ಬೆಳೆಹಾನಿ ಪರಿಹಾರಕ್ಕೆ ಆಗ್ರಹಿಸಿ ರೈತ ಸಂಪರ್ಕ ಕೇಂದ್ರಕ್ಕೆ ಬೀಗ

KannadaprabhaNewsNetwork | Published : Oct 25, 2024 1:05 AM

ಸಾರಾಂಶ

ತಾಲೂಕಿನ ಧುಂಡಶಿ ಹೋಬಳಿ ಮಟ್ಟದ ಎಲ್ಲಾ ಹಳ್ಳಿಗಳ ರೈತರಿಗೆ ಬೆಳೆ ಪರಿಹಾರ ಹಾಗೂ ಬೆಳೆ ವಿಮೆ ನೀಡುವಂತೆ ಆಗ್ರಹಿಸಿ ಗುರುವಾರ ರೈತರು ರೈತ ಸಂಪರ್ಕ ಕೇಂದ್ರ ಹಾಗೂ ಕಂದಾಯ ಇಲಾಖೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.

ಶಿಗ್ಗಾಂವಿ: ತಾಲೂಕಿನ ಧುಂಡಶಿ ಹೋಬಳಿ ಮಟ್ಟದ ಎಲ್ಲಾ ಹಳ್ಳಿಗಳ ರೈತರಿಗೆ ಬೆಳೆ ಪರಿಹಾರ ಹಾಗೂ ಬೆಳೆ ವಿಮೆ ನೀಡುವಂತೆ ಆಗ್ರಹಿಸಿ ಗುರುವಾರ ರೈತರು ರೈತ ಸಂಪರ್ಕ ಕೇಂದ್ರ ಹಾಗೂ ಕಂದಾಯ ಇಲಾಖೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.ಈ ವೇಳೆ ಮಾತನಾಡಿದ ರೈತ ಮುಖಂಡ ಈಶ್ವರ್‌ಗೌಡ ಪಾಟೀಲ್, ಸತತವಾಗಿ ಸುರಿಯುತ್ತಿರುವ ಮಳೆಗೆ ಧುಂಡಶಿ ಹೋಬಳಿ ಮಟ್ಟದ ಎಲ್ಲಾ ಹಳ್ಳಿಗಳು ಜಲಾವೃತ್ತವಾಗಿದ್ದು, ರೈತರಿಗೆ ಬೆಳೆ ಹಾನಿ ಹಾಗೂ ಬೆಳೆ ವಿಮೆಯನ್ನು ಎಂಟತ್ತು ದಿನದಲ್ಲಿ ಅಧಿಕಾರಿಗಳು ಹಾಕಿಸುವ ಕಾರ್ಯ ಮಾಡಲಿ ಇಲ್ಲವಾದರೆ ನವೆಂಬರ್ ೪ರಂದು ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆಗೆ ಬೀಗ ಹಾಕಿ ತಡಸ ಹಾನಗಲ್ ರಾಜ್ಯ ಹೆದ್ದಾರಿ ಬಂದ್ ಮಾಡಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.ನಂತರ ಮಾತನಾಡಿದ ವಿರೂಪಾಕ್ಷಗೌಡ ಪಾಟೀಲ್, ಅಪಾರ ಪ್ರಮಾಣದ ಮಳೆಗೆ ಬೆಳೆಗಳು ಹಾಳಾಗಿದ್ದು, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಪ್ರತಿಯೊಂದು ಗ್ರಾಮಗಳಿಗೆ ಹಾಗೂ ರೈತರ ಜಮೀನಿಗೆ ಹೋಗಿ ಜಂಟಿ ಸರ್ವೆ ಮಾಡಿ ನೈಜ ಪರಿಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತರುವ ಮೂಲಕ ಎಲ್ಲಾ ರೈತರಿಗೆ ಪರಿಹಾರ ನೀಡುವ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.ರೈತ ಸಂಘದ ತಾಲೂಕು ಅಧ್ಯಕ್ಷ ಈರಣ್ಣ ಸಮಗೊಂಡ ಮಾತನಾಡಿ, ರೈತರಿಗೆ ದೊಡ್ಡ ಪ್ರಮಾಣದಲ್ಲಿ ಅನ್ಯಾಯವಾಗಿದ್ದು, ಕೆಲ ದಿನಗಳ ಹಿಂದೆ ತಹಸೀಲ್ದಾರ್‌ ಅವರಿಗೆ ಸಂಪೂರ್ಣ ಹೋಬಳಿಯನ್ನು ಬೆಳೆ ಹಾನಿ ಘೋಷಿಸುವಂತೆ ಮನವಿ ಮಾಡಿದರು ಕ್ರಮ ಕೈಗೊಂಡಿಲ್ಲ, ಬೆಳೆ ಹಾನಿ ಸಮೀಕ್ಷೆ ಮಾಡಿ ಅನುದಾನ ನೀಡುತ್ತೇವೆಂದು ಅಧಿಕಾರಿಗಳು ಹೇಳಿದ್ದು ಎಂಟತ್ತು ದಿನ ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.ಬಳಿಕ ಉಪ ತಹಸೀಲ್ದಾರ್‌ ಕೆ. ಎಚ್. ತಳವಾರ ಹಾಗೂ ಕೃಷಿ ಇಲಾಖೆ ಆತ್ಮ ವಿಭಾಗದ ರಾಜು ಜಂಗ್ಲೆಪ್ನವರ ಮನವಿ ಸ್ವೀಕರಿಸಿ ರೈತರ ಬೆಳೆ ಹಾನಿ ಹಾಗೂ ವಿಮೆಯ ಮಾಹಿತಿಯನ್ನು ಮೇಲಾಧಿಕಾರಿಗೆ ತಿಳಿಸುವ ಕಾರ್ಯ ಮಾಡುತ್ತೇವೆ ಎಂದರು.ಈ ಸಂದರ್ಭದಲ್ಲಿ ರೈತರಾದ ಬಾಹುಬಲಿ ಧರಣಿಪ್ಪನವರ, ಕಾಂತಪ್ಪ ಕೂಳೂರು, ತಿಪ್ಪಣ್ಣ ಸುಣಗಾರ, ಬಾಬುಲಾಲ್ ತಡಸ, ಹನುಮಂತಪ್ಪ ಶ್ಯಾಡಂಬಿ, ಶಿವಪುತ್ರಯ್ಯ ಪೂಜಾರ, ಮಹಾಂತೇಶ್ ಹುರಳಿಕುಪ್ಪಿ, ಸಂಗಪ್ಪ ಹರಕುಣಿ, ಈರಪ್ಪ ಬೆಂಡಲಗಟ್ಟಿ, ಶಿವಾನಂದ ಜಡಿಮಠ, ಕಲ್ಲಪ್ಪ ಬಿರೊಳ್ಳಿ, ನಿಂಗಪ್ಪ ದೊಡ್ಡಮನಿ, ಡಾಕಪ್ಪಾ ಲಮಾಣಿ, ಈರಣ್ಣ ಮಾಳೋಜಿನವರ್, ದಣಪಾಲ ಕೊಳುರ ಇತರರು ಇದ್ದರು.

Share this article