ್ತು ಕಲಾವಿದರು ಬೆಳೆಯಬೇಕಾದರೆ ಅಭಿಮಾನಿ ಬಂಧುಗಳ ಪ್ರೋತ್ಸಾಹ, ಸಂಘಟಕರ ಆಶ್ರಯ ಅತಿ ಮುಖ್ಯ ಎಂದು ಕುಂದಾಪುರದ ಪ್ರಸಿದ್ಧ ಭಾಗ್ವತರಾದ ರಾಘವೇಂದ್ರ ಆಚಾರ‍್ಯ ಹೇಳಿದರು.
ಇಲ್ಲಿಯ ಶ್ರೀ ಬಸವಣ್ಣ, ವೀರಭದ್ರೇಶ್ವರ ದೇವಾಲಯ ಆವರಣದ ರಂಗಮಂದಿರದಲ್ಲಿ ಕುಂದ ಯಕ್ಷ ಸಾಂಸ್ಕೃತಿಕ ವೇದಿಕೆ ಮುಂಡಗೋಡ ಸಂಯುಕ್ತ ಆಶ್ರಯದಲ್ಲಿ ಯಕ್ಷ ವೈಭವ ಅನಂತಪದ್ಮನಾಭ ಯಕ್ಷಗಾನ ಮಂಡಳಿ, ಪೆರ್ಡೂರ ಅವರಿಂದ ಕವಿರತ್ನ ಕಾಳಿದಾಸ, ಮಾರುತಿ ಪ್ರತಾಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಲೆ ತನ್ನ ಅಸ್ಥಿತ್ವವನ್ನು ಬೆಳೆಸಿಕೊಂಡು ಹೋಗುತ್ತದೆ. ಆದರೆ, ಕಲಾವಿದರು ಉಳಿಯಬೇಕಾದರೆ ಉತ್ತೇಜಕರಾದ ಕಲಾಭಿಮಾನಿಗಳು ಬೇಕು. ಒಂದು ಕಾಲದಲ್ಲಿ ಕಲೆಗಳಿಗೆ ರಾಜಾಶ್ರಯವಿತ್ತು. ಆದರೆ, ಇಂದಿನ ದಿನಗಳಲ್ಲಿ ಕಲೆಗಳಿಗೆ ದಾನಿಗಳೆ ನಿಜವಾದ ರಾಜರು. ಅಭಿಮಾನಿ ಬಂಧುಗಳು ಕಲಾವಿದರನ್ನು ಉಳಿಸಿ ಬೆಳೆಸಿದರೆ ಮಾತ್ರ ಕಲೆ ಉಳಿಯಲು ಸಾಧ್ಯ. ಕಲೆ ಉಳಿಸಿದರೆ ಅದರೊಂದಿಗೆ ನಮ್ಮ ಸಂಸ್ಕೃತಿ ಕೂಡ ಉಳಿಯುತ್ತದೆ. ಪಾಶ್ಚಿಮಾತ್ಯ ಸಂಸ್ಕೃತಿ ಭರಾಟೆಯ ನಡುವೆ ನಮ್ಮ ಸಾಂಸ್ಕೃತಿಕ ಕಲೆಗಳು ನಶಿಸಿ ಹೋಗುತ್ತಿರುವ ಇಂದಿನ ದಿನಗಳಲ್ಲಿ ಕೂಡ ಸಾಕಷ್ಟು ಶ್ರಮಪಟ್ಟು ಇಂತಹ ಕಾರ‍್ಯಕ್ರಮಗಳನ್ನು ಆಯೋಜಿಸಿ ಜನಜಾಗೃತಿ ಮೂಡಿಸುತ್ತಿರುವ ಸಂಘಟಕರ ಕಾರ್ಯ ಶ್ಲಾಘನಿಯ. ಯಾವುದೇ ಒಂದು ಒಳ್ಳೆಯ ಕಾರ್ಯ ಮಾಡಬೇಕಾದರೆ ಮನಸ್ಸು ಸದೃಢವಾಗಿರಬೇಕು. ಇಂತಹ ಸಾಂಸ್ಕೃತಿಕ ಕಾರ‍್ಯಕ್ರಮಗಳಿಂದ ಮನಸ್ಸನ್ನು ಸಂತೋಷವಾಗಿಡಲು ಸಾದ್ಯವಾಗುತ್ತದೆ ಎಂದರು.
ಅರುಣಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಾರಾಯಣ ಉಪ್ಪುಂದ, ರಮೇಶ ಶೆಟ್ಟಿ, ರತ್ನಾಕರ ಶೆಟ್ಟಿ, ರಾಘವೇಂದ್ರ ಮೊಗವೀರ, ಕರುಣಾಕರ ಶೆಟ್ಟಿ, ನರೇಶ ಶೆಟ್ಟಿ, ಹರೀಶ ಪೂಜಾರ, ಸುರೇಶ ಪೂಜಾರ, ಕೃಷ್ಣ ಪೂಜಾರ, ನಾಗರತ್ನ ಶೆಟ್ಟಿ, ಸುಧಾಕರ ಶೆಟ್ಟಿ, ಪ್ರವೀಣ ಶೆಟ್ಟಿ, ಪ್ರಿಯಾಂಕ ಶೆಟ್ಟಿ, ಪ್ರಜ್ಞಾ ಶೆಟ್ಟಿ, ನಾಗರತ್ನ ಮೊಗವೀರ ಮುಂತಾದವರು ಉಪಸ್ಥಿತರಿದ್ದರು. ನರೇಶ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರತ್ನಾ ಶೆಟ್ಟಿ ನಿರೂಪಿಸಿದರು. ಶಿಕ್ಷಕಿ ಮಮತಾ ವರದಿ ವಾಚಿಸಿದರು. ಇದೇ ಸಂದರ್ಭದಲ್ಲಿ ಕುಂದಾಪುರದ ಪ್ರಸಿದ್ದ ಭಾಗ್ವತರಾದ ರಾಘವೇಂದ್ರ ಆಚಾರ‍್ಯ ಅವರನ್ನು ಸನ್ಮಾನಿಸಲಾಯಿತು.
ಮೈನವಿರೇಳಿಸಿದ ಯಕ್ಷಗಾನ ಕಲೆ:
ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ ಪೆರ‍್ಡೂರು ಮೇಳ ಇವರಿಂದ ಯಕ್ಷಗಾನ ಕಲೆ ಪ್ರದರ್ಶನಗೊಂಡಿತು. ಯಕ್ಷಗಾನ ಮುಂಡಗೋಡ ಜನರಿಗೆ ಖುಷಿ ನೀಡಿದ್ದಂತೂ ಸುಳ್ಳಲ್ಲ. ಮಧ್ಯರಾತ್ರಿ ೨ರ ವರೆಗೆ ಪ್ರದರ್ಶನಗೊಂಡಿದ್ದು, ಕಾರ‍್ಯಕ್ರಮ ವೀಕ್ಷಿಸಲು ಜನಸ್ತೋಮವೇ ಹರಿದುಬಂದಿತ್ತು. ರಾತ್ರಿ ಊಟೋಪಹಾರ ವ್ಯವಸ್ಥೆ ಕೂಡ ಕಲ್ಪಿಸಲಾಗಿತ್ತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.