ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದ ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ

KannadaprabhaNewsNetwork |  
Published : Oct 25, 2024, 01:05 AM IST
ಬಾಕಿ ಉಳಿದಿದ್ದ ಅದಿರು.(ಸಂಗ್ರಹ ಚಿತ್ರ) | Kannada Prabha

ಸಾರಾಂಶ

ಅಕ್ರಮ ಅದಿರು ನಾಪತ್ತೆ ಪ್ರಕರಣದಲ್ಲಿ ಅಂದು ಸಚಿವರಾಗಿದ್ದ ಆನಂದ ಸಿಂಗ್ ಶಾಸಕರಾಗಿದ್ದ ಸತೀಶ ಸೈಲ್, ಜನಾರ್ದನ ರೆಡ್ಡಿ, ನಾಗೇಂದ್ರ ಸೇರಿದಂತೆ ಅಧಿಕಾರಿಗಳು ಸೇರಿದಂತೆ ಒಟ್ಟು 11 ಆರೋಪಿತರನ್ನು ಜೈಲಿಗೆ ಕಳುಹಿಸಿತ್ತು. ಒಂದೂವರೆ ವರ್ಷಗಳ ಬಳಿಕ ಜಾಮೀನಿನ ಮೇಲೆ ಈ ಆರೋಪಿಗಳು ಬಿಡುಗಡೆಯಾಗಿದ್ದು. ಜನಾರ್ದನ ರೆಡ್ಡಿ 3 ವರ್ಷಗಳ ನಂತರ ಬಿಡುಗಡೆಯಾಗಿದ್ದನ್ನು ಸ್ಮರಿಸಬಹುದು.

ರಾಘು ಕಾಕರಮಠ

ಅಂಕೋಲಾ: ಜಾಗತಿಕ ಮಟ್ಟದಲ್ಲಿ ಕಪ್ಪುಚುಕ್ಕೆಯಾಗಿ ಗಮನ ಸೆಳೆದ ತಾಲೂಕಿನ ಬೇಲೆಕೇರಿ ಬಂದರಿನಲ್ಲಿ ₹250 ಕೋಟಿ ಮೌಲ್ಯದ ಅಕ್ರಮ ಅದಿರು ನಾಪತ್ತೆ ಪ್ರಕರಣಕ್ಕೆ 14 ವರ್ಷಗಳ ನಂತರ ತೀರ್ಪಿನ ಬಾಗಿಲು ತೆರೆದಿದೆ.

ಬಳ್ಳಾರಿ, ಹೊಸಪೇಟೆ, ಸಂಡೂರು, ಹಾಗೂ ಚಿತ್ರದುರ್ಗ ಅರಣ್ಯ ಪ್ರದೇಶಗಳಿಂದ ಅಕ್ರಮವಾಗಿ ಕಬ್ಬಿಣದ ಅದಿರು ಬೇಲೆಕೇರಿ ಬಂದರಿನಿಂದ ವಿದೇಶಕ್ಕೆ ರಫ್ತಾಗುತ್ತಿದೆ ಎಂದು ಮಾಹಿತಿ ಪಡೆದ ಅರಣ್ಯ ಇಲಾಖೆ 2009ರ ಮಾ. 20ರಂದು ₹350 ಕೋಟಿ ಮೌಲ್ಯದ 8.5 ಲಕ್ಷ ಮೆಟ್ರಿಕ್ ಟನ್ ಅದಿರನ್ನು ವಶಪಡಿಸಿಕೊಂಡಿತ್ತು.

