ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಇದು ಆನ್‍ಲೈನ್ ಯುಗ, ದಿನಕ್ಕೊಂದು ರೀತಿಯ ತಂತ್ರಗಳನ್ನು ಬಳಸಿ ಸೈಬರ್ ವಂಚಕರು ಕನ್ನ ಹಾಕುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಆದರೆ ಇಲ್ಲಿ 8ನೇ ತರಗತಿ ಓದಿದ ಐನಾತಿ ಅಸಾಮಿಯೊಬ್ಬ ತಾನು ಲೋಕಾಯುಕ್ತ ಅಧಿಕಾರಿ ಅಂತ ಹೇಳಿಕೊಂಡು ಮಹಿಳಾ ಅಧಿಕಾರಿಯನ್ನೇ ಬ್ಲ್ಯಾಕ್‌ಮೇಲ್ ಮಾಡಿದ್ದಾನೆ. ಸದ್ಯ ಗ್ರಹಚಾರ ಕೆಟ್ಟು ಈಗ ಚಿಕ್ಕಬಳ್ಳಾಪುರ ಪೊಲೀಸರ ಅತಿಥಿಯಾಗಿಯಾಗಿದ್ದಾನೆ. ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಚಿರುವುಮುನೆಪ್ಪಗಾರಿಪಲ್ಲಿ ಗ್ರಾಮದ ನಿವಾಸಿ ಚನ್ನಕೇಶವ ರೆಡ್ಡಿ (24) ಬಂಧಿತ ಆರೋಪಿ.ಜಿಲ್ಲೆಯ ಗೌರಿಬಿದನೂರು ನಗರಸಭೆಯ ಪೌರಾಯುಕ್ತೆ ಡಿ.ಎಂ.ಗೀತಾ ಅವರ ಮೊಬೈಲ್ ನಂಬರ್‌ಗೆ ಕಳೆದ ವರ್ಷದ ಜೂನ್ ತಿಂಗಳಲ್ಲಿ ಕರೆ ಮಾಡಿರುವ ಈತನು, ತಾನು ಬೆಂಗಳೂರು ಲೋಕಾಯುಕ್ತ ಸಂಸ್ಥೆಯ ಅಧಿಕಾರಿ, ನಿಮ್ಮ ನಗರಸಭೆಯಲ್ಲಿ ಲಕ್ಷಾಂತರ ರುಪಾಯಿ ಅವ್ಯವಹಾರ ಮಾಡಿದ್ದೀರಿ, ನಿಮ್ಮ ಮೇಲೆ ಲೋಕಾಯುಕ್ತ ಕೇಂದ್ರ ಕಚೇರಿಗೆ ದೂರು ಬಂದಿದೆ. ನಿಮ್ಮ ಕಚೇರಿ ಮೇಲೆ ರೇಡ್ ಮಾಡುತ್ತೇವೆ ಎಂದು ಹೆದರಿಸಿದ್ದನು. ರೇಡ್ ಮಾಡಬಾರದು ಅಂದ್ರೆ ನಾವು ಹೇಳಿದಷ್ಟು ದುಡ್ಡನ್ನು ಇನ್ನು ಅರ್ಧ ಗಂಟೆಯಲ್ಲಿ ಕೊಡಬೇಕು ಎಂದು ಬ್ಲ್ಯಾಕ್‌ಮೇಲ್ ಮಾಡಿದ್ದನು. ವಂಚಕನ ಮಾತುಗಳಿಗೆ ಹೆದರದ ಪೌರಾಯುಕ್ತೆ ಡಿ.ಎಂ.ಗೀತಾ ಅವರು, ಜಿಲ್ಲಾ ಲೋಕಾಯುಕ್ತ ಎಸ್ ಪಿಯೊಂದಿಗೆ ಮಾತನಾಡಿ, ಗೌರಿಬಿದನೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು 10 ತಿಂಗಳ ನಂತರ ಆರೋಪಿ ಚನ್ನಕೇಶವರೆಡ್ಡಿಯನ್ನು ಬಂಧಿಸಿದ್ದಾರೆ.
ಈ ಕಿಲಾಡಿ ನಕಲಿ ಆಫೀಸರ್ ಚನ್ನಕೇಶವ ರೆಡ್ಡಿ ಓದಿರುವುದು ಬರೀ 8ನೇ ಕ್ಲಾಸ್. ಆಂಧ್ರಪ್ರದೇಶ ಬಿಟ್ಟು ಬಂದು ಕರ್ನಾಟಕದ ಬೆಂಗಳೂರಿನಲ್ಲೇ ಬಿಡಾರ ಹೂಡಿದ್ದ, ರಾಜ್ಯದ ವಿವಿಧೆಡೆಗಳಲ್ಲಿ ಬೇರೆ ಬೇರೆ ಅಧಿಕಾರಿಗಳಿಗೆ ಇದೇ ರೀತಿ ಬ್ಲ್ಯಾಕ್‌ಮೇಲ್ ಮಾಡಿ ಹಣ ಮಾಡುವ ದಂಧೆ ಮಾಡಿಕೊಂಡಿರುವುದು ಪೊಲೀಸರ ವಿಚಾರಣೆ ವೇಳೆ ಗೊತ್ತಾಗಿದೆ. ಈತನ ಜೊತೆ ಮತ್ತೋರ್ವ ಆರೋಪಿ ಧನುಷ್ ರೆಡ್ಡಿ ಸಹ ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದು, ಆತನಿಗಾಗಿಯೂ ಪೊಲೀಸರು ಹುಡಕಾಟ ನಡೆಸಿದ್ದಾರೆ.ಅಸಲಿಗೆ ಈ ಕಿಲಾಡಿಗಳು ಯಾರದ್ದೋ ಹೆಸರಿನಲ್ಲಿ ಸಿಮ್ ಕಾರ್ಡ್ ಪಡೆದು ಆ ನಂಬರಿನಿಂದ ಅಧಿಕಾರಿಗಳನ್ನು ಹೆದರಿಸುತ್ತಿದ್ದರಂತೆ. ಒಂದು ಸಿಮ್ ನಿಂದ ಒಬ್ಬ ಅಧಿಕಾರಿಗೆ ಕರೆ ಮಾಡಿದರೆ, ಮತ್ತೊಬ್ಬರಿಗೆ ಆ ಸಿಮ್ ಕಾರ್ಡ್ ಬಳಸುತ್ತಿರಲಿಲ್ಲವಂತೆ. ಹಾಗಾಗಿ ಆರೋಪಿಯನ್ನು ಹಿಡಿಯುವುದೇ ಪೊಲೀಸರಿಗೆ ಸವಾಲಾಗಿತ್ತು. ಆದರೂ ಪಟ್ಟು ಬಿಡದ ಪೊಲೀಸರು ನಕಲಿ ಲೋಕಾಯುಕ್ತ ಅಧಿಕಾರಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.