ಮಡಿಕೇರಿ : ಮಡಿಕೇರಿ ನಗರ ಪೋಲೀಸ್ ಠಾಣೆಯಲ್ಲಿ ಕಳೆದ ಒಂದೂವರೆ ವರ್ಷಗಳಿಂದ ಠಾಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಇದೀಗ ಮಂಡ್ಯ ಜಿಲ್ಲೆಯ ಮಳವಳ್ಳಿ ಹುಲಗೂರು ಠಾಣೆಗೆ ವರ್ಗಾವಣೆಯಾಗಿರುವ ಲೋಕೇಶ್ ಅವರನ್ನು ನಗರದ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಹಾಗೂ ಸಾರ್ವಜನಿಕರು ಆತ್ಮೀಯವಾಗಿ ಬೀಳ್ಕೊಟ್ಟರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಮಾತನಾಡಿ ಲೋಕೇಶ್ ಅವರು 2023 ರಲ್ಲಿ ಮಡಿಕೇರಿ ನಗರ ಠಾಣೆಯಲ್ಲಿ ಅಧಿಕಾರ ವಹಿಸಿಕೊಂಡು ಜನಸ್ನೇಹಿ ಅಧಿಕಾರಿಯಾಗಿ ದಕ್ಷತೆಯಿಂದ ಸೇವೆ ಸಲ್ಲಿಸಿದ್ದಾರೆ ಎಂದರು.
ವಿಶ್ವವಿಖ್ಯಾತ ಮಡಿಕೇರಿ ದಸರಾ ಸೇರಿದಂತೆ ಅನೇಕ ಜನದಟ್ಟಣೆಯ ಕಾರ್ಯಕ್ರಮಗಳ ಸಂದರ್ಭ ಲೋಕೇಶ್ ಹಾಗೂ ಅವರ ಸಿಬ್ಬಂದಿಗಳ ತಂಡ ಉತ್ತಮ ರೀತಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಆದ್ದರಿಂದ ಅವರನ್ನು ಆತ್ಮೀಯವಾಗಿ ಬೀಳ್ಕೊಡುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದರು.ವೃತ್ತ ನಿರೀಕ್ಷಕ ಪಿ.ಕೆ.ರಾಜು ಮಾತನಾಡಿ ಸಾಧಾರಣವಾಗಿ ಅಧಿಕಾರ ವಹಿಸಿಕೊಂಡ ಸಂದರ್ಭ ಅಧಿಕಾರಿಗಳು ಅಭಿನಂದನೆಗಳಿಗೆ ಭಾಜನರಾಗುತ್ತಾರೆ. ಆದರೆ ಅಪರೂಪಕ್ಕೆ ಎಂಬಂತೆ ಕರ್ತವ್ಯದ ವೇಳೆ ಜನರ ಮನಸ್ಸು ಗೆದ್ದು ವರ್ಗಾವಣೆಯಾಗುವ ಹಂತದಲ್ಲಿ ಕೆಲವು ಅಧಿಕಾರಿಗಳು ಗೌರವ ಪಡೆಯುತ್ತಾರೆ. ಅಂತಹ ಗೌರವಕ್ಕೆ ಲೋಕೇಶ್ ಅವರು ಪಾತ್ರರಾಗಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅಖಿಲ ಭಾರತ ತುಳು ಒಕ್ಕೂಟದ ನಿರ್ದೇಶಕ ಪ್ರಭು ರೈ, ಓಂಕಾರೇಶ್ವರ ದೇವಾಲಯ ಸಮಿತಿ ಮಾಜಿ ಅಧ್ಯಕ್ಷ ಪುಲಿಯಂಡ ಕೆ.ಜಗದೀಶ್, ಮಡಿಕೇರಿ ನಗರ ದಸರಾ ಸಮಿತಿಯ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವಂಡ ನಾಚಪ್ಪ, ಮಡಿಕೇರಿ ತಾಲೂಕು ಬ್ರಾಹ್ಮಣರ ಸಂಘದ ಮಾಜಿ ಕಾರ್ಯದರ್ಶಿ ವಸಂತ್ ಭಟ್ ಮತ್ತಿತರರು ಹಾಜರಿದ್ದು ಲೋಕೇಶ್ ಅವರಿಗೆ ಶುಭ ಕೋರಿದರು.