ಈ ಅದಿರನ್ನು ಕಾಯ್ದುಕೊಳ್ಳುವಂತೆ ಬಂದರು ಇಲಾಖೆಗೆ ವಹಿಸಿತ್ತು. ಅದೇ ವರ್ಷ ಜೂ. 2ರಂದು ವಶಪಡಿಸಿಕೊಂಡ ಅದಿರನ್ನು ಅರಣ್ಯ ಇಲಾಖೆಯು ಮತ್ತೆ ಮೌಲ್ಯಮಾಪನ ನಡೆಸಿದಾಗ ಕೇವಲ 2 ಲಕ್ಷ ಮೆಟ್ರಿಕ್ ಟನ್ ಅದಿರು ಉಳಿದಿತ್ತು. ಇನ್ನುಳಿದ (250 ಕೋಟಿ ಮೌಲ್ಯದ) ಅದಿರು ನಾಪತ್ತೆಯಾಗಿದೆ ಎಂದು ಬಂದರು ಅಧಿಕಾರಿ ಹಾಗೂ ಅದಿರು ಕಂಪನಿಗಳ ಮೇಲೆ ಅರಣ್ಯ ಇಲಾಖೆ ದೂರು ದಾಖಲಿಸಿತ್ತು.

ಪ್ರಕರಣ ಸಿಐಡಿಗೆ: ಈ ನಡುವೆ ಲೋಕಾಯುಕ್ತ ಅಕ್ರಮವೆಸಗಿದ ಕಂಪನಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ವರದಿ ಸಲ್ಲಿಸಿ ಸರ್ಕಾರಕ್ಕೆ ಒತ್ತಾಯಿಸಿತ್ತು. ಲೋಕಾಯುಕ್ತ ವರದಿಯಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ನಷ್ಟವಾಗಿರುವುದು ಬೆಳಕಿಗೆ ಬಂದಿತ್ತು. ಆದರೆ ಸರ್ಕಾರ ಲೋಕಾಯುಕ್ತರ ವರದಿಗೆ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ ಮತ್ತು ಪ್ರಾಮಾಣಿಕ ಅಧಿಕಾರಿ ಡಿಎಫ್‌ಒ ಆರ್. ಗೋಕುಲ ಅವರ ಅಮಾನತ್ತಿಗೆ ಮುಂದಾಗಿತ್ತು. ಇದರಿಂದ ಬೇಸತ್ತ ಲೋಕಾಯುಕ್ತ ನ್ಯಾ. ಸಂತೋಷ ಹೆಗ್ಡೆ ಅವರು ಬೇಲೆಕೇರಿ ಅಕ್ರಮ ಅದಿರು ಪ್ರಕರಣವನ್ನೇ ಪ್ರಮುಖವಾಗಿಟ್ಟುಕೊಂಡು ರಾಜೀನಾಮೆ ನೀಡಿದ್ದರು.

ಈ ಸಂಬಂಧ ಲೋಕಾಯುಕ್ತರ ರಾಜೀನಾಮೆ ವಾಪಸ್‌ ಪಡೆಯುವಂತೆ ಮಾಡಲು ಹರಸಾಹಸ ಮಾಡಿತ್ತು. ಜತೆಗೆ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅಕ್ರಮ ಅದಿರು ನಾಪತ್ತೆ ಪ್ರಕರಣದ ಸಮಗ್ರ ತನಿಖೆಯನ್ನು ಸಿಐಡಿಗೆ 2010ರ ಜೂ. 23ರಂದು ವಹಿಸಿದ್ದರು.

ಸಿಐಡಿಯಿಂದ ತನಿಖೆ: ಸಿಐಡಿ ತನಿಖೆ ಆರಂಭಿಸಿದಾಗ 11 ಕಂಪನಿ ಹಾಗೂ ಓರ್ವ ಅಧಿಕಾರಿ ಮಾತ್ರ ಪ್ರಕರಣದಲ್ಲಿ ಕಾಣಿಸಿಕೊಂಡಿದ್ದರು. ಹಂತ- ಹಂತವಾಗಿ ತನಿಖೆ ಸಾಗುತ್ತಾ ಅದಿರು ನಾಪತ್ತೆ ಪ್ರಕರಣದಲ್ಲಿ ಕೇವಲ 11 ಕಂಪನಿಗಳು ಅಷ್ಟೇ ಶಾಮೀಲಾಗಿಲ್ಲ, ಇನ್ನೂ ಹೆಚ್ಚುವರಿಯಾಗಿ 45 ಕಂಪನಿಗಳು ಈ ಅಕ್ರಮದಲ್ಲಿ ಪಾಲ್ಗೊಂಡಿದೆ ಎಂದು ಪ್ರಾಥಮಿಕ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿತ್ತು.

