ಸಾಲಬಾಧೆಯಿಂದ ರೈತ ಆತ್ಮಹತ್ಯೆ

KannadaprabhaNewsNetwork | Updated : Feb 11 2024, 05:12 PM IST

ಸಾರಾಂಶ

ಸಾಲಬಾಧೆಯಿಂದ ಬೇಸತ್ತ ರೈತರೊಬ್ಬರು ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಹೊಸಶಿಡೆನೂರ ಗ್ರಾಮದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬ್ಯಾಡಗಿ

ಸಾಲಬಾಧೆಯಿಂದ ಬೇಸತ್ತ ರೈತರೊಬ್ಬರು ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಹೊಸಶಿಡೆನೂರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಗ್ರಾಮದ ಮಾಲತೇಶ ರುದ್ರಪ್ಪ ಮಲ್ಲಳ್ಳಿ(47) ಆತ್ಮಹತ್ಯೆ ಮಾಡಿಕೊಂಡ ರೈತ. ತನಗಿದ್ದ ಎರಡೂವರೆ ಎಕರೆ ಜಮೀನಿನಲ್ಲಿ ಕೃಷಿ ಚಟುವಟಿಕೆಗಳಿಗೆ ಕೆನರಾ ಬ್ಯಾಂಕ್‌ನಲ್ಲಿ ₹4.50 ಲಕ್ಷ ಸಾಲ ಪಡೆದಿದ್ದ, ಆದರೆ ಕಳೆದೆರಡು ವರ್ಷದಿಂದ ಸಮರ್ಪಕವಾಗಿ ಬೆಳೆಯೂ ಬಾರದೇ ಕೈಕೊಟ್ಟಿದೆ. 

ಇದರಿಂದ ಹಾಕಿದ ಬಂಡವಾಳ ಸಹ ಮರಳದಂತಾಗಿ ಮಾಡಿದ್ದ ಸಾಲ ತೀರಿಸಲಾಗದೇ ಮನನೊಂದು ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

₹3 ಲಕ್ಷ ದೋಚಿದ ಕಳ್ಳರು: ಹಾಡುಹಗಲೇ ಮನೆಯೊಂದಕ್ಕೆ ಕನ್ನಹಾಕಿರುವ ಕಳ್ಳರು ಸುಮಾರು ₹3 ಲಕ್ಷ ರೂಪಾಯಿ ನಗದು ದೋಚಿದ ಘಟನೆ ಪಟ್ಟಣದ ಸಂಗಮೇಶ್ವರ ನಗರದಲ್ಲಿ ನಡೆದಿದೆ.

ಹುಸೇನ್‌ಬಾಷಾ ಗೌಸ್‌ಮೋಹಿದ್ದೀನ ಕಾಲಶೇಖರ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಹುಸೇನ್‌ಬಾಷಾ ಎಂದಿನಂತೆ ಬೆಳಗ್ಗೆ ತಮ್ಮ ಕೆಲಸಕ್ಕೆಂದು ಮನೆಗೆ ಬೀಗ ಹಾಕಿಕೊಂಡು ಹೋಗಿದ್ದಾರೆ. 

ಇದನ್ನೇ ಕಾಯುತ್ತಿದ್ದ ಕಳ್ಳರ ತಂಡ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮನೆಯ ಬಾಗಿಲು ಮುರಿದು ಒಳನುಗ್ಗಿ ಮನೆ ಕಬ್ಬಿಣದ ರಾಡ್‌ಗಳಿಂದ ಅಲ್ಮೇರಾವನ್ನು ಒಡೆದು ಒಳಗಿಟ್ಟಿದ್ದ ₹3 ಲಕ್ಷವನ್ನು ಕದ್ದಿದ್ದಾರೆ.

ವಾಣಿಜ್ಯ ನಗರಿ ಬ್ಯಾಡಗಿಯಲ್ಲಿ ಹಾಡುಹಗಲೇ ಈ ಕೃತ್ಯ ನಡೆದಿದ್ದು, ಎಲ್ಲೆಡೆ ಆತಂಕ ಮನೆ ಮಾಡಿದೆ. ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಣ ನೀಡಿಲ್ಲವೆಂದು ಪತ್ನಿಯನ್ನೇ ಕೊಲೆಗೈದ ಮದ್ಯ ವ್ಯಸನಿ: ಮದ್ಯ ಸೇವಿಸಲು ಹಣ ನೀಡಿಲ್ಲವೆಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಪತ್ನಿಯನ್ನೇ ಕತ್ತು ಹಿಚುಕಿ ಕೊಲೆಗೈದ ಘಟನೆ ತಾಲೂಕಿನ ಮೋಟೆಬೆನ್ನೂರು ಗ್ರಾಮದಲ್ಲಿ ಫೆ.8 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಶಂಭುಲಿಂಗಯ್ಯ ಬಸವರಾಜಯ್ಯ ಹಾವೇರಿಮಠ ಆರೋಪಿ. ಕಳೆದ 12 ವರ್ಷದ ಹಿಂದೆ ಜಯಶ್ರೀ ಎಂಬವರನ್ನು ಮದುವೆಯಾಗಿದ್ದ ಶಂಭುಲಿಂಗಯ್ಯ ಮದ್ಯವ್ಯಸನಿಯಾಗಿದ್ದು, ಪ್ರತಿದಿನ ಹಣ ನೀಡುವಂತೆ ಪೀಡಿಸುತ್ತಿದ್ದು, ಕೊಡಲು ನಿರಾಕರಿಸಿದ ಪತ್ನಿಗೆ ಒಂದಿಲ್ಲೊಂದು ಕಾರಣ ಮುಂದಿಟ್ಟು ಕಿರುಕುಳ ನೀಡುತ್ತಿದ್ದ ಎಂದು ತಿಳಿದು ಬಂದಿದೆ. 

ಗ್ರಾಮದ ಹಿರಿಯರು ಸೇರಿ ಬುದ್ಧಿವಾದ ಹೇಳಿದರೂ ಕೇಳದ ಶಂಭುಲಿಂಗಯ್ಯ ಪತ್ನಿಯನ್ನು ಪೀಡಿಸುವುದು, ಹೊಡೆಯುವುದು ಮಾಡುತ್ತಿದ್ದ. 

ಅದೇ ರೀತಿ ಕಳೆದ ಫೆ.8ರಂದು ಜಗಳ ಮಾಡಿ ಹೆಂಡತಿ ಜಯಶ್ರೀಯನ್ನ ಕುತ್ತಿಗೆ ಹಿಚುಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಕುರಿತು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Share this article