ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಕಿರಂಗೂರು ಗ್ರಾಮದ ಬಳಿಯ ಸಿಡಿಎಸ್ ನಾಲಾ ಏರಿ ದುರಸ್ಥಿ, ರಸ್ತೆ ಒತ್ತುವರಿ ತೆರವುಗೊಳಿಸುವಂತೆ ಕಳೆದ ಮೂರು ದಿನಗಳಿಂದ ಪಟ್ಟಣದಲ್ಲಿ ರೈತ ದರಸಗುಪ್ಪೆ ಪ್ರಭಾಕರ್ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ವಿವಿಧ ಸಂಘಟನೆಗಳ ಮುಖಂಡರು ಬುಧವಾರ ಪಾಲ್ಗೊಂಡು ಬೆಂಬಲ ಸೂಚಿಸಿದರು.ಪಟ್ಟಣದ ತಾಲೂಕು ಕಚೇರಿ ಮುಂಭಾಗ ಏಕಾಂಗಿಯಾಗಿ ಪ್ರಭಾಕಾರ್ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿ ಹಿಂದು ಜಾಗರಣೆ ವೇದಿಕೆ ಸಂಚಾಲಕ ಚಂದನ್, ಮಂಡ್ಯ ರಕ್ಷಣಾ ವೇದಿಕೆ ಅಧ್ಯಕ್ಷ ಶಂಕರ್ ಬಾಬು, ವಿಕಲಚೇತನ ಸಂಘ, ರೈತ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿ ಸಮಸ್ಯೆ ಬಗೆ ಹರಿಸುವಂತೆ ಒತ್ತಾಯಿಸಿದರು.
ಗ್ರಾಮದ ನಾಲಾ ಏರಿಗೆ ಸೇರಿದ ಸರ್ಕಾರಿ ಖರಾಬು ಮತ್ತು ವಿತರಣಾ ನಾಲೆಯ ಸಂಪರ್ಕ ರಸ್ತೆ ಒತ್ತುವರಿ ತೆರವುಗೊಳಿಸುವಂತೆ ಒತ್ತಾಯಿಸಿದ್ದ ನನ್ನ ಮೇಲೆ ಹಲ್ಲೆ ನಡೆದಿದೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜವಾಗಿಲ್ಲ. ನನಗೆ ನ್ಯಾಯ ಸಿಗುವ ತನಕ ಇಲ್ಲಿಂದ ಕದಲುವುದಿಲ್ಲ ಎಂದು ರೈತ ಪ್ರಭಾಕರ್ ತಿಳಿಸಿದರು.ನೂತನ ಡಿವೈಎಸ್ಪಿ ಶಾಂತಮಲ್ಲಪ್ಪಗೆ ಅಭಿನಂದನೆ
ಶ್ರೀರಂಗಪಟ್ಟಣ:ನೂತನ ಡಿವೈಎಸ್ಪಿಯಾಗಿ ಅಧಿಕಾರಿ ವಹಿಸಿಕೊಂಡ ಶಾಂತ ಮಲ್ಲಪ್ಪ ಅವರನ್ನು ಮಂಡ್ಯ ರಕ್ಷಣಾ ವೇದಿಕೆಯಿಂದ ಅಭಿನಂದಿಸಿದರು.
ಪಟ್ಟಣದ ಪೊಲೀಸ್ ಠಾಣೆ ಕಚೇರಿಗೆ ವೇದಿಕೆ ಅಧ್ಯಕ್ಷ ಶಂಕರ್ ಬಾಬು ನೇತೃತ್ವದಲ್ಲಿ ಕಾರ್ಯಕರ್ತರು ತೆರಳಿ ಶಾಂತಮಲ್ಲಪ್ಪರನ್ನು ಅಭಿನಂದಿಸಿದರು.ಈ ವೇಳೆ ಮಾತನಾಡಿದ ಶಂಕರಬಾಬು, ಮೈಸೂರು-ಬೆಂಗಳೂರು ಹೆದ್ಧಾರಿ ಮುಖ್ಯ ರಸ್ತೆ ಹಾಗೂ ತಾಲೂಕಿನ ಬಾಬುರಾಯನ ಕೊಪ್ಪಲು ಬಳಿಯ ವೃತ್ತಗಳಲ್ಲಿ ವಾಹನಗಳ ದಟ್ಟಣೆ ಹಾಗೂ ಸಿಗ್ನಲ್ ಇಲ್ಲದ ಕಾರಣ ಸಾರ್ವಜನಿಕರು ಹೆದ್ದಾರಿ ದಾಟಲು ತುಂಬಾ ತೊಂದರೆ ಅನುಭಸುತ್ತಿದ್ದಾರೆ. ಈ ಸಂಬಂಧ ಸಿಗ್ನಲ್ ದೀಪಗಳನ್ನು ಅಳವಡಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಹಲವು ವರ್ಷಗಳ ಈ ಸಮಸ್ಯೆಯನ್ನ ಬಗೆಹರಿಸುವಂತೆ ಇದೇ ವೇಳೆ ಒತ್ತಾಯಿಸಿದರು.