ಸಿಐಡಿ ಎಸ್ಪಿ ಕೆ.ಪಿ. ಭೀಮಯ್ಯ, ಡಿವೈಎಸ್‌ಪಿ ಮುದ್ದು ಮಹಾದೇವಯ್ಯ ನೇತೃತ್ವದ ತಂಡ ಅದಿರು ನಾಪತ್ತೆ ಪ್ರಕರಣದ ಜಿಲ್ಲಾ ಸ್ಥಾನಿಕ ತನಿಖಾಧಿಕಾರಿಗಳಾಗಿ ತನಿಖೆ ಕೈಗೆತ್ತಿಕೊಂಡರು. ಹಾಗೆ ಅಂಕೋಲಾ ತಾಲೂಕಿನ ವ್ಯಾಪ್ತಿಯ ಅಂದಿನ ಸಿಪಿಐ ಶಿವಾನಂದ ಚಲವಾದಿ ಅವರಿಂದ ಪ್ರಕರಣದ ಹೆಚ್ಚಿನ ಮಾಹಿತಿ ಹಾಗೂ ಕಡತಗಳನ್ನು ಪಡೆದುಕೊಂಡಿದ್ದರು.ಎಂಟ್ರಿ ಕೊಟ್ಟ ಸಿಇಸಿ: ಸಿಐಡಿ ತನಿಖೆ ನಡೆಸುತ್ತಿರುವಾಗಲೆ ಸಿಇಸಿ ಎಂಟ್ರಿ ಪ್ರತ್ಯೇಕ ತನಿಖೆ ನಡೆಸಿತ್ತು. ಸಿಐಡಿ ನಡೆಸಿದ ತನಿಖೆಯಲ್ಲಿ ಸಮರ್ಪಕವಾಗಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಸಿಇಸಿ ಅದಿರು ನಾಪತ್ತೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಸಿಇಸಿ ಸುಪ್ರೀಂ ಕೋರ್ಟ್‌ಗೆ 2011ರ ಏ. 23ರಂದು ಶಿಫಾರಸು ಮಾಡಿದ ಹಿನ್ನೆಲೆ ಸುಪ್ರೀಂ ಕೋರ್ಟ್‌ ಸಿಬಿಐಗೆ ವಹಿಸಿತ್ತು.ಸಿಇಸಿ ವರದಿ ಸ್ವೀಕರಿಸಿದ ಸುಪ್ರೀಂ ಕೋರ್ಟ್‌ 2011ರ ಅ. 3ರಂದು ಪ್ರಕರಣವನ್ನು ಸಿಬಿಐಗೆ ನೀಡಬೇಕೆ? ಬೇಡವೇ? ಎಂಬ ವಾದದ ವಿಚಾರಣೆ ನಡೆಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಸಮಗ್ರವಾಗಿ ಪೂರಕ ವರದಿ ನೀಡುವಂತೆ ಸಿಇಸಿಗೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿತ್ತು. 2011ರ ಸೆ. 6ರಂದು ಸಿಇಸಿ ಸದಸ್ಯ ಜೀವರಾಜ್ ಷಾ ವರದಿ ನೀಡಿದ್ದರು. 2011 ಸೆ. 7ರಂದು ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್‌ ಪ್ರಕರಣದ ಗಂಭೀರತೆ ಅರಿತು ಸಿಬಿಐಗೆ ನೀಡಿತ್ತು.ಜೈಲಿಗೆ ಹೋಗಿದ್ದ 11 ಆರೋಪಿಗಳು

