ಕನ್ನಡಪ್ರಭ ವಾರ್ತೆ ಕಲಬುರಗಿ
ಶಾಲಾ ಮಕ್ಕಳೊಂದಿಗೆ ಪ್ರವಾಸ ಕುರಿತು ಕುಶಲೋಪರಿ ವಿಚಾರಿಸಿದ ಸಚಿವರು, ಪ್ರವಾಸಕ್ಕೆ ಶುಭ ಕೋರಿದರು. ಇದೇ ಸಂದರ್ಭದಲ್ಲಿ ಮಕ್ಕಳೊಂದಿಗೆ ಗ್ರೂಪ್ ಪೋಟೋ ತೆಗೆಸಿಕೊಂಡರು. ಪ್ರವಾಸಕ್ಕೆ ಹೊರಟ ಶಾಲಾ ಮಕ್ಕಳಲ್ಲಿ ಸಂಭ್ರಮ ಮನೆ ಮಾಡಿದ್ದು, ಹಸಿರು ಟಿಶರ್ಟ್ ನಲ್ಲಿ ಕಂಗೊಳಿಸಿದರು.
824 ಮಕ್ಕಳ ಪ್ರಯಾಣ: ಕರ್ನಾಟಕ ದರ್ಶನ ಅಂಗವಾಗಿ ಪ್ರಸಕ್ತ 2023-24ನೇ ಸಾಲಿಗೆ ಜಿಲ್ಲೆಯ 8ನೇ ತರಗತಿಯ 824 ಶಾಲಾ ಮಕ್ಕಳು ಪ್ರವಾಸ ಕೈಗೊಳ್ಳಲಿದ್ದಾರೆ. ಜಿಲ್ಲೆಯಿಂದ ಶನಿವಾರ ಕಲಬುರಗಿ ದಕ್ಷಿಣ ಮತ್ತು ಉತ್ತರ ವಲಯದ 208 ಮಕ್ಕಳು ಪ್ರಯಾಣ ಬೆಳಸಿದರು. ಫೆ.11ಕ್ಕೆ ಆಳಂದ ಮತ್ತು ಅಫಜಲ್ಪುರ ತಾಲೂಕಿನಿಂದ 204 ಮಕ್ಕಳು, ಫೆ.12ಕ್ಕೆ ಜೇವರ್ಗಿ ಮತ್ತು ಚಿತ್ತಾಪುರದಿಂದ 206 ಮಕ್ಕಳು ಹಾಗೂ ಫೆ.13ಕ್ಕೆ ಚಿಂಚೋಳಿ ಮತ್ತು ಸೇಡಂ ತಾಲೂಕಿನಿಂದ 206 ಮಕ್ಕಳು ಪ್ರವಾಸ ಮಾಡಲಿದ್ದಾರೆ. ಪ್ರತಿ ತಾಲೂಕಿಗೆ 5 ಬಸ್ ಗಳ ವ್ಯವಸ್ಥೆ ಮಾಡಿದ್ದು, ಪ್ರಯಾಣದ ಸಂದರ್ಭದಲ್ಲಿ ವಸತಿ, ಊಟೋಪಚಾರಕ್ಕೂ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.ಎಲ್ಲೆಲ್ಲಿ ಪ್ರವಾಸ?: ಮೊದಲನೇ ದಿನ ವಿಜಯಪುರ ಗೋಳಗುಮ್ಮಟ ನೋಡಿಕೊಂಡು ತಂಡ ಅಲ್ಲಿಯೆ ವಾಸ್ತವ್ಯ ಮಾಡಲಿದೆ. ಎರಡನೇ ದಿನ ಬದಾಮಿ, ಪಟ್ಟದಕಲ್ಲು ವೀಕ್ಷಿಸಿ ಐಹೊಳೆಯಲ್ಲಿ ವಾಸ್ತವ್ಯ ಮಾಡಲಿದೆ. ಮೂರನೇ ದಿನ ವಿಶ್ವ ಪ್ರಸಿದ್ಧ ಹಂಪಿ, ತುಂಗಭದ್ರ ಆಣೆಕಟ್ಟು ಕಣ್ತುಂಬಿಕೊಂಡು ಹೊಸಪೇಟೆಯಲ್ಲಿ ತಂಗಲಿದೆ. ನಾಲ್ಕನೇ ದಿನ ಕೊಪ್ಪಳ ಜಿಲ್ಲೆಯ ಐತಿಹಾಸಿಕ ಅಂಜನಾದ್ರಿ ಬೆಟ್ಟ ವೀಕ್ಷಿಸಿ ಮರಳಿ ಕಲಬುರಗಿಯತ್ತ ಪ್ರಯಾಣ ಬೆಳಸಲಿದೆ.