ಅಕ್ರಮ ಅದಿರು ನಾಪತ್ತೆ ಪ್ರಕರಣದಲ್ಲಿ ಅಂದು ಸಚಿವರಾಗಿದ್ದ ಆನಂದ ಸಿಂಗ್ ಶಾಸಕರಾಗಿದ್ದ ಸತೀಶ ಸೈಲ್, ಜನಾರ್ದನ ರೆಡ್ಡಿ, ನಾಗೇಂದ್ರ ಸೇರಿದಂತೆ ಅಧಿಕಾರಿಗಳು ಸೇರಿದಂತೆ ಒಟ್ಟು 11 ಆರೋಪಿತರನ್ನು ಜೈಲಿಗೆ ಕಳುಹಿಸಿತ್ತು. ಒಂದೂವರೆ ವರ್ಷಗಳ ಬಳಿಕ ಜಾಮೀನಿನ ಮೇಲೆ ಈ ಆರೋಪಿಗಳು ಬಿಡುಗಡೆಯಾಗಿದ್ದು. ಇದರು ಜನಾರ್ದನ ರೆಡ್ಡಿ 3 ವರ್ಷಗಳ ನಂತರ ಬಿಡುಗಡೆಯಾಗಿದ್ದನ್ನು ಸ್ಮರಿಸಬಹುದು.6.5 ಲಕ್ಷ ಮೆ. ಟನ್‌ ಅದಿರು ನಾಪತ್ತೆಅದಿರು ವಶಪಡಿಸಿಕೊಂಡ ಸಂದರ್ಭದಲ್ಲಿ ಅದಾನಿ ಎಂಟರ್‌ಪ್ರೈಸಸ್ ಕಂಪನಿಯ ಜಾಗದಲ್ಲಿ 31 ರಫ್ತುದಾರ ಕಂಪನಿಗಳ ಅದಿರಿನ ಗುಡ್ಡ ಮತ್ತು 3 ಕಚ್ಚಾ ಅದಿರಿನ ಗುಡ್ಡ ಸೇರಿ 34 ಗುಡ್ಡ ಇತ್ತು. ಶಾಸಕ ಸತೀಶ ಸೈಲ್‌ ಮಾಲೀಕತ್ವದ ಮಲ್ಲಿಕಾರ್ಜುನ ಶಿಪಿಂಗ್ ಕಂಪನಿಯ ಜಾಗದಲ್ಲಿ 16 ರಫ್ತುದಾರ ಕಂಪನಿಗೆ ಸೇರಿದ 16 ಗುಡ್ಡ, ಸಾಲಗಾಂವಕರ ಮೈನಿಂಗ್ ಜಾಗಕ್ಕೆ ಸೇರಿದ ಜಾಗದಲ್ಲಿ 4 ರಪ್ತು ಕಂಪನಿಯ 4 ಗುಡ್ಡ ಮತ್ತು ರಾಜ್‌ಮಹಲ್‌ ಸಿಲ್ಕ್‌ ಜಾಗದಲ್ಲಿ 2 ಕಬ್ಬಿಣದ ಗುಡ್ಡಗಳು ಇದ್ದವು. ಆದರೆ ಅದಿರು ವಶಪಡಿಸಿಕೊಂಡ ಮಾ. 20ರಿಂದ ಮೇ 31ರ ಒಳಗೆ ಈ ಕಂಪನಿಗಳು ನ್ಯಾಯಾಲಯದ ಅನುಮತಿ ಪಡೆದು ಬಹುತೇಕ ಅದಿರನ್ನು ರಫ್ತು ಮಾಡಿದ್ದವು. ಅಂತಿಮವಾಗಿ ಸಿಐಡಿ ತಂಡ ಪರಿಶೀಲಿಸಿದಾಗ 8.5 ಲಕ್ಷ ಮೆ. ಟನ್ ಅದಿರಿನಲ್ಲಿ ಕೇವಲ 2 ಲಕ್ಷ ಮೆ. ಟನ್ ಅದಿರು ಉಳಿದುಕೊಂಡಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